ಒಂದು ಕಪ್ ಚಹಾದ ಸುತ್ತ..??!!!


ಮಾಘ ಮಾಸದ ಚುಮು-ಚುಮು ಚಳಿಯಲ್ಲಿ , ಬೆಳಿಗ್ಗೆ ಐದಕ್ಕೆ ಏಳುವುದಂದ್ರೆ ನನ್ನ ಪ್ರಕಾರ ಗಿನ್ನಿಸ್ ದಾಖಲೆ ಮಾಡಿದಂತೆಯೇ!!!

ಅಲಾರಂ ಏನೋ ನನ್ನ ಕಡು ವೈರಿ(?) ಎಂಬಂತೆ ದ್ವೇಷ ಸಾಧಿಸೋ ತರಹ ಫ್ಯಾಕ್ಟರಿ ಸೈರನ್ ತರಹ ಹೊಡೆದು ಕೊಳ್ಳುತ್ತೆ ಅದು ಬೆಳಿಗ್ಗೆ ಐದಕ್ಕೆ ಸರಿಯಾಗಿ! ಆನಂದದಿಂದ ಸುಂದರ ಸವಿಗನಸುಗಳ ರಥವನ್ನೇರಿ ಸಾಗುತ್ತಿರುವ ಸಮಯದಲ್ಲಿ… ಇನ್ನೂ ಬೆಚ್ಚಗೆ ಹೊದ್ದು ಮಲಗೋಣ ಎಂದೆನಿಸುವ ಕ್ಷಣದಲ್ಲಿ ಈ ಸೈರನ್ ಸದ್ದು ತಾಳಲಾರದೆ ಬಂಧಿಸಿದ ಕಣ್ಣುಗಳ ತೆರೆದು ದೇವರಿಗೆ ನಮಸ್ಕರಿಸಿ ಮುಖಕ್ಕೆ ನೀರೆರೆಚಿದರೆ ಅಬ್ಬಾ!!!  ಮೈ ಕೊರೆಯುವ ತಣ್ಣನೆಯ ನೀರು ಸಹಾ ಒಂದು ಕ್ಷಣ ನನ್ನ ಆಜನ್ಮ ಶತ್ರುವೇನೋ ಎಂದೆನಿಸಿ ಬಿಡುವ ಹಾಗೆ ಮಾಡುತ್ತದೆ. ಇವೆಲ್ಲ ಮುಗಿಸಿ ಹೊಸ್ತಿಲಿಗೆ ಒಂದಿಷ್ಟು ನೀರೆರಚಿ ರಂಗೋಲಿಯ ಬಿಡಿಸಿ ಅಡುಗೆ ಮನೆಗೆ ಕಾಲಿಟ್ಟರೆ… ಪಾತ್ರೆಗಳೆಲ್ಲ ನಾ ಮುಂದು, ತಾ ಮುಂದು ಎಂದು ಸ್ಪರ್ಧೆಗೆ ನಿಲ್ಲುತ್ತವೆ. ಅವುಗಳು ಎಷ್ಟೇ ಏನೇ ಮಾಡಿದರೂ ನಾನು ಮೊದಲು ತೆಗೆದುಕೊಳ್ಳುವುದು ನನ್ನ ಪ್ರೀತಿಯ ಚಹಾ ಮಾಡುವ ಬಟ್ಟಲು. ಆ ದಿನದ ದಿನಚರಿಯಲ್ಲಿ ನೂರೆಂಟು ಕೆಲಸಗಳಿದ್ದರೂ ಚಹಾ ಕುಡಿಯದೆ ಬೇರೆ ಕೆಲಸಗಳಿಗೆ ಮುನ್ನುಡಿಯಿಡಲು ಸಾಧ್ಯವೇ ಇಲ್ಲ ಎಂಬುವಷ್ಟು ನನಗೆ ಚಹಾ ಮೋಡಿ ಮಾಡಿ ಬಿಟ್ಟಿದೆ. ಒಲೆ ಹಚ್ಚಿ ಹಾಲಿನ ಪ್ಯಾಕೆಟ್ ಒಡೆದು ಹಾಲನ್ನು ಕಾಯಲು ಇಟ್ಟು ಇನ್ನು ಮಲಗಿರುವ ಅಪ್ಪನ್ನ ಎದ್ದೇಳಿಸಿ, ದೇವರ ಗುಡಿಯನ್ನು ಶುಚಿಗೊಳಿಸಿ ಬರುವುದರೊಳಗಾಗಿ ಹಾಲು ಉಕ್ಕಲು ಕಾದು ಕುಳಿತಿರುತ್ತದೆ. ನಂತರ ಆ ಹಾಲಿಗೆ ಒಂದಿಷ್ಟು ನೀರು ಬೆರೆಸಿ, ಘಮ ಘಮ ಎನ್ನುವ ಚಹಾ ಪುಡಿಯ ಅದಕ್ಕೆ ಉದುರಿಸಿ ಬಿಟ್ಟರೆ ಮನೆಯೆಲ್ಲಾ ಚಹಾ ಪುಡಿಯ ವಾಸನೆ ಹರಡಿ ಎಲ್ಲರನ್ನೂ ಅಡುಗೆ ಮನೆಯ ಕಡೆಗೆ ಸೆಳೆಯುತ್ತಿರುತ್ತದೆ. ಜೊತೆಗೆ ಆಗಲೇ ಪಿಳಿ-ಪಿಳಿ ಕಣ್ಣು ಬಿಟ್ಟು ಮನೆಯಾಚೆ ಇರುವ ಮರದಿಂದ ಕೂಗುತ್ತಿರುವ ಗುಬ್ಬಿಗಳಿಗೂ ಅದರ ವಾಸನೆ ತಾಕಿ ಅಡುಗೆ ಮನೆಯ ಕಿಟಕಿಗೆ ಆಕ್ರಮಿಸುತ್ತದೆ. ರೆಡಿಯಾಗುತ್ತಿರುವ ಚಹಾದ ಮೇಲೆ ನನಗೆ ಪ್ರೀತಿ ಹೆಚ್ಚಾಗಿ ಒಂದೆರಡು ಚಮಚ ಹೆಚ್ಚಿಗೆ ಸಕ್ಕರೆಯ ಸೇರಿಸಿ, ಒಂದಿಷ್ಟೇ ಇಷ್ಟು ಏಲಕ್ಕಿ ಪುಡಿ ಉದುರಿಸಿ ಬಿಡುವುದರೊಳಗಾಗಿ ನನ್ನ ಬಾಯಲ್ಲಿ ನೀರೂರಲು ಶುರುವಾಗಿರುತ್ತದೆ.

ಅಷ್ಟು ಹೊತ್ತಿಗೆ ದಿನ ಪತ್ರಿಕೆಯವನು ತಂದು ಹಾಕಿರುವ ಪತ್ರಿಕೆಯನ್ನು ಓದುತ್ತಾ ಅಪ್ಪ ಅಂಗಳದಲ್ಲಿ ಕುಳಿತು ಚಹಕ್ಕಾಗಿ ಕಾಯುತ್ತಿರುವಾಗ, ಸಿದ್ಧವಾದ ಚಹಾವನ್ನು ನನ್ನ ಅಚ್ಚುಮೆಚ್ಚಿನ ಲೋಟಕ್ಕೆ ಬಗ್ಗಿಸಿ, ಮತ್ತೆ ಅಪ್ಪನಿಗೊಂದು ಲೋಟಕ್ಕೆ ಹಾಕಿ, ಚಹದೊಳಗೆ ನನ್ನ ದೃಷ್ಟಿ ಬೆರೆಸಿದರೆ ಸಾಕು ಅದರಲ್ಲಿ ನೂರೆಂಟು ಕಣ್ಣುಗಳು ರೂಪಗೊಂಡು ಕಕ್ಕಾಬಿಕ್ಕಿಯಾಗಿ ನನ್ನೆಡೆಗೆ ನೋಡಲು ಶುರುವಾಗುತ್ತದೆ, ನಾನು ಅದನ್ನು ನೋಡನೋಡುತ್ತಿದ್ದಂತೆಯೇ ಆ ಕಣ್ಣುಗಳು ಮಾಯವಾಗುತ್ತಿರುತ್ತದೆ. ಅಂಗಳದಲ್ಲಿರುವ ತೂಗುಯ್ಯಾಲೆಯ ಕಡೆಗೆ ನನ್ನ ಪಯಣ ಸಾಗುತ್ತದೆ… ಈ ತೂಗುಯ್ಯಾಲೆ ನನಗೆ ಬಹುಪಯೋಗಿ… ಚಹಾ ಕುಡಿಯೋಕೆ, ಪುಸ್ತಕ ಓದೋಕೆ, ನಿದ್ದೆ ಮಾಡೋಕೆ… ಇತ್ಯಾದಿ… ಅದು ಅಮ್ಮನ ಮಡಿಲಂತೆ… ಅಂದರೆ ತಪ್ಪಾಗಲಾರದು…

ಅಪ್ಪನ ಕೈಗೊಂದು ಲೋಟ ಚಹಾವನ್ನು ಇಟ್ಟು, ನನ್ನ ಪ್ರೀತಿಯ ತೂಗುಯ್ಯಾಲೆಯ ಮೇಲೆ ಪವಡಿಸಿಬಿಟ್ಟರೆ ಪ್ರಪಂಚದ ಅರಿವೇ ಇಲ್ಲದಂತೆ ಅದರ ಸ್ವಾದ ಸವಿಯುತ್ತ… ದೇವರ ನಾಮ ಕೇಳುತ್ತಾ… ಕಿಟಕಿಯಾಚೆ ಕಾಣುವ ಪ್ರಪಂಚವ ಅಂದರೆ ನಿಶ್ಯಬ್ಧವಾಗಿ ಕರಗುತ್ತಿರುವ ಮಂಜು, ಆ ಮಂಜಿನಲ್ಲಿ ತೀಕ್ಷ್ಣವಾಗಿ ಹುಡುಕಿದರೆ ಕಾಣುವ ದೇವರ ಗುಡಿ, ಅಲ್ಲಲ್ಲಿ ಸ್ವೆಟರ್-ಶಾಲು ಹೊದ್ದು ನಡುಗುತ್ತಾ  ಓಡಾಡುತ್ತಿರುವ ಜನಗಳು ಕಾಣಿಸುತ್ತಾರೆ. ಚಹಾದ ಮೊದಲನೇ ಗುಟುಕೇರಿಸಿದಾಗ ಆಹಾ..!! ಎಂತಹ ರುಚಿ… ಮುಂದಿನ ಕೆಲಸಗಳಿಗೆ ಸ್ಪೂರ್ತಿಯ ಹುರಿದುಂಬಿಸುವ ಶಕ್ತಿ ಇದೆಯೇನೋ ಅದರಲ್ಲಿ ಎನ್ನಿಸುತ್ತದೆ. ಅದರ ಒಂದೊಂದು ಸಿಪ್ ಅನ್ನು ಸವಿಯುತ್ತ, ರುವಾಗ ಅದರ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಮನಸ್ಸಲ್ಲಿ ಏನೋ ತಳಮಳ. ಆದರೂ ಅದರ ರುಚಿ ಮೈಮನವನೆಲ್ಲ ಹರಡಿ ಮನಸ್ಸಿಗೆ ಹಿತವಾಗಿಸಿ ಸ್ವರ್ಗ ದರ್ಶನವ ಮಾಡಿಸಿದಂತೆ ಅನುಭವವಾಗುತ್ತದೆ!..ಅದರೊಂದಿಗೆ ಬೆರೆತ ಅಪ್ಪನ ಮಾತುಗಳು ಇನ್ನಷ್ಟು ಮುದ ನೀಡುತ್ತಿರುವಾಗ ಚಹಾದ ಕೊನೆಯ ಹನಿಯ ಸರದಿ. ಅದನ್ನೂ ಬಿಡದೆ ನಾಲಿಗೆಯ ತುದಿಯಿಂದ ಎಳೆದು ಸವಿಯುವಷ್ಟರಲ್ಲಿ ಮುಂದಿನ ಕೆಲಸದ ಬಗೆಗಿನ ಅರಿವಾಗಿ, ನೊಂದು ಚಹಾವನ್ನು ಮಿಸ್ ಮಾಡಿಕೊಳ್ಳುತ್ತಾ, ಜೊತೆಗೆ ತೂಗುಯ್ಯಾಲೆಯ ಮಿಸ್ ಮಾಡಿಕೊಳ್ಳುತ್ತಾ ಎದ್ದು ಅಡಿಗೆಮನೆಯ ಕಡೆಗೆ ನಡೆದರೆ ಮತ್ತೆ ಅದೇ ಚಹಾದ ನೆನಪು ಸಂಜೆವರೆಗೆ ನನ್ನನ್ನಾವರಿಸಿರುತ್ತದೆ.

ಒಂತರಾ ಕಾಯುವುದರಲ್ಲೂ ಹಿತವಿರುತ್ತದೆ ಚಹಾ ಐ ಮಿಸ್ ಯು… ಎಂದೆಂದು ಕೊಂಡು ನನ್ನ ಆಸೆಗೆ ಲಗಾಮು ಹಾಕಿ ಮುಂದಿನ ಕೆಲಸಗಳ ಕಡೆ ಗಮನ ಹರಿಸುತ್ತೇನೆ…..

ಈಗ ಹೇಳಿ ??!! ಈಗ ನಿಮಗೂ ನಾ ಮಾಡಿದ ಚಹಾದ ರುಚಿ ಹೀರುವ ಹಂಬಲ ಪುಟಿದೇಳುತ್ತಿದೆಯೇ  …?? ನನ್ನ ಚಹಾದ ಪರಿಮಳ ನಿಮಗೂ ತಲುಪಿತೇ..???
Advertisements

6 Comments »

 1. ಇಂಚರ,
  ಚಹಾ ಮತ್ತೇರಿಸಿ ಬಿಡ್ತು… 😉
  ಬೊಂಬಾಟ್, ಎಂತಹವರಿಗೂ ಇದನ್ನು ಓದಿ ಒಂದು ಕಪ್ ಚಹಾ ಕುಡಿಯ ಬೇಕೆನ್ನಿಸಿ ಬಿಡುತ್ತೆ, ತಾವು ಅಡುಗೆ ಮನೆ ಕಡೆ ವಲಸೆ ಹೊರಟಂತಿದೆ. ಚಹಾ ಆಯ್ತು, ತಿಂಡಿ ಯಾವಾಗ ಬರುತ್ತೆ 🙂

 2. khanditha putti nanigale bandu biduve nanagagi ondu cup tegedidu

 3. 3
  nagtalwar Says:

  ಅವ್ವವ್ವ..ನೀನು ಇಷ್ಟು ಛಲೋ ಚಹ ಮಾಡ್ತಿ ಅಂತ ಗೊತ್ತಾ ಇರ್‍ಲಿಲ್ಲಲ್ಲವ್ವಾ..ತಂಗೀ..! ನಾನು ಒಳ್ಳೇ ವರ ಕರಕೊಂಡು ಬಂದಾಗ ಇಂತಹದೊಂದು ಚಹ ಮಾಡಿಕೊಡವ್ವ ಅವನಿಗೆ; ಭಾವೀ ನನ್ನ ಅಳಿಯ ನಿನ್ನ ಚಹಕ್ಕಾ ಮಳ್ಳಾಗಿರಕ್ಕಲ್ಲ ಬಡ್ಡೀ ಮಗ…!
  -ನಾಗು,ತಳವಾರ್.

 4. 4

  ಇಂಚರ,

  ನಿಮ್ಮ ಈ ಬರವಣಿಗೆ ಟ್ರೈನಲ್ಲಿ ಇರಿಸಿದ ಬಿಸಿ ಬಿಸಿಯಾದ ಚಹಾದ ಗ್ಲಾಸನ್ನು ಹಿಡಿದು, ನಮಗೆ ತಂದು ಕೊಟ್ಟು, ಚಹಾದ ಆಹ್ಲಾದವನ್ನು ಆಸ್ವಾದಿಸಿದ ಹಾಗೆ ಇದೆ, ತುಂಬಾ ರುಚಿಕರವಾಗಿದೆ.

  ಹೀಗೆ ಬರಿತ್ತಾ ಇರಿ……..

 5. 5
  Soori - Kannadiga Says:

  Chaha yestu mukya beligina chalige….
  Adhbuthavagithe, olle ruchi ruchi yadha chaha kudidasthe ahaladakaravagidhe….
  Bega ondistu bisi bisi tindi madu…. barthini …..
  Jai Karnataka

 6. 6
  svatimuttu Says:

  ರಾಜೇಶ್,
  ತಿಂಡಿ ರೆಡಿ ಆಗುತ್ತಿದೆ….. ತಯಾರಾದ ನಂತರ ಕರೆಯುತ್ತೇನೆ ಬಂದು ಬಿಡಿ….:)

  ರೋಹಿಣಿ ಅಕ್ಕ,
  ಅಕ್ಕ, ಒಂದು ಕಪ್ ತೆಗೆದಿಟ್ಟಿದ್ದೇನೆ… ಬಿಸಿ ಆರಿ ಹೋಗತ್ತೆ ..ಬೇಗ ಬನ್ನಿ……

  ನಾಗಣ್ಣ,
  ಆಯ್ತು ಅಣ್ಣ ನೀವು ನನಗೆ ಗಂಡನ್ನು ಹುಡುಕಿ ಕರೆ ತಂದಾಗ ಇಂತಹದೇ ಚಹಾ ಮಾಡಿ ಕೊಡುತ್ತೇನೆ….:)

  ಮೂರ್ತಿ ,
  ಧನ್ಯವಾದಗಳು…..

  ಸೂರಿ ಅಂಕಲ್,
  ಬನ್ನಿ ಅಂಕಲ್ ತಿಂಡಿ ರೆಡಿ ಆಗುತ್ತಿದೆ……


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: