ಪ್ರೀತಿಯ ಪತಿ ದೇವರಿಗೆ,
ನಿಮ್ಮ ಅರ್ಧಾಂಗಿಯ ಹೃದಯ ಪೂರ್ವಕ ನಮನಗಳು. ಇವತ್ತು ಯಾವ ದಿನ ಗೊತ್ತೇ? ನಮ್ಮ ಮದುವೆಯಾಗಿ, ನಾನು ನಿಮ್ಮ ಅರ್ಧಾಂಗಿಯಾಗಿ ಇವತ್ತಿಗೆ ಒಂದು ತಿಂಗಳು ತುಂಬಿದೆ. ನಿಮಗೆ ನೆನಪಿದೆಯಾ ಆ ದಿನ ನಾನು ಮದುಮಗಳಾಗಿ ಕಲ್ಯಾಣ ಮಂಟಪಕ್ಕೆ ನೂರಾರು ಕನಸುಗಳ ಹೊತ್ತು ವರನಾದ ನಿಮ್ಮೆಡೆಗೆ ಮತ್ತು ನಿಮ್ಮ ಪ್ರೀತಿಯ ಸಾಗರಕ್ಕೆ ನಾನು ಹೆಜ್ಜೆ ಇಡುತ್ತಿದ್ದೆ. ನಿಮ್ಮ ಕಣ್ಣುಗಳಲ್ಲಿ ಸಂತೋಷದಿಂದ ಉರಿಯುತ್ತಿರುವ ಜ್ಯೋತಿ ನನ್ನ ಬಾಳ ಬೆಳಗಲು ಹೊತ್ತಿಸಿದೆಯೋ ಎಂಬಂತೆ ನಿಮ್ಮ ಬಾಳ ಸಾಗಾರಕೆ ನೀವು ನನಗೆ ಭರ್ಜರಿಯಾದ ಆಹ್ವಾನ ನೀಡುತ್ತಿದ್ದೀರಿ ಎಂದು ಹೇಳತೊಡಗಿತ್ತು ಆ ನಿಮ್ಮ ಆಸೆ ಹೊತ್ತ ಕಣ್ಣುಗಳು!
ಆ ಕ್ಷಣ ನಿಮ್ಮ ಬಲಭಾಗಕ್ಕೆ ಕುಳಿತು ಮಂತ್ರೋಪದೇಶಗಳ ಪಠಿಸಿ, ಅಗ್ನಿ ಸಾಕ್ಷಿಯಾಗಿ ಕಾಯ-ವಾಚ-ಮನಸಾ ಒಪ್ಪಿ ನಿಮ್ಮವಳಾದೆ. ನೀವು ನನ್ನ ಕೊರಳಿಗೆ ಮಾಂಗಲ್ಯಧಾರಣೆ ಮಾಡುವ ಕ್ಷಣವಂತೂ ಒಂದೆಡೆ ಮುಂದಿನ ಸುಂದರ ಬಾಳಿನ ಚಿತ್ತಾರ ಕಣ್ಣ ಮುಂದೆ ಹರಿಯತೊಡಗಿದ್ದರೆ ಇನ್ನೊಂದೆಡೆ ತಂದೆ-ತಾಯಿಯ ಅಗಲಿ ಹೋಗಬೇಕೆಂಬ ನೋವು ಕಾರ್ಮೊಡದಂತೆ ನನ್ನ ತಬ್ಬಿ ಕುಳಿತಿತ್ತು. ಕಂಬನಿಯು ಚಿಮ್ಮಲು ಹೊರಬರುತ್ತಿದ್ದರೂ ನನ್ನ ಮನಸ್ಸು ಅದನ್ನು ತಡೆದು ನಿಲ್ಲಿಸಿ ಬದಲಾಗಿ ಮುಖದಲ್ಲೊಂದು ಸಣ್ಣನೆ ಮುಗುಳ್ನಗೆಯಾಗಿ ಹೊರಬಿದ್ದಿತ್ತು. ನಂತರ ಆಕಾಶದಲ್ಲಿ ಅರುಂಧತಿ ನಕ್ಷತ್ರ ತೋರಿಸಲು ಪುರೋಹಿತರ ಹಿಂದೆ ಹೋದಾಗ ನೀವು ನನ್ನ ಬಳಸಿ ನನ್ನ ಕೈಯನ್ನು ನಿಮ್ಮ ಕೈಯೊಳಗೆ ಹಿಡಿದು ಭದ್ರವಾದ ಕೋಟೆಯೊಳಗೆ ನನ್ನ ಬಂಧಿಸಿದಾಗ ಪುಳಕಗೊಂಡು ಆ ಕ್ಷಣ ನಲಿವಿನ ತೋಟವಾಯಿತು. ಎಲ್ಲರ ಆಶಿರ್ವಾದಗಳಿಗೆ ಮೊರೆ ಹೊಕ್ಕು ಹೂವ ಹಾಸಿಗೆಯ ಬೆನ್ನ ಹತ್ತಿ ಮನ ಸೋತು ಕಿಟಕಿಯಂಚಿನಲ್ಲಿ ಕದ್ದು-ಕದ್ದು ನೋಡುತ್ತಿದ್ದ ಚಂದ್ರನ ಕಣ್ಮುಚ್ಚಿ ನಿಮ್ಮ ಬಿಸಿಯಪ್ಪುಗೆಯಲ್ಲಿ ಕರಗಿ ನೀರಾಗಿ ಸಂತೋಷವನುಂಡು ನಿಮ್ಮವಳಾದ ಭಾಗ್ಯವ ನೆನೆಸಿಕೊಂಡು ಈ ಪತ್ರವ ಬರೆಯುತ್ತಿದ್ದೇನೆ.
ಇಷ್ಟು ದಿನ ತವರಿನ ಆಸೆ ಹೊತ್ತು ಇಲ್ಲಿಗೆ ಬಂದರೆ ಬರೀ ನಿಮ್ಮ ನೆನಪುಗಳೇ ಹೃದಯ ತುಂಬುವಷ್ಟು ನನ್ನನ್ನಾವರಿಸಿ ವಿರಹ ವೇದನೆಯ ರಾಗವ ನುಡಿಸುತಿದೆ. ನೀವು ಆದಷ್ಟು ಬೇಗ ಬಂದು ನಿಮ್ಮವಳನ್ನು ನಿಮ್ಮ ಮನೆಯಂಗಳಕೆ, ಹೃದಯದಂಗಳಕೆ ಕರೆದುಕೊಂಡು ಹೋಗಿ.
ನಿಮ್ಮ ನೀರೀಕ್ಷೆಯಲ್ಲಿ ನಿಮಗಾಗಿ ಕಾಯುತ್ತಿರುವೆ…
ಇಂತಿ,
ನಿಮ್ಮ ಒಲವಿನ ಅರ್ಧಾಂಗಿ…
ಕನಸು