Archive for ಮಾರ್ಚ್ 2009

ಯುಗಾದಿ ಹಬ್ಬದ ಶುಭಾಶಯಗಳು

ಮಾರ್ಚ್ 27, 2009

ಸ್ನೇಹವೆಂಬುದು ಬೆಂಗಾಡಿನಲ್ಲಿ ಬೀಸುವ ತಂಗಾಳಿ ಇದ್ದಂತೆ……

ಮಾರ್ಚ್ 21, 2009

ಜೀವದ ಗೆಳತಿಯ ನೆನಪುಗಳು-೧

ಒಮ್ಮೆ ಬಾಳೆಂಬ ರಥದಲ್ಲಿ ಸಾಗುತ್ತಿರಬೇಕಾದಾಗ ಸುಂದರ ಹೂದೋಟವ ಕಂಡೆ, ಆ ಸುಂದರವಾದ ಹೂದೋಟವ ನೋಡಿ, ಇನ್ನು ನೋಡುವ ಆಸೆಯಾದರೂ ಮನಸ್ಸಲ್ಲಿದ್ದ ಹೊಟ್ಟೆಕಿಚ್ಚು ನನ್ನ ಕಣ್ಣುಗಳ ಅತ್ತ ನೋಡದಂತೆ ಮಾಡಿತು. ದಿನಗಳು ಉರುಳಿದವು. ಆದರೂ ಆ ಹೂದೋಟವೇ ಒಂದು ದಿನ ನನ್ನರಸಿ ಬರುತ್ತೆ ಎಂಬ ಊಹೇ ಸಹಾ ನನಗಿರಲಿಲ್ಲ. ..ಆದ್ರೆ ಆದದ್ದು ಇದೆ! ಆ ಹೂದೋಟದ ಬಗ್ಗೆ ನಂಗೆ ಹೆಮ್ಮೆ ಇತ್ತು, ಆಸೆ ಇತ್ತು, ಜೊತೆಗೆ ಈ ಹೊಟ್ಟೆಕಿಚ್ಚಿನ ಮೊಟ್ಟೆ ಕೋಳಿ ಬೇರೆ ನನ್ನ ಮನದಲ್ಲಿ ಕುಣಿದಾಡುತಿತ್ತು. ಆದರೆ ಆ ಹೂದೋಟವೇ ನನ್ನ ಹುಡುಕಿ ಬಂದಾಗ ನಾನು ಅದಕೆ ತಲೆಬಾಗಲೇ ಬೇಕಾಯಿತು. ಈ ಹೂದೋಟ ಯಾರು ಎಂದು ನೀವು ಯೋಚಿಸುತ್ತಿರಬೇಕಲ್ಲವೇ….? ಅವಳೇ ನನ್ನ ಆತ್ಮೀಯ ಗೆಳತಿ, ಚಂದ್ರಮುಖಿ, ಪ್ರಾಣಸಖಿ ಭಾವನ! ಅವಳು ನನಗೇ ಪರಿಚಯವಾದ ರೀತಿ ಇದೆ ತರನಾಗಿತ್ತು. ಹೂದೋಟದಷ್ಟೇ ಸುಂದರವಾಗಿಯೂ ಸಹಾ ಇದ್ದಾಳೆ.
ಸುಮಾರು ಒಂಬತ್ತು ವರುಷಗಳ ಹಿಂದೆ ಮೊದಲ ಭೇಟಿಯಾದಾಗ ಒಂದು ವರುಷ ಪೂರ್ತಿ ಆಕೆಯೊಡನೆ ನಾ ಪೈಪೋಟಿ ನಡೆಸುತ್ತಿದ್ದೆ ಆಕೆಯೂ ಸಹಾ….!! ಆದರೆ “ಸ್ನೇಹ” ಅನ್ನುವ ಅನನ್ಯ ಬಂಧನ ಯಾವ ಘಳಿಗೆಯಲ್ಲಿ ನಮ್ಮಿಬ್ಬರ ನಡುವೆ ಚಿಗುರೊಡೆದು ಬೇರೂರಿಬಿಟ್ಟಿತೋ ..ನಾ ಅರಿಯೆ ! ಈ ಪೈಪೋಟಿ ಇರಿಸು-ಮುರಿಸಿನ ನಡುವೆ ಒಂದು ವಸಂತ ಹಾರಿ ಹೋಗಿತ್ತು. ಸುಂದರವಾದ ಬಾಳಿಗೆ ಈ ಗೆಳತಿಯ ಪ್ರವೇಶ ತುಂಬಾನೇ ಹಿತ ನೀಡಿತ್ತು.ಅಮಾವಾಸ್ಯೆಯ ದಿನಗಳು ಕಳೆದು ಹುಣ್ಣಿಮೆಯ ಬೆಳಕು ಎಲ್ಲೆಡೆ ಹರಡಿತ್ತು , ಚಳಿಗಾಲದ ಎಲೆಗಳು ಉದುರಿ ..ವಸಂತಕಾಲ ಮನೆಬಾಗಿಲಿಗೆ ಬಂದು ತಳಿರುತೋರಣವಾಗಿತ್ತು.ಇಂತಹ ಅಮೃತ ಘಳಿಗೆಯಲ್ಲಿ ಆಕೆ ತಂಗಾಳಿಯಾಗಿ ನನ್ನ ಬಾಳಲ್ಲಿ ಬಂದಳು. . ನಮ್ಮಿಬ್ಬರಲ್ಲಿ ತುಂಬಾ ಒಂದೇ ತರನಾದ ಭಾವನೆಗಳಿದ್ದವು.. ವಸ್ತುಗಳು ಸಹಾ ಇದ್ದವು! ಒಂದು ರೀತಿಯಲ್ಲಿ ಜನ್ಮ-ಜನ್ಮದ ಸಂಬಂಧವಿದೆ ಎಂಬಂತೆ ಭಾಸವಾಗತೊಡಗಿತ್ತು .ಹೀಗಿರುವಾಗ ಒಮ್ಮೆ ಸುಂದರವಾಗಿ ಅರಳಿದ್ದ ಹೂದೋಟವು ಒಣಗಿತ್ತು, ಚಂದಿರನ ಮುಖದಲ್ಲಿ ಕಳೆಗುಂದಿತ್ತು , ಭಾವನೆಗಳು ನೋವಾಗಿ ಹರಿಯತೊಡಗಿತ್ತು , ಅವಳ ಪ್ರಾಣ ನನ್ನ ಕೈಲಿತ್ತು, ಧಾರಾಕಾರವಾಗಿ ಬರುತ್ತಿದ್ದ ಅವಳ ಕಂಬನಿ ನನ್ನ ಮಡಿಲ ತೋಯ್ದಿತ್ತು .. ಒಂದು ಕ್ಷಣ ಏನು ಅರಿಯದೆ,ಇಷ್ಟೊಂದು ಕಂಬನಿಗಳ ಹಿಂದಿನ ನೋವೇನೆಂಬುದನ್ನು ತಿಳಿಯುವ ಕಾತುರವಾಯಿತು. ಅವಳ ಗಲ್ಲವನ್ನು ನನ್ನೆರಡು ಕೈಗಳಿಂದಿಡಿದು ಕೇಳಿದೆ, “ಹೇ..ಭಾವನ , ಏನಯ್ತು? ನಿನ್ನ ನೋವೇನೆಂಬುದ ಹೇಳುವೆಯಾ ಕಂದ..??” ಎಂದೆ. ಅದಕ್ಕೆ ಮೌನವೇ ಉತ್ತರವಾಗಿತ್ತು. ಆದರೂ ಎಡಬಿಡದೆ ಆ ಕಣ್ಣೀರು ಅವಳ ಮುದ್ದಾದ ಕಣ್ಣುಗಳಿಂದ ಸುರಿದು ಗಲ್ಲದ ದಾರಿ ಹಿಡಿದಿದ್ದನ್ನು ತಾಳಲಾರದೆ ನನ್ನ ಕಣ್ಣುಗಳೂ ಅಳತೊಡಗಿದವು. ಆ ದಿನವೆಲ್ಲಾ ಹೀಗೆ ಕಳೆಯಿತು. ನನಗೆ ಏನೂ ಅರಿಯದವಳಂತೆ ಮೂಖ ಪ್ರೇಕ್ಷಕಳಾಗಿ ಅವಳ ಕಣ್ಣೊರೆಸುವ ಪ್ರಯತ್ನವ ಮಾಡಿದೆ. ಆಗೊಮ್ಮೆ-ಈಗೊಮ್ಮೆ ಕೆಲವು ಧೈರ್ಯದ ನುಡಿಗಳ ಹೇಳಿ ಅವಳ ಸಂತೈಸುವುದರೊಳಗಾಗಿ ಸಂಜೆಯಾಗಿತ್ತು.
ಮುಂದಿನ ದಿನ ಶಾಲೆಗೆ ಬಂದವಳೇ ನನ್ನ ಕೈಗೊಂದು ಚೀಟಿ ಇಟ್ಟು ಹೊರಟು ಹೋದಳು. ನನಗೋ ಓದುವ ತವಕ..ಆದರೆ ಅಂತಹ ಮುಕ್ತ ವಾತಾವರಣಕ್ಕಾಗಿ ಮನ ತವಕಿಸುತ್ತಿತ್ತು. ಹಾಗೂ – ಹೀಗೂ ಒಂದು ಪ್ರಶಾಂತವಾದ ಸ್ಥಳ ಸಿಕ್ಕಿತು…ಆ ಚೀಟಿಯ ತೆರೆದು ಓದಲು ಶುರುಮಾಡಿದೆ……ಅದರಲ್ಲಿ ಹೀಗೆ ಬರೆದಿತ್ತು..

ಪ್ರೀತಿಯ ಕವನ,

ಭಾವನ ಅಂತ ಹೆಸರಿಟ್ಟುಕೊಂಡು ಭಾವನೆಗಳ ಅರ್ಥೈಸಿಕೊಳ್ಳದೆ ಇದ್ದ ಸಮಯದಲ್ಲಿ, ಭಾವನೆಗಳ ಹಂಚಿಕೊಳ್ಳಲು ಒಂದು ಪುಟ್ಟ ಹ್ರುದಯವೂ ನನ್ನೊಡನಿಲ್ಲದಿದ್ದ ಸಮಯದಲ್ಲಿ ಭಾವನೆಗಳಿಗೆ ಜೀವತುಂಬಿದ ನನ್ನ ಪ್ರೀತಿಯ ಗೆಳತಿಗೆ ನಾನೆಂದೂ ಋಣಿ . ನಾನು ಇಷ್ಟು ದಿನ ನಿನ್ನನು ಅರ್ಥೈಸಿಕೊಳ್ಳದೇ ನಿನ್ನನು ತುಂಬಾ ನೋಯಿಸಿಬಿಟ್ಟೆ,ನಿನ್ನ ಮುಗ್ಢ ಮನಸಿನ ನಡುವೆ ನನ್ನ ಹುಸಿ ಪ್ರೀತಿಯ ಬೆರೆಸಿದ್ದೆ, ಸಾಧ್ಯವಾದರೆ ನನ್ನ ಕ್ಷಮಿಸಿಬಿಡು. ಈಗ ನಾನು ಒಂದು ತೊಂದರೆಯಲ್ಲಿ ಸಿಕ್ಕಿಬಿದ್ದಿದ್ದೇನೆ. ನನ್ನ ತಂದೆ ಎಲ್ಲ ಲೊಸ್ ಮಾಡಿಕೊಂಡಿದ್ಡಾರೆ, ವಿಪರೀತವಾಗಿ ಕುಡಿಯೋಕೆ ಶುರು ಮಾಡಿಕೊಂಡಿದ್ಡಾರೆ, ಒಂದು ಪುಸ್ತಕ ತೆಗೆದುಕೊಳ್ಳಲೂ ಸಹಾ ನನ್ನಲ್ಲಿ ಹಣವಿಲ್ಲ.. ಏನೂ ದಿಕ್ಕು ತೋಚದಂತಾಗಿದೆ. ನೆಮ್ಮದಿ ಇಲ್ಲದಂತಾಗಿದೆ..ಮನೆಯಲ್ಲಿ ದಿನಾ ರಂಪ-ರಗಳೆ….ನನ್ನ ಕಂಬನಿಗಳ ಹಿಂದಿರುವ ಕಾರಣ ಇದೇ..ನನಗೆ ಬಾಯಿ ಬಿಟ್ಟು ಹೇಳಲು ಸಾಧ್ಯವಾಗಲಿಲ್ಲ, ಅದಕ್ಕೆ ಈ ಪತ್ರದ ಮೂಲಕ ನನ್ನ ನೋವನ್ನು ತೆರೆದಿಟ್ಟಿದ್ದೇನೆ. ನಿನ್ನಂತಹ ಒಳ್ಳೆಯ ಗೆಳತಿ ಸಿಕ್ಕಿದ್ದು ನನ್ನ ಪುಣ್ಯ. ಇನ್ನೆಂದಿಗೂ ನಿನ್ನ ನೋಯಿಸುವುದಿಲ್ಲ, ನನ್ನಾಣೆ!

ಇಂತಿ,
ಸದಾ ನಿನ್ನವಳೇ ಆದ
ಭಾವನ

ಎಂದು ಬರೆದಿತ್ತು. ಜೊತೆಗೆ ಇನ್ನೊಂದು ಚೀಟಿ ಇತ್ತು, ಅದನ್ನು ತೆಗೆದು ನೋಡಿದ ತಕ್ಷಣ ನನ್ನ ಕಣ್ಣುಗಳಲಿ ನೀರು ತುಂಬಿ ಬಂದಿತು, ಜೊತೆಗೆ ಕೋಪವೂ ಸಹಾ ನುಗ್ಗಿ ಬಂದು ನನ್ನ ಕಣ್ಣುಗಳನ್ನು ಕೆಂಪೇರಿಸಿತು.ಏಕೆಂದರೆ ಅವಳು ಆಕೆಯ ರಕ್ತದಲ್ಲಿ ನನ್ಹೆಸರ ಬರೆದಿದ್ದಳು. ನನ್ಗೆ ಒಂದು ಕ್ಷಣ ದಿಕ್ಕೇ ತೋಚದಂತಾಗಿ ಅಲ್ಲಿಯೇ ಕುಸಿದುಬಿದ್ದೆ.ನಂತರ ಕ್ಲಾಸ್ ಗಳು ಶುರುವಾದವು. ಅವಳು ಮತ್ತೆ ನನಗೆ ಸಿಕ್ಕಿದ್ದು ಮಧ್ಯ್ಹಾಹ್ನ ಊಟದ ಸಮಯದಲ್ಲಿ…ಅವಳೊಡನೆ ಮಾತನಾಡುವವರೆಗೂ ನನಗೆ ನೆಮ್ಮದಿಯಿಲ್ಲದಂತಾಯಿತು.ಬೇಗ-ಬೇಗನೆ ಊಟ ಮುಗಿಸಿ ಅವಳ ಕೈ ಹಿಡಿದು ಮೆಟ್ಟಿಲುಗಳ ಬಳಿ ನಡೆದೆ….ಆಕೆ ತುಂಬಾನೆ ಸೂಕ್ಷ್ಮ..ಅಳೋದಕ್ಕೆ ಶುರುಮಾಡಿದಳು, ಆಕೆಯ ಕಂಬನಿಗಳು ನನ್ನ ಹಿಂಸಿಸತೊಡಗಿತ್ತು, ಅವಳ ಕಂಬನಿ ನನ್ನ ಕೋಪವ ಒಂದೇ ಕ್ಷಣದಲ್ಲಿ ಕರಗಿಸಿಬಿಟ್ಟಿತು.. ಮನಃಬಿಚ್ಚಿಮಾತನಾಡುವಂತೆ ಕೋರಿಕೊಂಡೆ. ಸುಮಾರು ಹೊತ್ತು ಮಾತನಾಡಿದ ಬಳಿಕ ಅವಳ ಸ್ಥಿತಿ ಸಾಧಾರಣವಾಯಿತು. ಮನಸ್ಸಲ್ಲಿ ಬೆಂಕಿಯನ್ನಿಟ್ಟುಕೊಂಡು ಹೊರಗೆ ಸದಾ ಹಸನ್ಮುಖಿಯಾಗಿದ್ದ ಅವಳ ಭಾವನೆಗಳು ಅಂದು ನನಗೆ ಅರ್ಥವಾಗತೊಡಗಿತು. ಆಕೆ ನೂರಾರು ಕಷ್ಟಗಳ ಸುಳಿಯಲ್ಲಿ ಸಿಕ್ಕಿ ಬಿದ್ದು ಹೊರಬರಲಾರದೆ ಒದ್ದಾಡುತ್ತಿದ್ದಳು, ಅಂತಹ ಸಂಧರ್ಭದಲ್ಲಿ ನನ್ನದೊಂದು ಅಳಿಲು ಸೇವೆಯೂ ನಡೆಯಿತು, ಆದರೆ ಅದು ಸಾಕಾಗಲಿಲ್ಲ, ಆದರೆ ನನ್ನಿಂದಾಗೋಂತದ್ದು ಅಷ್ಟೇ ಆಗಿತ್ತು, ಆ ಕ್ಷಣಕ್ಕೆ…. ಆದರೆ ಅವಳಿಗೆ ಧೈರ್ಯ ತುಂಬುವ ಸಾಹಸಕ್ಕೆ ಕೈ ಹಾಕಿ ಸಫಲಳಾದೆ. ಅವಳ ನೋವಿಗೆ,ಕಣ್ಣೀರಿಗೆ ನನ್ನ ಮಡಿಲನ್ನು ಆಕೆಗೆ ಧಾರೆ ಎರೆದೆ. ದಿನಾ ಆಕೆ ತನ್ನ ಭಾವನೆಗಳನ್ನು ಪತ್ರದ ಮೂಲಕ ಹಂಚಿಕೊಳ್ಳುತ್ತಿದ್ದಳು.., ನಾನು ಸಹಾ ಹಾಗೆಯೇ ಪ್ರತ್ಯುತ್ತರವ ನೀಡುತ್ತಿದ್ದೆ. ಪ್ರತಿ ದಿನಾ ಒಂದು ಚಿತ್ರವ ಬಿಡಿಸಿ ಕೊಡುತ್ತಿದ್ದಳು..ಅವಳ ಭಾವನೆಗಳಿಗೆ ಆ ಚಿತ್ರಗಳು ಸಾಕ್ಷಿ ಯೆಂಬಂತೆ! ಒಂದು ರೀತಿಯಲ್ಲಿ ಮೌನ ಸಂಭಾಶಣೆ ಇಬ್ಬರಿಗೂ ಹಿತ ನೀಡಿತ್ತು..

ದಿನಗಳು ಉರುಳುತ್ತಿತ್ತು.ಆಕೆ ನನಗೆ ತುಂಬಾ ಆಪ್ತಳಾದಳು.ಅಕ್ಕ-ತಂಗಿಯರಿಗಿಂತ ಹೆಚ್ಚು, ಅಮ್ಮ – ಮಗಳಿಗಿಂತ ಹೆಚ್ಚು ಆತ್ಮೀಯತೆ, ನಿಶ್ಕಲ್ಮಶವಾದ ಪ್ರೀತಿ ಅಷ್ಟೇ ಇದ್ದಿದ್ದು, ಅದೇ ಎಷ್ಟೋ ನೆಮ್ಮದಿ ನೀಡಿತ್ತು.ಆಕೆ ನನ್ನನ್ನೆಷ್ಟು ಅಚ್ಚಿಕೊಂಡಳೆಂದರೆ ಆಕೆಗೆ ನಾನೆ ಪ್ರಪಂಚವಾದೆ, ನಾನು ಇನ್ಯಾರೊಡನೆಯಾದರೂ ತುಂಬಾ ಸಲುಗೆ, ಆತ್ಮೀಯತೆಯಿಂದ ಮಾತನಾಡಿದರೆ ನನಗೆ ಆ ಸಂಜೆ ಮಹಾಮಂಗಳಾರತಿ ನಡೆಯುತ್ತಿತ್ತು, ಅಷ್ಟು ಆಕೆಗೆ ನಾ ಇಷ್ಟವಾಗತೊಡಾಗಿದೆ, ನನಗೂ ಸಹಾ, ಆದರೆ ಏಕೋ ಅವಳಷ್ಟಿರಲಿಲ್ಲ..ದಿನೇ-ದಿನೇ ಆಕೆಯ ಮುಖ ಅರಳತೊಡಗಿತ್ತು, ನೂರಾರು ನೋವುಗಳ ಮಧ್ಯೆ ಒಬ್ಬ ಗೆಳತಿ ಸಿಕ್ಕಿದ್ಡು ಆಕೆಗೆ ನೆಮ್ಮದಿಯ ನೀಡಿತ್ತು. ಒಂದು ದಿನಾ ನಾ ಶಾಲೆಗೆ ರಜೆ ಹಾಕಿದರೆ ಆಕೆಗೆ ತಡೆಯಲಾರದೆ ಫೋನ್ ಮಾಡುತ್ತಿದ್ದಳು. ಒಟ್ಟಿಗೆ ಊಟ, ಆಟ, ಪಾಠ ನಡೆಯುತ್ತಿತ್ತು..ಇನ್ನೇನು ಶಾಲೆ ಮುಗಿಯುವ ವೇಳೆ ಹತ್ತಿರವಾಗುತ್ತಿತ್ತು…ಇನ್ನೂ ಇಬ್ಬರು ದೂರವಾಗಬೇಕೆಂಬ ನೋವು ನಮ್ಮಿಬ್ಬರ ಮನಗಳಲ್ಲಿ  ಬೇರೂರಿಬಿಟ್ಟಿತ್ತು. ಆದರೂ ವಿಧಿ ಬರಹ ನಮ್ಮಿಬ್ಬರ ದೇಹಗಳ ದೂರ ಮಾಡಿತ್ತೇ ವಿನಹ ಮನಸ್ಸುಗಳನ್ನಲ್ಲ!… ಮನಸ್ಸುಗಳೂ ಇನ್ನು ಹೆಚ್ಚು ಹತ್ತಿರವಾಗಲು ಅವಕಾಶ ಕಲ್ಪಿಸಿಕೊಟ್ಟಿತು ಎಂದರೆ ತಪ್ಪಾಗಲಾರದು. ನಾವಿಬ್ಬರೂ ಬೇರೆ-ಬೇರೆ ಕಾಲೇಜಿನಲ್ಲಿ ಸೇರಿದ್ದೆವು. ಆದ್ರೂ ವರಕ್ಕೊಮ್ಮೆ ಅವಳ ಪತ್ರ ಹಾಯ್ದು ಬರುತ್ತಿತ್ತು….ಎರಡು-ಮೂರು ತಿಂಗಳಿಗೊಮ್ಮೆ  ಭೇಟಿಯಾಗುತ್ತಿದ್ದೆವು. ವರುಷಗಳು ಕಳೆದರೂ ಸ್ನೇಹ ಬಲಗೊಳ್ಳುತ್ತಿತ್ತು. ಭಾವನೆಗಳು ಇನ್ನಷ್ಟು ಅರಳುತ್ತಿತ್ತು.  ನಮ್ಮಿಬ್ಬರ ನಡುವೆ ಹೇಳದಂತಹ ಗುಟ್ಟೇನೂ ಇರಲಿಲ್ಲ. ಎಂತಹ ಸಂಧರ್ಭದಲ್ಲೂ ಅವಳಿಗೆ ನಾ ಆಸರೆಯಾದೆ, ನನಗೆ ಅವಳಾಸರೆಯಾದಳು. ಜೀವನ ಹಿತವಾಗಿ ಸಾಗಿತ್ತು. ಶಾಲೆಯಲ್ಲಿದ್ದಾಗ ನಮ್ಮಿಬ್ಬರ ಆತ್ಮೀಯತೆಯ ಬಗ್ಗೆ ಎಲ್ಲರ ಬಾಯಲ್ಲೂ ಕೇಳುತ್ತಿದ್ದೆವು.ಆಗ ತಂಬಾನೇ ಖುಷಿಯಾಗುತ್ತಿತ್ತು.
ಕಾಲೇಜಿನಲ್ಲಿ ಅವಳಿಲ್ಲದೆ ತುಂಬಾ ಒಂಟಿತನ ಕಾಡತೊಡಗಿತು. ಅವಳ ಪ್ರೀತಿನಾ ತುಂಬಾ ಮಿಸ್ಸ್ ಮಾಡಿಕೊಳ್ಳುತ್ತಿದ್ದೆ… ಅವಳು ನನ್ನ ಹುಸಿರೆಂಬಂತೆ ಅವಳ ಸ್ನೇಹವ ಕಾಪಾಡಿದೆ. ಒಮ್ಮೆ ಇದ್ದಕ್ಕಿದ್ದಂತೆ ಅವಳು ಸ್ವಲ್ಪ ಪ್ರಮಾಣದ ವಿಷ ಕುಡಿದು ಆಸ್ಪತ್ರೆಗೆ ಸೇರಿರುವುದು ತಿಳಿದು ನನಗೆ ಹುಸಿರೇ ನಿಂತಂತಾಗಿ ಆಸ್ಪತ್ರೆಗೆ ಓಡಿದೆ. ಅವಳ ಆ ಸ್ಥಿತಿ ನೋಡಿ ನಾ ಬದುಕಿರುವುದಾದರೂ ಏಕೆ ಎಂಬುವಷ್ಟು ಹಿಂಸೆಯಾಯಿತು. ಅವಳ ಸ್ಥಿತಿ ನನ್ನ ಮನಸ್ಸ ಹಿಂಡಿತು.. ಏನೂ ಅರಿಯದವಳಂತೆ ನೆಮ್ಮದಿಯಿಂದ ಕಣ್ಣ ಮುಚ್ಚಿ ಉಸಿರಾಡುತ್ತಿದ್ದಳು…. ಅವಳ ಕೈಗಳನ್ನು ನನ್ನ ಎರಡೂ ಕೈಗಳಲ್ಲಿ ಹಿಡಿದು ಅಳಲಾರಂಬಿಸಿದೆ…ನನ್ನ ಕಣ್ಣ ಹನಿಗಳು ಅವಳ ಕೈ ಮೇಲೆ ಬಿದ್ದೋ ಏನೋ ಮೆಲ್ಲಗೆ ತನ್ನ ಕಣ್ಣುಗಳ ತೆರೆದು ಶಾಂತಚಿತ್ತದಿಂದ ನನ್ನೆಡೆ ನೋಡುತ್ತಿದ್ದಳು..ಮಾತನಾಡಲೂ ಸಹಾ ಆಕೆಯಲ್ಲಿ ಶಕ್ತಿಯಿರಲಿಲ್ಲ…ಏಕೆ, ಏನು,ಹೇಗಯ್ತು ಎಂದು ಕೇಳಲು ಸಹಾ ನನ್ನ ಸ್ವರ ಹೊರಬರಲಾರದೆ ಧರಣಿ ಕುಳಿತಿತ್ತು. ಎಷ್ಟೋ ಹೊತ್ತು ಚೇತರಿಸಿಕೊಂಡ ನಂತರ ಆಕೆಯ ತಾಯಿಯನ್ನು ಕೇಳಿದಾಗ ವಿವರಿಸಿದ್ದು ಹೀಗೆ..”ಮನೆಯಲ್ಲಿ ನೆಮ್ಮದಿಯಿಲ್ಲ, ಅವಳ ತಂದೆ ಕುಡಿದು ಬಂದು ದಿನಾ ಹೊಡೆಯುತ್ತಾರೆ, ಒಂದು ಹೊತ್ತು ಊಟಕ್ಕೂ ತೊಂದರಯಾಗಿದೆ, ಇನ್ನೂ ೩ ಜನ ಅಕ್ಕಂದಿರ ಮದುವೆ ಮಾಡಬೇಕು….ಇವಳು ಇನ್ನೂ ಚಿಕ್ಕವಳು ಏನೂ ಅರಿಯದವಳು ಪರಿಸ್ಥಿತಿಗೆ ಹೆದರಿ ಹೀಗೆ ಮಾಡಿಕೊಂಡಿದ್ದಾಳೆ…ಸಧ್ಯ ನಾವು ನೋಡಿ ಅವಳ ಉಳಿಸಿಕೊಂಡೆವು..ಇಲ್ಲವಾದರೆ ಇಷ್ಟು ಹೊತ್ತಿಗೆ ಆಕೆ ನಮ್ಮ ಪಾಲಿಗೆ ಉಳಿಯುತ್ತಿರಲಿಲ್ಲ….ಎಂದು ತನ್ನ ದುಃಖವ ನನ್ನೊಡನೆ ತೋಡಿಕೊಂಡರು.ಅವಳು ಗುಣವಾಗುವುದಕ್ಕೆ ಸುಮಾರು ದಿನಗಳು ಹಿಡಿಯಿತು…..
ದಿನಗಳೆದಂತೆ ಆಕೆ ಚೇತರಿಸಿಕೊಂಡಳು, ನನಗೆ ಹೋದ ಜೀವ ಮತ್ತೆ ಬಂದಿತು..ಅವಳ ಭಾವನೆಗಳ ಸಾಗರದಲ್ಲಿ ನಾ ಮಿಂದೆ, ಇಂದಿಗೂ ಆಕೆ ನನ್ನವಳು, ನನ್ನ ಆಪ್ತ ಗೆಳತಿ, ನಮ್ಮಿಬ್ಬರ ಸ್ನೇಹ ಚಿರಕಾಲ ಉಳಿಯಲಿ ಎಂದು ದೇವರಲ್ಲಿ ಪ್ರತಿನಿತ್ಯ ಬೇಡುತ್ತೇನೆ. ಅಂದವಳು ಭಾವಜೀವಿ ಅಂದಿದ್ದೆ ನೆನಪಿದೆಯಾ? ಆದರೆ ಈಗವಳು ಆ ರೀತಿಯಾದ ನೂರು ಕಷ್ಟಗಳು ಬಂದರೂ ಎದೆಗುಂದದೆ ಎದುರಿಸಿ ನಿಲ್ಲುವ ನಿಲುವನ್ನು ಬೆಳೆಸಿಕೊಂಡಿದ್ದಾಳೆ. ಈಗಲೂ ಆ ನೋವು-ದುಃಖಗಳಿದ್ದರೂ ಆಕೆ ಖುಷಿಯಾಗಿದ್ದಾಳೆ.. ದೇವರು ಅಷ್ಟು ನೋವು ಕೊಟ್ಟರೂ ಆ ದೇವರನ್ನೂ ಪ್ರೀತಿಸುತ್ತಾಳೆ..ಅವಳಿಗೆ ನನ್ನ ಬಗ್ಗೆ ಎಷ್ಟು ಪ್ರೀತಿ ಎಂದರೆ ಖುಷಿಯಿಂದಿದ್ದರೆ ನನ್ನ ಖುಷಿಯಲ್ಲಿ ಅವಳ ಖುಷಿಯ ಕಾಣುತ್ತಾಳೆ, ದುಃಖದಲ್ಲಿದ್ದರೆ ಹೆಗಲು ನೀಡಿ ಧೈರ್ಯ ಹೇಳುತ್ತಾಳೆ.. ಜೀವನದ ಪ್ರತಿ ಹೆಜ್ಜೆಯಲ್ಲೂ ನನ್ನ ನೆನೆಯುತ್ತಾಳೆ…. ಇಂತಹ ಜೀವದ ಗೆಳತಿ ಎಂದೆಂದಿಗೂ ಖುಷಿಯಾಗಿರಲಿ ಎಂಬುದೇ ನನ್ನಾಸೆ….ನನ್ನ ಕೈ ಎಂದೂ ಹಿಡಿದಿರು…ನಿನ್ನ ಹ್ರುದಯದಲ್ಲಿ ಸದಾ ನಾ ಇರುತ್ತೇನೆ….

“ಅನುಭವಕ್ಕಿಂತ ಅನುಭವದ ನೆನಪೇ ಸಿಹಿ”…..ಅಲ್ಲವೇ???????

ಆಕಾಶದೀಪ

ಮಾರ್ಚ್ 19, 2009

ಹೃದಯಾಂತರಾಳದ ಭಾವ ತುಮುಲಗಳಿಗೆ
ಎನಗರಿಯದೆ ಜೀವ ತುಂಬಿ
ಶುಶ್ಕತೆಯಲ್ಲಿ ಬಾಡಿದ ಹೂವಿಗೆ
ತುಂತುರು ಹನಿಯ ಜೀವಾಮೃತವ ನೀಡಿ
ಬಾಳಿಗೆ ಬೆಳದಿಂಗಳ
ರಂಗನ್ನು ಚೆಲ್ಲಾಡಿಸಿ
ಅಂತ್ಯದವರೆಗೂ ಎನ್ನೊಡನಿರು
ನನ್ನ ಹರಸಿ….