ನೆರಳು-ಮೌನಗಳ ನಡುವೆ ನಾಳೆಯ ಪರದೆಯಾಟ

November 19, 2009

rnfll

 

ನೆರಳು
ನಸು ಬೆಳಕಿನಲ್ಲಿ
ಜೊತೆಗೂಡಿ ವಯ್ಯಾರವಾಗಿ ನಡೆದವಳು
ಕಡುಗತ್ತಲಿನಲ್ಲಿ
ಹಿಂತಿರುಗಿಯೂ ನೋಡದೆ ಹೊರಟು ಹೋದಳವಳು.

ಮೌನ
ತಿಳಿಯದೆ ಮಾಡಿದ ತಪ್ಪಿಗೆ
ಅವನು ನೀಡಿರುವ ಉಡುಗೊರೆ

ನಾಳೆ
ನೆನಪುಗಳ ಆಗರ
ಕನಸುಗಳ ಮಂದಿರ

ಪರದೆಯಾಟ
ನೇಸರನು ಭೂಮಿಗೆಲ್ಲಾ
ತನ್ನ ಬೆಳಕಿನ ಅಭಿಷೇಕವ ಮಾಡುವಾಗ
ಚುಕ್ಕಿಗಳ ಮೈ ಮೇಲೆ
ತೆಳುವಾದ ಹೊದಿಕೆಯನ್ನು ಹೊದಿಸಿದ್ದ,
ಅಭಿಷೇಕದ ನಂತರ ಭೂಮಿಯು
ಬೆಳದಿಂಗಳ ಬೆಳಕಿನಲ್ಲಿ
ಹೊಳೆಯುವುದನ್ನು ನೋಡಲೆಂದೇ
ಚುಕ್ಕಿಗಳ ಮೇಲಿನ ಹೊದಿಕೆಯ ಸರಿಸಿದ.

ಕರಗಿ ಹೋದದ್ದು

November 3, 2009

CAI10VSN

ನಾಚಿಕೆ
ಅಂದು ನಿನ್ನ ಮೊಗದಲ್ಲಿ
ನಗುವ ಕಂಡು
ಚಂದಿರನು ಸಾಗರದಲ್ಲಿ
ಕರಗಿಹೋದನು.

ಅಂತ್ಯ
ನೀನು ಹೋದ ಮರುಘಳಿಗೆಯೇ
ನನ್ನ ಪೆನ್ನು-ಪೇಪರ್
ಮೌನ ರಾಗದಲ್ಲಿ ಕರಗಿ ಹೋಯಿತು.

ಕುರುಡು
ಅವನು ಅಷ್ಟೂ ವಸಂತಗಳು
ನನ್ನೊಡನಿದ್ದನೆಂಬ ಭ್ರಮೆಯಲ್ಲಿ ಅವಿತು
ಅವನೊಡನೆ ಸುಂದರ ಭವಿಷ್ಯವ ಕೆತ್ತುವುದು.

ಮುಗ್ಧತೆ
ತನ್ನ ಪ್ರೀತಿಯ ತಾತ
ಸತ್ತಿದ್ದರೂ…
ಎಂದಿನಂತೆ ಅಂಗಳದಲ್ಲಿ ಆಡುತ್ತಿದ್ದಾರೆ
ಮೊಮ್ಮಕ್ಕಳು.

ಮೌನ ಸಂಭಾಷಣೆ
ಕಲ-ರವ ಸದ್ದಿನೊಡನೆ
ಝೇಂಕರಿಸುತ ಹರಿವ ಝರಿಯನ್ನು
ನೋಡುತ್ತಲೇ…..
ಅವಳು ತನ್ನ ನೋವನ್ನೆಲ್ಲಾ
ಮರೆತಬಿಟ್ಟಳು.

ಅವನ ಪತ್ರ
ಎಷ್ಟು ಕಾಡಿ ಬೇಡಿದರೂ
ಬರೆಯದವ ನೀನು…
ನನ್ನ ಮದುವೆಯ ದಿನ
ಬರೆದು ಕಳಿಸಿದ್ದಾದರೂ ಏತಕೆ?

39-melt-down-gianni-tozzi-uk-thumb

ಇರುಳಲ್ಲಿ ಅರಳಿದ್ದು

October 14, 2009

ಪ್ರೀತಿಯ ಓದುಗರೇ,

ಮೊದಲ ಬಾರಿಗೆ ಸ್ವಲ್ಪ different ಆಗಿ ಹನಿಗಳು ಬರೆಯೋ ಆಸೆಯಾಗಿ ಈ ಪ್ರಯತ್ನಕ್ಕೆ ಕೈ ಹಾಕಿದ್ದೇನೆ,  ಸುಳಿವೇ ಇಲ್ಲದೆ ಮನಸ್ಸಿನಿಂದ ನೇರವಾಗಿ ಪೇಪರ್ ಮೇಲೆ ಬಂದು ಇಳಿದ ಹನಿಗಳಿವು… ಚೆನ್ನಾಗಿದ್ದರೆ/ತಪ್ಪಿದ್ದರೆ ದಯಮಾಡಿ ತಿಳಿಸಿ…ಮುಂದೆ ಇನ್ನು ಚೆನ್ನಾಗಿ ಬರೆಯಲು ಪ್ರಯತ್ನಿಸುತ್ತೇನೆ….

808890-FB

ದೀಪ
ಹೊರಾಂಗಣವ ಅರಳಿಸಿ
ತನ್ನ ಆಂತರ್ಯದೊಳಗೆ ತನಗೇ
ಅರಿತೂ ಅರಿಯದಂತೆ ಅಡಗಿ ಹೋಯಿತು

ಮಳೆ
ಅವಳ ನೆನಪುಗಳನ್ನು
ತಡೆಯಲಾರದೆ ಪದೇ-ಪದೇ
ದಡಕ್ಕೆ ಬಂದು ಎಸೆದು ಹೋಗುವ
ಅಲೆಗಳ ಸ್ನಿಗ್ಢ ಪರಿಸ್ಥಿತಿ.

ನಂಬಿಕೆ

ಅಂದು ಮಗನ ಕೊನೆಯ Train ಮಿಸ್ಸಾದರೂ
ಅವ ಬಂದೇ ಬರುವನೆಂದು
ಮನೆ ಬಾಗಿಲಿಗೆ ತೋರಣವ ಕಟ್ಟಿ
ಆರತಿ ಹಿಡಿದು ನಿಂದಿಹಳು.

ಹೃದಯಾಂತರಾಳ
ನಿನ್ನ ಕಂಡ ಕ್ಷಣದಿಂದಲೂ
ರಾಶಿ-ರಾಶಿಯಾಗಿ ಗುಲಾಬಿ
ಹೂಗಳು ಅರಳಿಬಿಟ್ಟಿವೆ.

ಪೈಪೋಟಿ
ಹನಿಗಳು ಬರೆಯಲೆಂದು
ಕುಳಿತಾಕ್ಷಣ
ಹೊರಗಡೆ ಮಳೆ ಹನಿಗಳು
ಶುರುವಾಗಿಬಿಡೋದೆ????

ಕಾಮನಬಿಲ್ಲು
ರವಿಯು ತೋರಿಸಿದ
ಕೋಪವನ್ನುತಾಳಲಾರದೆ
ಮೇಘಗಳು ಕಣ್ಣೀರ ಧಾರೆಯನ್ನೇ
ಭುವಿಗೆ ಹರಿಸಿದಾಗ..
ಅವುಗಳನ್ನು ಸಂತೈಸಲೆಂದೇ ಮೂಡಿತು
ಆಕಾಶದಲ್ಲಿ ರಂಗು-ರಂಗಿನ ಚಿತ್ತಾರ!

ಅವಳ ಬೆಚ್ಚನೆಯ ನೆನಪು
ಚಳಿ ಎನ್ನುತ್ತಿದ್ದಂತೆ
ಮುತ್ತಿಟ್ಟು-ಅಪ್ಪಿ
ಕುಳಿತುಬಿಟ್ಟಳು.

ಚುಕ್ಕಿಗಳು
“ಮಕ್ಕಳಿರಲವ್ವ ಮನೆತುಂಬ”
ಎಂಬ ಸಾಲನ್ನು ಕೇಳುತ್ತಿದ್ದಂತೆಯೇ
ಬಾನು ಇಷ್ಟೊಂದು
ಮಕ್ಕಳನ್ನು ಹಡೆದುಬಿಟ್ಟಳು.

ನನ್ನವನು

ಮುತ್ತು ಕೊಡಬೇಕೆಂತಿದ್ದೆ
ಒಂದೂ ಬಿಡದೆ
ಎಲ್ಲಾ ಮುತ್ತುಗಳನ್ನು ಕದ್ದು ಬಿಟ್ಟ.

********

ನನ್ನ ಮೊದಲ ಕೆಲಸದ ಬಗ್ಗೆ ಒಂದಿಷ್ಟು ತುಂತುರು ಹನಿಗಳು

July 9, 2009

writing - pen

ಅಂದು ಏಪ್ರಿಲ್ ೧ನೇ ತಾರೀಖು, ನಾ ಮೊದಲ ಬಾರಿಗೆ ಕೆಲಸ ಮಾಡಲು ಕೆಲಸಕ್ಕೆ ಸೇರಿದ ದಿನ… ನನ್ನ ಕಾಲ ಮೇಲೆ ನಿಲ್ಲಲು ಅವಕಾಶ ಸಿಕ್ಕ ಮೊದಲ ದಿನ… ನಾನು ಒಂದು ಕಂಪ್ಯೂಟರ್ ಇನ್ಸ್ಟಿಟ್ಯೂಟ್ ನಲ್ಲಿ faculty ಆಗಿ ಕೆಲಸಕ್ಕೆ ಸೇರಿದೆ…ಹೊಸ ದಿನ, ಹೊಸ ಜಾಗ, ಮನಸ್ಲಲ್ಲಿ ಕಳವಳ.. ಆ ಸುತ್ತಮುತ್ತಲಿನ ಪರಿಸರ ..ಜನ ಹೇಗೆ ಇರುತ್ತಾರೋ, ಎಂದೆಲ್ಲಾ ನೂರೆಂಟು ಯೋಚನೆಗಳು ಕಾಡತೊಡಗಿತ್ತು… ಆದರೂ ಸಂತೋಷದಿಂದಲೇ ಬೆಳಿಗ್ಗೆ ಬೇಗನೆ ಎದ್ದು ದೇವರಿಗೆ ಕೈ ಮುಗಿದು ತಿಂಡಿ ತಿಂದು ಇನ್ಸ್ಟಿಟ್ಯೂಟ್ ಗೆ ತಂದೆಯಿಂದ drop ತೆಗೆದುಕೊಂಡೆ.. ಹೋದ ತಕ್ಷಣ ಒಬ್ಬ ಸರ್ ಅವರ ಪರಿಚಯ ಮಾಡಿಕೊಂಡು, ಅಲ್ಲಿನ ವಾರಸುದಾರರಿಗೆ ಕರೆ ಮಾಡಿ ನಾನು ಕೆಲಸಕ್ಕೆ ಬಂದಿರುವುದಾಗಿ ತಿಳಿಸಿದರು,ಆ ಸರ್ ಸಹಾ ನನಗೆ ಹಾರ್ಧಿಕವಾದ ಸ್ವಾಗತ ಕೋರಿ ಶುಭ ಹಾರೈಸಿದರು. ಮೊದಲಿಗೆ ಅಲ್ಲಿದ್ದ ನನ್ನ ಜೊತೆಗೆ ಕೆಲಸ ಮಾಡುವ ಇತರೆ facultyಯವರ ಪರಿಚಯ ಮಾಡಿಕೊಂಡೆ. ಅಂದು ಅವರಲ್ಲಿ ಒಬ್ಬರ ಹುಟ್ಟಿದಹಬ್ಬವಿದ್ದುದರಿಂದ ಅವರು ಎಲ್ಲರಿಗೂ ಸಿಹಿ ಹಂಚಿದರು..ಅಲ್ಲಿದ್ದ faculty ನನಗೆ ತುಂಬಾ ಸಹಕರಿಸಿ, ಎಲ್ಲಾ ಕೆಲಸಗಳ ಬಗ್ಗೆ ತಿಳಿ ಹೇಳಿದರು. ನಂತರ ಎಲ್ಲಾ ವಿದ್ಯಾರ್ಥಿಗಳ ಪರಿಚಯ ಮಾಡಿಕೊಳ್ಳುತ್ತಾ ಬಂದೆ.. ಹಾಗೂ ಮೊದಲ ಬಾರಿಗೆ ಕ್ಲಾಸ್ ತೆಗೆದುಕೊಂಡೆ.. ಅಂದು ತುಂಬಾ ಕಷ್ಟವಾದ ವಿಷಯವನ್ನೇ ಹೇಳಿಕೊಡಲು ನಮ್ಮ ಸರ್ ತಿಳಿಸಿದರು.ನಾನು ಧೈ ರ್ಯವಾಗಿ ಕ್ಲಾಸ್ ಮಾಡಿ ಮುಗಿಸಿದೆ.. ಬಂದು ಹೋಗುತ್ತಿದ್ದ ನನ್ನ ವಿದ್ಯಾರ್ಥಿಗಳು mam, ಮೇಡಮ್, ಅಕ್ಕ ಅಂತೆಲ್ಲಾ ವಿಧ-ವಿಧವಾಗಿ ಕರೆಯುತ್ತಿದ್ದರು.. ಅವರೆಲ್ಲರೂ ಹಾಗೆ ಕರೆಯುತ್ತಿದ್ದಾಗ ನನ್ನ ಸ್ಥಾನ ಅಲ್ಲಿ ಏನು ಎಂಬುದರ ಅರಿವು ಪದೇ-ಪದೇ ನನಗೆ ಆಗುತ್ತಿತ್ತು. ಕೆಲವರು ತೀರಾ ವಿನಮ್ರ ಭಾವದಿಂದ ಗುಡ್ ಮಾರ್ನಿಂಗ್ ಮೇಡಮ್ ಅಂದಾಗ ನನಗೆ ಒಂದು ತರಹ ಖುಷಿಯಾಗುತ್ತಿತ್ತು. ನನಗೆ ಎಷ್ಟು ಬೆಲೆಯಿದೆ ಇಲ್ಲಿ ಎಂದು ಅಂದುಕೊಳ್ಳುತ್ತಿದ್ದೆ…. (ಏಕೆಂದರೆ ಆಗ ತಾನೆ ಕಾಲೇಜು ಬಿಟ್ಟು ಹೊರಬಂದ ಸಮಯ.. ನಾನು ಬೇರೆಯವರಿಗೆ ಆತರಹದ ಗೌರವ ನೀಡುತ್ತಿದೆ,…ಆದರೆ ನನಗೆ ಆತರಹದ ಗೌರವ ಸಿಕ್ಕಿದ್ದು ಒಂದು ತರಹ ಹೊಸದಾಗಿ ಇತ್ತು..:) ).. “ಬರುವವರು ಬರುತ್ತಿದ್ದರು..ಹೋಗುವವರು ಹೋಗುತ್ತಿದ್ದರು..ಆದರೆ ನಾವು ಮಾತ್ರ ನಿಶ್ಚಲವಾಗಿದ್ದೆವು..” ನಮ್ಮ ಜೀವನವೂ ಹಾಗೆ ಅಲ್ಲವೇ??? ಮಧ್ಯಾಹ್ನ  ಊಟಕ್ಕೆ ಮನೆಗೆ ಬಂದು ಊಟ ಮುಗಿಸಿ ಮತ್ತೆ ಇನ್ಸ್ಟಿಟ್ಯೂಟ್ಗೆ  ಬಂದೆ…ಎಲ್ಲರೂ ತುಂಬಾ ಆತ್ಮೀಯತೆಯಿಂದ ಮಾತನಾಡಿಸಿದರು.. ನಮ್ಮ ಹುಟ್ಟಿದಹಬ್ಬದ ಹುಡುಗ(ಸರ್)…. part-T (party) ಕೊಡಿಸಿದರು.. ಎಷ್ಟೋ ಜನ ನನಗೆ ಅಲ್ಲಿ ಕೊಡುವ ಸಂಭಾವನೆ ಕಡಿಮೆಯೆಂದು, ಅಲ್ಲಿ ಕೆಲಸ ಮಾಡಬಾರದೆಂದು ಹೇಳಿದರು..ಆದರೆ ನನಗೆ ಮುಖ್ಯವಾಗಿ ಬೇಕಾಗಿದ್ದುದು ಕೆಲಸ, ಹಾಗು ಮನೆಯಲ್ಲಿ ಅನಾವಶ್ಯಕವಾಗಿ ಕಾಲಹರಣ ಮಾಡುವುದನ್ನು ತಡೆಯಲೇಬೇಕಿತ್ತು.. ಜೊತೆಗೆನನ್ನಲ್ಲಿರುವ ವಿದ್ಯೆಯನ್ನು ದಾನ ಮಾಡುವುದು ಶ್ರೇಷ್ಟವಾದ ಕೆಲಸ ಎಂದು ನನಗೆ ಕೊಡುವ ಸಂಭಾವನೆಗೆ ಬೆಲೆ ಕೊಡದೆಯೇ ಶ್ರದ್ದೆಯಿಟ್ಟು ಕೆಲಸ ಮಾಡಿದೆ. ಸಂಜೆ ಮನೆಗೆ ಬಂದಾಗ ಏನೋ ಉತ್ಸಾಹ ಉಲ್ಲಾಸವಿತ್ತು. ಮನೆಯಲ್ಲಿ ಎಲ್ಲರಿಗು ಅಂದಿನ ದಿನದ ಅನುಭವದ ಬಗ್ಗೆ ಹೇಳಿದೆ.ಮಾರನೆಯ ದಿನ ಕೆಲಸಕ್ಕೆ ಹೋಗಲು ಮನ ತುಡಿಯುತ್ತಿತ್ತು. ಒಂದೇ ದಿನಕ್ಕೆ ಆ ಪರಿಸರಕ್ಕೆ ಹೊಂದಿಕೊಂಡು ಬಿಟ್ಟಿದ್ದೆ. ಭವಿಷ್ಯದ ಬಗ್ಗ್ಗೆ ಆಸಕ್ತಿ ಮೂಡಿತ್ತು, ಆಸೆ ಹುಟ್ಟಿತ್ತು. ಆ ಸುಂದರ ಪ್ರಪಂಚದಲ್ಲಿ ಮಿನುಗಲು ನನಗೊಂದು ಅವಕಾಶ ಸಿಕ್ಕಿತ್ತು. ಇಂದಿಗೂ  ನನಗೆ ಇದೆ ಭಾವನೆಗಳಿವೆ..ನಾಳೆ ಮತ್ತೆ ಕೆಲಸಕ್ಕೆ ಹೋಗಲು ಕಾಯುತಿರುವೆ..ಇಂದಿಗೂ ಕಾಲೆಳೆಯುವವರಿದ್ದಾರೆ..ಆದರೆ ನಮ್ಮ ಇತಿ-ಮಿತಿಗಳಲ್ಲಿ ನಾವಿದ್ದು, ಶ್ರಮಪಟ್ಟು ನಮ್ಮ ಕೆಲಸಮಾಡಿಕೊಂಡು, ಇತರರೊಡನೆ ಸ್ನೇಹ ಭಾವದಿಂದ ಇದ್ದುಬಿಟ್ಟರೆ ಯಾರ ಮಾತು ಸಹಾ ನಮ್ಮನ್ನು ಕೊರೆಯಲಾರದು..

ಮತ್ತೆ ಇನ್ನೊದು ವಿಷಯ ಹೇಳುವುದು ಮರೆತೆ.. ನನಗೆ ನನ್ನ ವಿದ್ಯಾರ್ಥಿಯೊಬ್ಬಳು ಒಮ್ಮೆ ಅವರ ಮನೆಯಲ್ಲಿ ಅರಳಿದ್ದ ಗುಲಾಬಿ ಹೂವನ್ನು (ಪಿಂಕ್) ತಂದು ಕೊಟ್ಟಳು.. ಆಗ ನಿಜವಾಗಲೂ ನನಗೆ ನನ್ನ ಶಾಲೆಯ ನೆನಪಾಯಿತು..ಯಾಕೆಂದರೆ ನಾನು ಶಾಲೆಗೆ ಹೋಗುತ್ತಿದ್ದ ಸಮಯದಲ್ಲಿ ಮಾರ್ಕೆಟಿಗೆ ಬೇಕಂತಲೇ ಹೋಗಿ ಮೇಡಂಗೆ ಹೂ ತೆಗೆದುಕೊಂಡು ಹೋಗುತ್ತಿದ್ದೆ.. ಅದೇ ನೆನಪಿನ ಛಾಯೆ ಅಂದು ನನ್ನಲ್ಲಿ ಮೂಡಿತು..
ಹಾಗು ಕೆಲವರು ನನ್ನ “ನಗು”ವಿನ ಬಗ್ಗೆ ಕಾಮೆಂಟ್ ಮಾಡಿದರು..”ಮೇಡಂ ನೀವು ಸದಾ ನಗುತ್ತಲೇ ಸ್ವಾಗತ ಕೋರುತ್ತೀರಿ ಸದಾ ಹೀಗೆಯೇ ನಗುತ್ತಿರಿ …ನಿಮ್ಮ ನಗು ಚಂದ ” ಎಂದಿದ್ದರು..

ಒಬ್ಬ ವಿದ್ಯಾರ್ಥಿ ಅವರ ಕೋರ್ಸ್ ಮುಗಿಸಿ ಹೋದರೂ ಇನ್ನೂ ನನ್ನ ಬಗ್ಗೆ ವಿಚಾರಿಸಿಕೊಳ್ಳುತ್ತಿರುತ್ತಾರಂತೆ..
ಹೀಗೆ ಏನೆಲ್ಲಾ ಸಣ್ಣ-ಪುಟ್ಟ ವಿಷಯಗಳು ತುಂಬಾನೇ ಖುಷಿ ನೀಡುತ್ತದೆ.. ಏನೆಲ್ಲಾ ಅನುಭವಗಳಾಗುತ್ತದೆ.. ಕಹಿಗಿಂತಲೂ ಸಿಹಿಯೇ ಹೆಚ್ಚು ..ನಮಗೆ ನಾವು ಕೆಲಸ ಮಾಡುವ ಪರಿಸರ ಚೆನ್ನಾಗಿದ್ದಾರೆ ಎಷ್ಟು ನೆಮ್ಮದಿ ಸಿಗುತ್ತದೆಂದು ಅರಿವಾಯಿತು..ಅನುಭವವೂ ಆಯಿತು… ಎಲ್ಲಾ ಅನುಭವಗಳ ನಡುವೆ ಹೋಗುವ ಬರುವ ಜನರೊಡನೆ ಮಿಂದು ಅರಿತು..ಕೆಲವು ಸಿಹಿ ನೆನಪುಗಳ ನಿಮ್ಮೆಲ್ಲರ ಬಳಿ ಹಂಚಿಕೊಂಡೆ….ಸ್ವೀಟ್ ಆಗಿದೆ ತಾನೇ??? ಏನಂತಿರಾ???

ಗೆಳತಿ..ನಿನ್ನ ಒಂದು ಪತ್ರದ ನಿರೀಕ್ಷೆಯಲ್ಲಿ ….

June 28, 2009

miss_u

ನಲ್ಮೆಯ ಗೆಳತಿಗೆ,

ನನಗೆ ಗೊತ್ತು ನೀ ತುಂಬಾ ಚೆನ್ನಾಗಿದ್ದೀಯ ಅಂತ..ಮದುವೆಯಾದ ನಂತರ ನಿನ್ನಿಂದ ಒಂದೂ ಪತ್ರ ಬಾರದೇ ಇದ್ದುದಕ್ಕಾಗಿ ನನ್ನ ಮನಸ್ಸಿಗೆ ತುಂಬಾ ನೋವುಂಟಾಗಿದೆ.. ವಾರಕ್ಕೆ ಎರೆಡು ಬಾರಿ ನಿನ್ನ ಪತ್ರ ನನ್ನ ಮನೆ ಬಾಗಿಲಿಗೆ ಬರುತ್ತಿದ್ದುದು, ಹದಿನೈದು ದಿನಗಳಾದರು ನನ್ನ ಕಣ್ಣಿಗೆ ಬೀಳದೆ ಚಂದಿರನಿಲ್ಲದ ಆಕಾಶದಂತಾಗಿದೆ ನನ್ನ ಬದುಕು…

ಗೆಳತಿ ನೀನಿಲ್ಲದೆ ಬದುಕು ಖಾಲಿ-ಖಾಲಿ ಅನಿಸುತಿದೆ..ನಿನ್ನ ಪ್ರೀತಿ ಮಾತುಗಳನ್ನು.. ನಿನ್ನ ಮುದ್ದಾದ ಅಕ್ಷರಗಳಲ್ಲಿ ನೋಡುತ ,ಓದುತ ಇರುತ್ತಿದ್ದೆ.. ನೀ ನನ್ನೊಡನಿಲ್ಲ ಅನ್ನೋ ಭಾವನೆಗಳ ಹೋಗಲಾಡಿಸುತ್ತಿದ್ದ ನಿನ್ನ ಒಲವಿನ-ಸಾಂತ್ವಾನದ ಮಾತುಗಳು, ನಿನ್ನ ಕವಿತೆಗಳು,ನೀನು ಸೊಗಸಾಗಿ ಬಿಡಿಸುತ್ತಿದ್ದ ಚಿತ್ರಗಳನ್ನು ನಾನೆಷ್ಟು ಮಿಸ್ಸ್ ಮಾಡಿಕೊಳ್ಳುತ್ತಿದ್ದೇನೆ ಗೊತ್ತಾ?? ಒಂದು ವಾರದಿಂದ ನೀ  ಬರೆದಿರುವ ಹಳೆಯ ಪತ್ರಗಳನು ನನ್ನ ಹಾಸಿಗೆಯೆಲ್ಲಾ ಹರಡಿ ಓದುತ್ತಿದ್ದೇನೆ..

ಪತ್ರದಲ್ಲಿ ಸಿಗುವ ಆತ್ಮೀಯತೆ ನೀ ನನ್ನ ಪಕ್ಕದಲ್ಲಿದ್ದರೂ ಸಿಗುವುದಿಲ್ಲ ಕಣೇ ..ಅದರ ಟೇಸ್ಟೇ ಬೇರೆ..ಅಷ್ಟು ಮುದ್ದಾಗಿ ಹೃದಯಕ್ಕೆ ಹತ್ತಿರವಾಗಿ ಮನಸ್ಸಿಗೆ ನಾಟುತ್ತವೆ ನಿನ್ನ ಕೋಲ್ಮಿಂಚಿನಂತಹ ನುಡಿಗಳು.. ಸ್ವಚ್ಚಂದದ ಭಾವನೆಗಳು.. ಮನದ ಪಿಸುಮಾತುಗಳು..ಎಲ್ಲಕ್ಕೂ ಮಿಗಿಲಾಗಿ  ನಿನ್ನ ನಿಷ್ಕಲ್ಮಶ ಸ್ನೇಹಸಾಗರದಲ್ಲಿ ನಾ ಮುಳುಗಿ ಹೋಗಿದ್ದೇನೆ.. ೩ ದಿನದಲ್ಲಿ ನಡೆದ ಎಲ್ಲಾ ವಿಷಯಗಳನ್ನು ೨ ಹಾಳೆಯ ತುಂಬಾ ತುಂಬಿಸಿ ಅದಕ್ಕೆ ಬಣ್ಣಗಳಿಂದ ಅಲಂಕರಿಸಿ ಎನ್ವೆಲೋಪ್ನಲ್ಲಿ ಬಂದಿಸಿ ಅಂಚೆ ಪೆಟ್ಟಿಗೆಗೆ ಹಾಕಿ ನಿನ್ನ ಉತ್ತರಕ್ಕೆ ಕಾಯುತ್ತಿದ್ದುದರಲ್ಲಿ ಏನೋ ಮಜವಿತ್ತು…ಇದು ನನ್ನ ೪ನೇ ಪತ್ರ ದಯವಿಟ್ಟು ನನ್ನ ಈ ಒಂದು ಪತ್ರಕ್ಕೆ ಉತ್ತರಕೊಡು… ನನಗೆ ನೀನಲ್ಲದೆ ಒಂಟಿತನ ಕಾಡುತಿದೆ…

ನಿನಗೆ ನೆನಪಿದೆಯಾ ಶಾಲೆಯಲ್ಲಿದ್ದಾಗ ಇಬ್ಬರೂ ಒಟ್ಟಿಗೆ ಒಂದೇ ಬೆಂಚಿನಲ್ಲಿ ಕುಳಿತುಕೊಳ್ಳುತ್ತಿದ್ದರೂ ಪ್ರತಿನಿತ್ಯ ಪತ್ರವಿನಿಮಯವಾಗುತ್ತಿತ್ತು… ಆದರಿಂದು ಹದಿನೈದು ದಿನಗಳಾದರೂ ನಿನ್ನ ಒಂದೂ ಪತ್ರ ನನಗೆ ಬರಲಿಲ್ಲ.. ನನಗೆ ಒಂಟಿತನದ ನೆರಳೂ ಬೀಳದಂತೆ ನನ್ನ ನೆರಳಾಗಿದ್ದ ನೀನು ಇಂದು ಇಲ್ಲದೆ ಕಾರ್ಮೋಡ ಕವಿದಂತೆ ಭಾಸವಾಗುತಿದೆ… ಅಕ್ಕ-ಅಣ್ಣ, ಅಮ್ಮ-ಅಪ್ಪನಿಗಿಂತಲೂ ಮಿಗಿಲಾದ ನನ್ನ ಜೀವದ ಗೆಳತಿಯ ಕಳೆದುಕೊಳ್ಳಲು ನನ್ನಿಂದ ಸಾಧ್ಯವಾಗುತ್ತಿಲ್ಲ…. ಒಮ್ಮೆಯಾದರೂ ನನ್ನ ಮನೆಗೆ ಬಂದು ಹೋಗು..ನಿನ್ನ ಮಡಿಲಲ್ಲಿ ಮಲಗಿ ನನ್ನ ನೋವನ್ನೆಲ್ಲಾ ಹಂಚಿಕೊಳ್ಳುತ್ತೇನೆ…. ಕಣ್ಣೀರು ಬಂದರೂ ಒತ್ತಿ ಹಿಡಿದಿರುವೆ ..ನೀ ಬಂದು ಹಿಡಿಯುವೆ ಎಂದು… ಬರುವೆಯಲ್ಲವೇ…??????

-ನಿನ್ನ ಹಾದಿಯನ್ನೇ ನೋಡುತ್ತಿರುವ

ಇಂಚರ

ರೀ ಏನುಂದ್ರೆ ಬೇಗ ಬರ್ತೀರಾ??

June 9, 2009

writing-a-letter

ನನ್ನ ಜೀವಕೆ ಉಸಿರಾದ ಪ್ರೀತಿಯ ಪತಿದೇವರಿಗೆ,

ನಂಗೊತ್ತು, ನನ್ನ  ಮನಕೆರಳಿಸುವ ನಿಮ್ಮ ಮೀಸೆಯಡಿಯಲ್ಲಿ ಅರಳುತಿರುವ ಮುದ್ದಾದ ನಗು ಹೊತ್ತು ಈ ಪತ್ರವನ್ನು ಓದುತ್ತಿದ್ದೀರಿ ಅಲ್ವಾ? ರೀ ಈ ಪತ್ರ ಓದುವಾಗ ಹಾಗೂ ಓದಿದ ಮೇಲೂ ಹೀಗೆ ನಗುತ್ತಿರಿ ಎಂದು ನಾನು ಬಯಸುತ್ತೇನೆ.ಏಕೆಂದರೆ ಈ ಮುದ್ದಾದ ನಗುವಿಗೆ ತಾನೆ ೨ ವರಷಗಳ ಹಿಂದೆ ನಾ ಸೋತು ಹೋಗಿದ್ದು.. ನಾನು ಅಲ್ಲಿ ಇಲ್ಲದೆಯೇ ನೀವು ಚೆನ್ನಾಗಿಲ್ಲ ಎಂದು ನನಗೆ ಗೊತ್ತು..ನನ್ನ ಮೇಲೆ ಪ್ರೀತಿ ಇದ್ದರೆ  ನಿಮ್ಮ ಆರೋಗ್ಯದ ಕಡೆಗೂ ಗಮನ ಕೊಡಿ.. ದಿನ್ನಕ್ಕೆರಡು ಬಾರಿ ನಿಮ್ಮ ಜೊತೆ ಫೋನಿನಲ್ಲಿ ಮಾತನಾಡಿದರೂ ಪತ್ರದಲ್ಲಿ ತೋರುವ ಆತ್ಮೀಯತೆ ಅದರಲ್ಲಿರುವುದಿಲ್ಲವಲ್ಲವೇ? ಒಂದು ದಿನವೂ ನನ್ನ ಕೈಯ್ಯಾರೆ ತುತ್ತು ತಿನ್ನದೆ ಊಟ ಮಾಡದ ನೀವು ಈವಾಗ ಹೇಗಿದಿರೋ ಊಟ-ತಿಂಡಿ ಸರಿಯಾಗಿ ಸೇವಿಸುತ್ತಿದ್ದೀರೋ ಇಲ್ಲವೋ ಎಂದು ನಿಮ್ಮ ಬಗ್ಗೆಯೇ ನೂರಾರು ಯೋಚನೆಗಳು ನನ್ನ ಕಾಡುತಿದೆ ಚಿನ್ನ.. ಈ ಹದಿನೈದು ದಿನಗಳಲ್ಲಿ ನಿಮ್ಮನ್ನು ತುಂಬಾನೆ ಮಿಸ್ ಮಾಡಿಕೊಂಡೆ ಚಿನ್ನ…ನನ್ನಷ್ಟೇ ನೀವು ಮಿಸ್ ಮಾಡಿಕೊಳ್ಳುತ್ತಿದ್ದೀರಿ ಎಂದು ನನಗನ್ನಿಸುತ್ತಿದೆ…ನಾನು ಗರ್ಭಿಣಿ ಎಂದು ಇನ್ನೆಷ್ಟು ದಿನ ನನ್ನ ತಾಯಿಯಮನೆಯಲ್ಲಿ ನನ್ನನ್ನು ಬಿಟ್ಟು ಒಂಟಿಯಾಗಿರುವಿರಿ??

ಆದಷ್ಟು ಬೇಗ ಈ ಭಾನುವಾರ ಬರಲಿ.. ಆ ಒಂದು ವಾರದ ರಜೆಯಲ್ಲಿ ಸಂಪೂರ್ಣವಾಗಿ ನಾ ನಿಮ್ಮೊಡನೆ ಸಮಯ ಕಳೆಯಲು ಇಚ್ಚಿಸುತ್ತೇನೆ. ನಿಮ್ಮ ತೋಳೊಳಗೆ ನನ್ನನ್ನು ಬಳಸಿ ನೆಮ್ಮದಿಯಿಂದ ನಿಮ್ಮ ಎದೆಗೊರಗಿ ಮೌನ ಸಂಭಾಷಣೆಯಲ್ಲಿ ತೊಡಗಬೇಕು, ನಿಮ್ಮ ಮಡಿಲಲ್ಲಿ ನೆಮ್ಮದಿಯಿಂದ ಮಲಗಬೇಕೆಂದೆಲ್ಲಾ ಮನಃ  ಹಾತೊರೆಯುತ್ತಿದೆ… ಏನುಂದ್ರೆ ಬರುವಾಗ ತಪ್ಪದೇ ನನಗಿಷ್ಟವಾದ ಸಿಹಿ ತಿನಿಸು ಮತ್ತೆ ಮಲ್ಲಿಗೆಯ ತೋಮಾಲೆ ತರುವುದನ್ನು ಮರೆಯಬೇಡಿ..

ಇನ್ನೊಂದು ವಾರದೊಳಗೆ ನಮ್ಮಿಬ್ಬರ ಪ್ರೇಮದ ಕುಡಿ ಈ ಜಗತ್ತಿಗೆ ತನ್ನ ಮುಗ್ಧ ಮೋರೆ ಹೊತ್ತು ಬರಲಿದೆ.. ಆ ಕ್ಷಣವ ನೆನೆದರೆ  ಭಯ-ಆತಂಕಗಳು, ಖುಷಿ-ಸಂತಸ ಎಲ್ಲವೂ ಆಗುತ್ತಿದೆ… ಆ ಮಗುವಿನ ಮೊದಲ ಕೂಗನ್ನು ಕೇಳಲು ನನ್ನ ಕಿವಿಗಳು ಕಾಯುತಿವೆ.. ಅದರ ಮೊದಲ  ಸ್ಪರ್ಶವ ಅನುಭವಿಸಲು ತುಂಬಾ ಕಾತುರದಿಂದ ಕಾಯುತಿರುವೆ… ಆದರೂ ಏನೋ ಭಯ ನನ್ನ ಕಾಡುತಿದೆ.. ನೀವು ನನ್ನೊಡನಿದ್ದರೆ ಈ ಪ್ರಪಂಚವನ್ನೇ ನಾ ಗೆಲ್ಲಬಲ್ಲೆ ಎಂಬ ನಂಬಿಕೆ ಇದೆ.. ಏನುಂದ್ರೆ ಬೇಗ ಬಂದುಬಿಡಿ.

ಆದಷ್ಟು ನಿಮ್ಮ ಸನಿಹದಲ್ಲೇ ಇದ್ದು ನಿಮ್ಮ ಪ್ರೇಮ ಸಾಗರದಲ್ಲಿ ಮುಳುಗಿ ನನ್ನಲ್ಲಿರುವ ಭಯ-ಆತಂಕಗಳನ್ನು ನೀವು ಹೊರದೂಡಿಸಿ.  ನಮ್ಮ ಭವಿಷ್ಯವ ಬೆಳಗುವ ಮುತ್ತಿನಂತಹ ಮುದ್ದಾದ ಮಗುವಿಗೆ ಜನ್ಮ ನೀಡುತ್ತೇನೆ. ಈ ನನ್ನ ಆಸೆಗಳನ್ನು ಈಡೇರಿಸಲು ಬೇಗ ಬರುವಿರೆಂದು ನಂಬಿದ್ದೇನೆ. ಆದಷ್ಟು ಬೇಗನೆ ಬಂದು ನನ್ನನ್ನು ಸೇರಿ.. ನಮ್ಮ ಕುಟುಂಬಕ್ಕೆ ಆಗಮಿಸಲಿರುವ ಸ್ವಾತಿಮುತ್ತಿನ ಬಗ್ಗೆ ನೂರಾರು ಕನಸುಗಳ ಹೆಣೆಯೋಣ….. ನಿಮ್ಮದೇ ನಿರೀಕ್ಷೆಯಲ್ಲಿ…….

ನಿಮ್ಮ ಬಾಳಸಂಗಾತಿ

ನಿನ್ನ ದನಿ

May 10, 2009

blue

ಕೋಗಿಲೆಯ ಇಂಚರದಂತೆ ನಿನ್ನ ದನಿ

ಬಳಲಿದ ಜೀವಕೆ ತುಂತುರು ಹನಿ..||
ಮೃದು-ಮಧುರ ಸುಕೋಮಲ ನಿನ್ನ ದನಿ

ಹೋರಾಡುವುದು ಬರಬಾರದೆಂದು ನನ್ನ ಕಂಬನಿ..||

ಅರಿಯದ ಸ್ಥಳದಿಂದ ದೂರವಾಣಿಯಲ್ಲಿ ಕೇಳುವ ನಿನ್ನ ದನಿ

ಎಂದಿಗೂ ಮಾಡದಿರಲ್ಲಿ ಎನ್ನ ಸಪ್ತಸಾಗರದಾಚೆಗಿನ ಒಂಟಿ ಹನಿ..||

ಹೃದಯಾಂತರಾಳದ ಭಾವಗಳ ಪಿಸುಗುಡುವ ನಿನ್ನ ದನಿ

ಆಗಿರುವುದು ಎನ್ನ ಹೃದಯ ಅದಕೆ ಅಭಿಮಾನಿ..||

ಮತ್ತೆ-ಮತ್ತೆ ಕೇಳಬೇಕೆನಿಸುವ ಮಗುವಿನ ಗೆಜ್ಜೆಯಿಂದ ಹೊರಸೂಸುವಂತಹ ನಿನ್ನ ದನಿ

ಮೂಡಿಸಿರುವುದು “ಎದೆಯ ಚಿಪ್ಪಲ್ಲಿ ಭಾವಗಳ ಇಬ್ಬನಿ”….||

ಪ್ರತಿಬಿಂಬ

April 23, 2009

ಮುದುಡಿ ನಗುತಿರುವ

ಮೊಗ್ಗಿನೊಳಗಿನ ಕುಸುಮದಂತೆ

ನನ್ನ ನಗುವೊಳು

ನಿನ್ನುಸಿರ ಬೆರೆಸಿರುವೆ..

ಗುಹೆಯೊಳಡಗಿರುವ ನೂರಾರು ಸತ್ಯಗಳ

ನಿಗೂಢ ಮೌನದಂತೆ

ಎನ್ನ ಮೌನದೊಡನೆ ಬೆರೆತು

ಸಂಭಾಷಣೆ ನಡೆಸುತಿರುವೆ..

ಸಮಸ್ತ ಲೋಕಕೂ

ಒಂದೇ ಆಕಾಶ ಚಪ್ಪರವಿರುವಂತೆ

ನಮ್ಮ ಮಾತು-ಭಾವ ತರಂಗಗಳು

ಒಂದಾಗಿ ಬೆರೆತು ಹಾಡುತಿವೆ..

ಒಡಲ ತುಂಬಿಕೊಂಡಿರುವ ತಾಯಿಯ

ಕಂಗಳಲಿ ಪ್ರಜ್ವಲಿಸುವ ಜ್ಯೋತಿಯಂತೆ

ನಿನ್ನ ನೆನಪುಗಳು ನನ್ನೊಳಗೆ ತುಂಬಿ

ನನ್ನ ಬಾಳ ಬೆಳಗುತಿದೆ ..

ಅನಿರೀಕ್ಷಿತವಾಗಿ ಸಾಗರದಲ್ಲಿ ಸಿಕ್ಕ ಸ್ವಾತಿಮುತ್ತು

April 12, 2009

ಆ ದಿನ ಭಾನುವಾರ ಸಂಜೆಯಾಗುತ್ತಿತ್ತು… ಎಂದಿನಂತೆ ಸಾಗರದಲ್ಲಿ ಅಸ್ತಂಗತನಾಗುವ ಸೂರ್ಯನನ್ನು ಕಂಡು ಅದರಿಂದಾಗುವ ಆನಂದದ ಸವಿಯನ್ನು ಸವಿಯಲು ಆಗದೆಯೇ ಮರಳಿನಲ್ಲಿ ಕಾಲ್ಗಳನ್ನು ಎತ್ತಿಡಲಾರದೆ,ನನ್ನ ಭಾರವಾದ ಮನಸ್ಸನ್ನು ಹೊತ್ತು ಚಿಂತಾಕ್ರಾಂತಳಾಗಿ ಸಾಗರದ ಅಲೆಗಳ ಮುಟ್ಟಲು ಸಾಗುತ್ತಿದ್ದೆ… ಯಾಕೋ ಅಂದು ಸೂರ್ಯ ಎಷ್ಟು ಹೊತ್ತಾದರೂ ಮುಳುಗದೆಯೇ  ಮೋಡಗಳ ಹಿಂದೆ ಅವಿತು ಕುಳಿತಿದ್ದ …. ಎಂದಿನಂತೆ ಅಲೆಗಳೊಡನೆ ಕಾಲ್ಗಳ ತೊಯ್ದು ಆಟವಾಡದೆ,ಮನ ಬಿಚ್ಚಿ ಹಾಡದೇ, ಕಾಲ್ಗಳ ಬಳಿ ಬಂದು ಮುತ್ತಿಡುವ ಕಪ್ಪೆ-ಚಿಪ್ಪುಗಳ ಆಯ್ದು ಸೆರಗಿನೊಳಗೆ ಕಟ್ಟಿಕೊಳ್ಳದೆಯೇ ಕಾಲು ನೀಡಿ ಮರಳ ಹಾಸಿಗೆಯ ಮೇಲೆ ಕುಳಿತೆ……… ಆಗ ನನಗೆ ನೆನಪಿಗೆ ಬಂದದ್ದು “ಆದಿ….. ಆದಿತ್ಯನ ನೆನಪು…….”….

ಆದಿ ಅನಿರೀಕ್ಷಿತವಾಗಿ ಕೋಲ್ಮಿಂಚಿನಂತೆ ಬಾಳ ಪುಟಗಳ ನಡುವೆ ಪ್ರವೇಶಿಸಿ ಮಿಂಚಿನ ಹೊಳಪನ್ನು ಕೆಲ ಕಾಲ ಬೀರಿ ಹೋದ ಜೀವ…ಪ್ರತಿದಿನ ಅವನೊಡನೆ ಮಾತನಾಡದಿದ್ದರೂ ಭಾನುವಾರ ಸಂಜೆ ೪ಕ್ಕೆ ಸರಿಯಾಗಿ ಆದಿ-ನಾನು  ಜೊತೆಗೂಡಿ ಬಂದು ಮರಳ ರಾಶಿಯ ಮೇಲೆ ಪವಡಿಸಿ, ಸೂರ್ಯನ ಹೊನ್ನ ಕಿರಣಗಳ ತೊಟ್ಟಿಲಲ್ಲಿ ಭವಿಷ್ಯದ ಬಗೆಗೆ ಕನಸುಗಳ ಹೆಣೆಯುತ್ತಾ ತಂಪಾದ ಸ್ಪರ್ಶವ ನೀಡುವ ಗಾಳಿಯೊಡನೆ ಬೆರೆತು ಮಧುರ ಪಿಸುಮಾತುಗಳನಾಡುತ್ತಾ, ಜೊತೆಗೆ ಆದಿಯ ಮೊಬೈಲಿನಲ್ಲಿ ನನಗಿಷ್ಟವಾದ “ನೂರು ಜನ್ಮಕೂ..ನೂರಾರು ಜನ್ಮಕೂ”..ಹಾಡನ್ನು ಕೇಳುತ್ತಾ, ಸಾಗರದ ಅಲೆಗಳ ಭೋರ್ಗರೆತಕ್ಕೆ  ಹೆದರಿ ಅವನ ಎದೆಯೊಳಗೆ ಬಂಧಿತಳಾಗಿ ಬಿಡುತ್ತಿದ್ದೆ….. ಅವನು ನನ್ನ ಹಣೆಗೆ ಮುತ್ತಿಟ್ಟು ಹೋಗೋಣ ಎಂದು ಕಣ್ಣ ಸನ್ನೆಯಿಂದ ಹೇಳಿದಾಗಲೇ ನನಗೆ ಹೊರಗಿನ ಪ್ರಪಂಚದ ಸಮಯದ ಅರಿವಾಗುತ್ತಿದ್ದುದು..

ಎಷ್ಟೋ ಬಾರಿ ಮರಳ ಮೇಲೆ ನಮ್ಮಿಬ್ಬರ ಹೆಸರನ್ನು ಅವನು ಬರೆದಿದ್ದಾಗ ಭಯಂಕರ ಅಲೆಗಳು ಬಂದು ಹೆಸರ ಗುರುತನ್ನೂ ಉಳಿಸದೆ ಕೊಚ್ಚಿಕೊಂಡು ಹೋಗುತ್ತಿದ್ದಾಗ ಆದಿಯೊಡನೆ ಜಗಳಕ್ಕಿಳಿಯುತ್ತಿದ್ದೆ,.. ಜೊತೆಗೆ ಆ ಅಲೆಗಳಿಗೆ ಮನಃ ತೃಪ್ತಿಯಾಗುವಷ್ಟು ಬೈಯುತ್ತಿದ್ದೆ……. ಎಷ್ಟೇ ನಿರಾಕರಿಸಿದರೂ ಆದಿ ಮರಳ ಮೇಲೆ ಹೆಸರು ಬರೆಯುತ್ತಿದ್ದ.. ಅವನು ಬರೆದ ಅಕ್ಷರಗಳು ಒಮ್ಮೆಲೇ ನೀರು ಪಾಲಾಗುವುದನ್ನು ಸಹಿಸಲು ನನ್ನಿಂದಾಗುತ್ತಿರಲಿಲ್ಲ…. ಕೊನೆಗೆ ಜಗಳದಲ್ಲಿ ನಮ್ಮ ಸಂಭಾಷಣೆ ಅಂತ್ಯ ಕಾಣುತ್ತಿತ್ತು……….

ಆದರಿಂದು ಬೇಕು ಎಂದರೂ ಹೆಸರು ಬರೆಯುವರಾರಿರಲಿಲ್ಲ..ಜಗಳವಾಡಲೂ ಸಹಾ ನನ್ನಲ್ಲಿ ಚೈತನ್ಯವಿಲ್ಲದೆಯೇ ಸ್ಮಶಾಣ ಮೌನ ನನ್ನನ್ನಾವರಿಸಿತ್ತು.. ನೂರು ಜನುಮಕೂ ಹಾಡಿಗಿಂತಾ ಇಂದು ನನಗೆ ನೆನಪಿಗೆ ಬಂದಿದ್ದು….                                                                                                                 “ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು”

ಆದಿ ಏನೆಲ್ಲಾ ಆಸೆ-ಕನಸುಗಳ ನನ್ನಲ್ಲಿ ತುಂಬಿ ಹೋಗಿದ್ದ… ಸ್ವರಕ್ಕೆ – ರಾಗ ಸೇರಿಸಿ ವರ್ಷಗಳು ಸಾಗಿಸಿದ…..ಅವನ ಮೇಲೆ ನನಗಿದ್ದ ಅಪಾರವಾದ ನಂಬಿಕೆ ನಾನು ಅವನನ್ನು ಹೆಚ್ಚು ಪ್ರೀತಿಸುವಂತೆ ಮಾಡಿತು….

ಒಮ್ಮೆ ಹೀಗೆ ಸಾಗರದ ಅಲೆಗಳ ಒಡನೆ ಆಡುತ್ತಿರುವಾಗ ಆಕಸ್ಮಿಕವಾಗಿ ಅವನಿಗೆ ಸಿಕ್ಕ ಸ್ವಾತಿಮುತ್ತನ್ನು ಜೋಪಾನವಾಗಿ ತನ್ನ ಜೇಬಿನಲ್ಲಿರಿಸಿ ಹೊರಡುವ ಘಳಿಗೆಯಲ್ಲಿ  ನನ್ನ ಕಣ್ಣ ಮುಚ್ಚುವಂತೆ ಹೇಳಿ ಆ ಮುತ್ತನ್ನು ನನ್ನ ಕೈಲಿರಿಸಿ ಒಂದು ಪತ್ರವನ್ನು ನನ್ನ ಕೈಲಿಟ್ಟು ,ಹಣೆಗೆ ಒಂದು ಮುತ್ತನ್ನಿಟ್ಟು ಕಣ್ಗಳಲ್ಲೇ ಪ್ರೀತಿ ನೀಡಿ ಹೋಗಿದ್ದ…. ಆ ಕಣ್ಣ ಸನ್ನೆಯಲ್ಲಿ ಬರವಸೆ ಇತ್ತು,ಧೈರ್ಯ ತುಂಬಿತ್ತು, ನೋವು ತುಂಬಿತ್ತು…. ಅಂದು ನನ್ನ ಸಂತೋಷವು ಎಲ್ಲೆ ಮೀರಿತ್ತು, ಸಂತೋಷದಿಂದ ನನ್ನ ಕಣ್ಣೀರು ಕೆನ್ನೆಯ ಮೇಲಿಂದ ಜಾರಿತ್ತು… ಎಂದೂ ನನ್ನ ಒಂದು ಪತ್ರಗಳಿಗೂ ಪತ್ರದ ಮೂಲಕ ಉತ್ತರಿಸದ ಆದಿ ಅಂದು ಪತ್ರದಲ್ಲಿ ಏನೋ ಬರೆದು ಕೊಟ್ಟಿದ್ದ…. ಮನೆಗೆ ಬಂದವಳೇ ನನ್ನ ರೂಮಿನ ಬಾಗಿಲ ಸರಿಸಿ ಅವನು ಕೊಟ್ಟ ಸ್ವಾತಿಮುತ್ತನ್ನು ಜೋಪಾನವಾಗಿರಿಸಿ, ಪತ್ರವ ತೆರೆದು ಕುತೂಹಲದಿಂದ ಓದತೊಡಗಿದೆ…  ಆ ಪತ್ರವನ್ನು ಓದು-ಓದುತ್ತಿದ್ದಂತೆ ನನ್ನ ಪ್ರಾಣಪಕ್ಷಿ ಹಾರಿಹೋಗಿಬಿಡುತ್ತಿದೆಯೇನೋ ಎಂಬಂತೆ ಭಾಸವಾಗತೊಡಗಿತು…ಮೈ ನಡುಗಿತು .. ನಿಂತಲ್ಲೇ ನಾ ಕುಸಿದು ಬಿದ್ದೆ..ಮನೆಯಿಂದ ಹೊರಟಾಗ ಅರಳಿದ್ದ ನನ್ನ ಮೊಗ ಪತ್ರವನೋದುವಾಗ ಬಾಡತೊಡಗಿತ್ತು…ಹೊರಗಡೆ ಗುಡುಗು – ಸಿಡಿಲಿನ ಆರ್ಭಟವ ಸಹಿಸಲೂ ಕಷ್ಟವಾಯಿತು…. ಕಣ್ಣಲ್ಲಿ ಒಂದು ಹನಿ ನೀರು ಸಹಾ ಹೊರ ಬರಲಾರದೆ ಒದ್ದಾಡುತ್ತಿತ್ತು…… ಏಕೆಂದರೆ…. ಆದಿಗೆ ಅಂದು ಮುಂಜಾನೆ ಹೃದಯಾಘಾತವಾಗಿತ್ತು… ಆದರೂ ದೇವರ ದಯೆಯಿಂದ ಪಾರಗಿದ್ದ… ಅದನ್ನು ಹೇಳಿಕೊಳ್ಳಲು ಆದಿಗೆ ಯಾರೂ ಇಲ್ಲವಾದುದರಿಂದ , ನನ್ನೊಡನೆಯೂ ಹೇಳಲು ಭಯವಾಗಿ ತುಂಬಾ ಯೋಚಿಸಿ ಆ ಪತ್ರವ ಬರೆದುದಾಗಿ ತಿಳಿಸಿದ್ದ.. ಅಂದು ಅವನ ಭೇಟಿಯಾದಾಗ ಸಹಾ ಅವನ ಮುಖ ಕಳೆಗುಂದಿದುದನ್ನು ಗಮನಿಸಿ ಕೇಳಿದಾಗ ಅವನು ಏನೂ ಹೇಳಿರಲಿಲ್ಲ…

ಹೊರಗೆ ಜೋರು ಮಳೆ ಸುರಿಯುತ್ತಿದ್ದರೂ ಅಮ್ಮನಿಗೆ ಹೇಳಲಾಗದೆ ಏನೆಲ್ಲ ಸುಳ್ಳು ಹೇಳಿ ಆದಿಯ ಮನೆ ಕಡೆಗೆ ಹೊರಟೆ… ಅಮ್ಮ ನನ್ನ ಕೈಗೆ ಛತ್ರಿಯನಿಟ್ಟು ಕಳುಹಿಸಿದರು…. ಏಕೋ ಒಂದೊಂದು ಹೆಜ್ಜೆಗಳನ್ನಿಡಲೂ ಕಷ್ಟವಾಗತೊಡಗಿತು.. ಹಾಗೂ-ಹೀಗೂ ಆದಿಯ ಮನೆ ತಲುಪಿ ಬಾಗಿಲ ಸರಿಸಿ ನೋಡುವಷ್ಟರಲ್ಲಿ  ಮತ್ತೆ ಆದಿಗೆ ಹೃದಯಾಘಾತವಾಗಿ ತೀವ್ರವಾಗಿ ಒದ್ದಾಡುತ್ತಾ ಮಲಗಿದ್ದ.. ಕರುಳ ಚುಚ್ಚಿದಂತಾಯಿತು.. ನಾ ಅಲ್ಲಿದ್ದೂ ಏನೂ ಮಾಡಲಾಗದ ಪರಿಸ್ಥಿತಿ… ಹೊರಗೆ ಜೋರು ಮಳೆ… ಕೂಗಿದರೂ ಯಾರಿಗೂ ಕೇಳಿಸಲಾಗದಷ್ಟು ಮಳೆಯ ಆರ್ಭಟ.. ಏನಾದರಾಗಲಿ ಅವನನ್ನು ಉಳಿಸಿಕೊಳ್ಳಲೇಬೇಕು ಎಂದು ಹೊರ ನಡೆದಾಗ ಆದಿ ಕಣ್ಣುಗಳಲ್ಲಿ ನೀರು ತುಂಬಿ ಅವನು ನನ್ನ ಕೈಗಳನ್ನು ಅವನ ಹೃದಯದ ಮೇಲಿಟ್ಟು ನನ್ನ ಮಡಿಲಲ್ಲಿ ಮಲಗಿಸಿಕೊಳ್ಳುವುದಾಗಿ ಸನ್ನೆ ಮಾಡಿದ…. ಎಷ್ಟೇ ಹೇಳಿದರು ಡಾಕ್ಟರನ್ನು ಕರೆತರಲು ನಿರಾಕರಿಸಿದ…. ಅವನು ಸಾಯುವುದು ಅವನಿಗೆ ಖಚಿತವಾಗಿತ್ತೋ ಏನೋ ಗೊತ್ತಿಲ್ಲಾ…ನನ್ನ ಮಡಿಲಲ್ಲಿ ಪುಟ್ಟ ಮಗುವಿನಂತೆ ಮಲಗಿ ನನ್ನ ಕೈಗಳನ್ನೊತ್ತಿ “ಚಿನ್ನ ಐ ಲವ್ ಯು ” ಎಂದ .. ಅವನ ಹಣೆಗೆ ಮುತ್ತಿಟ್ಟು ಬರವಸೆಯ ತುಂಬುವ ಪ್ರಯತ್ನ ಮಾಡಿದೆ… ಅಷ್ಟರೊಳಗಾಗಿ ಆದಿಯ ಪ್ರಾಣಪಕ್ಷಿ ಹಾರಿಹೋಗಿತ್ತು….. ದಿಕ್ಕೇ ತೋಚದವಳಂತೆ ಶೂನ್ಯದೆಡೆಗೆ ನೋಡುತ್ತಾ ಕುಳಿತೆ.. ಆದಿಯ ದೇಹ ನನ್ನ ಮಡಿಲಲ್ಲಿತ್ತು…. ಕೂಡಲೇ ಅಪ್ಪ ಅಮ್ಮನಿಗೆ ವಿಷಯ ತಿಳಿಸಿದಾಗ ಅವರಿಗೆ ಆಶ್ಚರ್ಯ ನೋವು ಎಲ್ಲ ಒಟ್ಟಿಗೆ ಬಂದು ಅವರನ್ನಾವರಿಸಿತ್ತು ..ಆಗಲೂ ಒಂದು ಕಣ್ಣ ಹನಿಯು ನನ್ನ ಕಣ್ಣಿನಿಂದ ಜಾರಲಾರದೆ ಒದ್ದಾಡುತ್ತಿದ್ದೆ… ಎಲ್ಲಾ ಕಾರ್ಯಗಳ ಮುಗಿಸಿ ಮನೆಗೆಹೋದೆ…..!! ಅವನಿಲ್ಲದ ಬಾಳು ವ್ಯರ್ಥ ಅನಿಸತೊಡಗಿತು…. ನನ್ನ ತಂದೆ ತಾಯಿ ವಿಶಾಲ ಮನೋಭಾವದವರಾದುದರಿಂದ ಪರಿಸ್ಥಿತಿಯ ಅರ್ಥೈಸಿಕೊಂಡು ನನಗೆ ಸಾಂತ್ವಾನ ಹೇಳಿ, ನನಗೆ ಧೈರ್ಯದ ಮಾತುಗಳ ಹೇಳಿ, ಭವಿಷ್ಯದ ಬಗ್ಗೆ ಚಿಂತಿಸುವಂತೆ ಹೇಳಿಹೋದರು … ಆದರು ಆದಿಯ ನೆನಪು ನನ್ನ ಕಾಡತೊಡಗಿತು…..

೭ ದಿನ ೭ ವರುಷಗಳಂತೆ ಕಳೆಯಿತು… ಮತ್ತದೇ ಭಾನುವಾರ ಎದುರಾಯಿತು…. ಎಂದಿನಂತೆ ಆದಿ ನನ್ನೊಡನೆ ಇರಲಿಲ್ಲ….ಒಂಟಿಯಾಗಿದ್ದೆ ನಾನು..ಸದಾ ಅವನ ಜೊತೆಗೂಡಿ ಬರುತ್ತಿದ್ದ ನಾನು.. ಒಮ್ಮೆ ಒಂಟಿಯಾಗಿ ಬರುವ  ಪರಿಸ್ಥಿತಿ  ಎದುರಾಗುತ್ತದೆ ಎಂದು ಕನಸ್ಸಲ್ಲೂ ಊಹಿಸಿರಲಿಲ್ಲ….
ಇಂದು ನಾನು ಮರಳ ರಾಶಿಯ ಮೇಲೆ ಕಾಲ ನೀಡಿ ಕುಳಿತು ತಂಪಾದ ಗಾಳಿಯ ಅನುಭವವೂ ಆಗದಂತೆ ಶೂನ್ಯದತ್ತ ನೋಡುತ್ತಾ ಸಾಗರದ ಅಂತ್ಯವ ಹುಡುಕಲು ಪ್ರಯತ್ನಿಸುತ್ತಿದ್ದೆ… ಮೊಳೆಯದ ಅಲೆಗಳ ಬಗ್ಗೆ ಯೋಚಿಸಲು ಆಗದೆ ಸಾಗರದಲ್ಲಿ ಸುಪ್ತವಾಗಿ ಅಡಗಿ ಹೋಗುವ ಹಂಬಲ…. ಮನಸ್ಸಲ್ಲಿ ಆ ಸೂರ್ಯ ದೇವನಿಗೆ ನೂರಾರು ಪ್ರಶ್ನೆಗಳ ಸುರಿಮಳೆ ಹಾಕುತ್ತಿದ್ದೆ….. ನುಡಿಯಲು ಒಂದು ಮಾತು ಸಹಾ ಹೊರಬರಲಿಲ್ಲ..ಬರಿ ಮೌನ ಎಲ್ಲೆಲ್ಲು ಮೌನ ಅಷ್ಟೇ ….!! ಇಂದು ನನ್ನ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಆ ಸೂರ್ಯ ಸಹಾ ಮೋಡಗಳ ಹಿಂದೆ ಮರೆಯಾಗುತ್ತಾ ಸಾಗರದೊಳಗೆ ಮುಳುಗಲು ಯತ್ನಿಸುತ್ತಿದ್ದ.. ದೂರ-ತೀರಕೆ ಅವನ ಪಯಣ ಸಾಗಿತ್ತು.. ನನ್ನ ಆದಿಯ ತರಹ… ಎಲ್ಲಿ ನೋಡಿದರು ನೀರು ಹರಿದಾಡುತ್ತಿತ್ತು.. ಆ ಸಾಗರದೊಳಗೆ ನಾ ಒಂಟಿ ಬಿಂದುವಾಗಿ ಉಳಿದುಹೋದೆ.. ಮಳೆ ಬರುವ ಮುನ್ಸೂಚನೆಗಳು ಎದುರಾಗುತ್ತಿತ್ತು..ಏಳಲಾರದೆ ಎದ್ದು ಮನಸ್ಸಿನ ವೇದನೆಯನ್ನು ಸಾಗರಕೆ ಚೆಲ್ಲಿಮುಳುಗಿ ಹೋದ ಸೂರ್ಯನ ನೆನಪುಗಳನ್ನು(ಆದಿಯ ನೆನಪುಗಳನ್ನು…)ಅಲ್ಲಿಯೇ ಸಾಧ್ಯವಾದಷ್ಟು ಚೆಲ್ಲಿ  ಎಚ್ಚೆತ್ತುಕೊಂಡು ಸಾಗರದ ಕಡೆ ತಿರುಗಿಯೂ ನೋಡದೆ ಹೊರಟೆ…. ಮಳೆ ರಭಸವಾಗಿ ಬೀಳತೊಡಗಿತು.. ಏಕೋ ತಡೆಯಲಾಗದೆ ನನ್ನ ಕಂಗಳಿಂದ ಕಣ್ಣೀರು ಚಿಮ್ಮಿ ಬಂತು..ಮಳೆ ಹನಿಗಳ ನಡುವೆ ಆ ನನ್ನ ಕಣ್ಣ ಹನಿಗಳು ಸೇರಿ ಹೋದವು… ಮನಸ್ಸಿನಲ್ಲಿ ಹೆಚ್ಚುತ್ತಿದ್ದ  ನೋವಿಗೆ ಆ ಕಣ್ಣೀರು ಅಂತ್ಯ ನೀಡಿತ್ತು..ಆ ಕ್ಷಣ ಆದಿಯ ಸನಿಹ ನೆನಪಿಗೆ ಬಂದು ದುಃಖ ಉಮ್ಮಳಿಸಿ ಬಂದಿತು… ನಿಸ್ಸಹಾಯಕತೆಯಿಂದ ಬಾಳಿನಲ್ಲಿ ಬರುವ ಏರಿಳಿತಗಳ ಒಪ್ಪಿಕೊಳ್ಳುತ್ತಾ ನನಗೇ ನಾನೆ ಧೈರ್ಯ ತುಂಬಿಕೊಂಡು ಮನೆಯೊಳಗೆ ಕಾಲಿಟ್ಟೆ.. ನೇರವಾಗಿ ದೇವರ ಗುಡಿಗೆ ಹೋಗಿ ಆ ದೇವರಲ್ಲಿ ಒಂದು ಪ್ರಶ್ನೆಯ ಕೇಳಿದೆ…”ಆದಿಯೊಡನೆ ನನ್ನನ್ನೂ ಕರೆಸಿಕೊಳ್ಳದಯೇ ನನ್ನನ್ನು ಒಂಟಿ ಮಾಡಿದೆ ಏಕೆ ದೇವರೇ……???”………..

ಆದಿ ” ನಿನ್ನ ನೆನಪುಗಳು ನನ್ನನ್ನು ಬಿಗಿದಪ್ಪಿ ಸೆಳೆಯುತಿದೆ ಸದಾ……ನಿನ್ನ ಮರೆಯಲಾಗದಲ್ಲ ಮರೆತು ಉಳಿಯಲಾಗುತಿಲ್ಲ……”

ಒಂಟಿಯಾಗಿರುವಾಗ ಹೃದಯಾಘಾತವಾದಲ್ಲಿ ಹೀಗೆ ಮಾಡಿ

April 7, 2009

ಆಳವಾದ ಉಸಿರನ್ನು ತೆಗೆದುಕೊಳ್ಳುತ್ತಾ ಸೆಕೆಂಡಿಗೊಮ್ಮೆ ಆಳವಾಗಿ ದೀರ್ಘವಾಗಿ ಕೆಮ್ಮುತ್ತಾ ಹೋಗಿ.

ಆಳವಾದ ಉಸಿರಿನಿಂದಾಗಿ ಶ್ವಾಸಕೋಶಗಳಿಗೆ ಆಮ್ಲಜನಕ ಯಥೇಚ್ಚವಾಗಿ ದೊರೆಯುತ್ತದೆ. ಕೆಮ್ಮುವುದರಿಂದ ಹ್ರುದಯದ ಮೇಲೆ ಒತ್ತಡ ಬಿದ್ದು ಸಂಚಾರಕ್ಕೆ ಸಹಾಯವಾಗುತ್ತದೆ.

ಹ್ರುದಯಘಾತವಾದ ವ್ಯಕ್ತಿಗಳು ಈ ಕ್ರಮವನ್ನು ಅನುಸರಿಸಿ,  ಕೂಡಲೆ ಆಸ್ಪತ್ರೆಗೆ ದಾಖಲಾಗಿ ತಜ್ಞವೈದ್ಯರಿಂದ ಚಿಕಿತ್ಸೆ ಪಡೆಯತಕ್ಕದ್ದು…..