Archive for ಏಪ್ರಿಲ್ 2009

ಪ್ರತಿಬಿಂಬ

ಏಪ್ರಿಲ್ 23, 2009

ಮುದುಡಿ ನಗುತಿರುವ

ಮೊಗ್ಗಿನೊಳಗಿನ ಕುಸುಮದಂತೆ

ನನ್ನ ನಗುವೊಳು

ನಿನ್ನುಸಿರ ಬೆರೆಸಿರುವೆ..

ಗುಹೆಯೊಳಡಗಿರುವ ನೂರಾರು ಸತ್ಯಗಳ

ನಿಗೂಢ ಮೌನದಂತೆ

ಎನ್ನ ಮೌನದೊಡನೆ ಬೆರೆತು

ಸಂಭಾಷಣೆ ನಡೆಸುತಿರುವೆ..

ಸಮಸ್ತ ಲೋಕಕೂ

ಒಂದೇ ಆಕಾಶ ಚಪ್ಪರವಿರುವಂತೆ

ನಮ್ಮ ಮಾತು-ಭಾವ ತರಂಗಗಳು

ಒಂದಾಗಿ ಬೆರೆತು ಹಾಡುತಿವೆ..

ಒಡಲ ತುಂಬಿಕೊಂಡಿರುವ ತಾಯಿಯ

ಕಂಗಳಲಿ ಪ್ರಜ್ವಲಿಸುವ ಜ್ಯೋತಿಯಂತೆ

ನಿನ್ನ ನೆನಪುಗಳು ನನ್ನೊಳಗೆ ತುಂಬಿ

ನನ್ನ ಬಾಳ ಬೆಳಗುತಿದೆ ..

ಅನಿರೀಕ್ಷಿತವಾಗಿ ಸಾಗರದಲ್ಲಿ ಸಿಕ್ಕ ಸ್ವಾತಿಮುತ್ತು

ಏಪ್ರಿಲ್ 12, 2009

ಆ ದಿನ ಭಾನುವಾರ ಸಂಜೆಯಾಗುತ್ತಿತ್ತು… ಎಂದಿನಂತೆ ಸಾಗರದಲ್ಲಿ ಅಸ್ತಂಗತನಾಗುವ ಸೂರ್ಯನನ್ನು ಕಂಡು ಅದರಿಂದಾಗುವ ಆನಂದದ ಸವಿಯನ್ನು ಸವಿಯಲು ಆಗದೆಯೇ ಮರಳಿನಲ್ಲಿ ಕಾಲ್ಗಳನ್ನು ಎತ್ತಿಡಲಾರದೆ,ನನ್ನ ಭಾರವಾದ ಮನಸ್ಸನ್ನು ಹೊತ್ತು ಚಿಂತಾಕ್ರಾಂತಳಾಗಿ ಸಾಗರದ ಅಲೆಗಳ ಮುಟ್ಟಲು ಸಾಗುತ್ತಿದ್ದೆ… ಯಾಕೋ ಅಂದು ಸೂರ್ಯ ಎಷ್ಟು ಹೊತ್ತಾದರೂ ಮುಳುಗದೆಯೇ  ಮೋಡಗಳ ಹಿಂದೆ ಅವಿತು ಕುಳಿತಿದ್ದ …. ಎಂದಿನಂತೆ ಅಲೆಗಳೊಡನೆ ಕಾಲ್ಗಳ ತೊಯ್ದು ಆಟವಾಡದೆ,ಮನ ಬಿಚ್ಚಿ ಹಾಡದೇ, ಕಾಲ್ಗಳ ಬಳಿ ಬಂದು ಮುತ್ತಿಡುವ ಕಪ್ಪೆ-ಚಿಪ್ಪುಗಳ ಆಯ್ದು ಸೆರಗಿನೊಳಗೆ ಕಟ್ಟಿಕೊಳ್ಳದೆಯೇ ಕಾಲು ನೀಡಿ ಮರಳ ಹಾಸಿಗೆಯ ಮೇಲೆ ಕುಳಿತೆ……… ಆಗ ನನಗೆ ನೆನಪಿಗೆ ಬಂದದ್ದು “ಆದಿ….. ಆದಿತ್ಯನ ನೆನಪು…….”….

ಆದಿ ಅನಿರೀಕ್ಷಿತವಾಗಿ ಕೋಲ್ಮಿಂಚಿನಂತೆ ಬಾಳ ಪುಟಗಳ ನಡುವೆ ಪ್ರವೇಶಿಸಿ ಮಿಂಚಿನ ಹೊಳಪನ್ನು ಕೆಲ ಕಾಲ ಬೀರಿ ಹೋದ ಜೀವ…ಪ್ರತಿದಿನ ಅವನೊಡನೆ ಮಾತನಾಡದಿದ್ದರೂ ಭಾನುವಾರ ಸಂಜೆ ೪ಕ್ಕೆ ಸರಿಯಾಗಿ ಆದಿ-ನಾನು  ಜೊತೆಗೂಡಿ ಬಂದು ಮರಳ ರಾಶಿಯ ಮೇಲೆ ಪವಡಿಸಿ, ಸೂರ್ಯನ ಹೊನ್ನ ಕಿರಣಗಳ ತೊಟ್ಟಿಲಲ್ಲಿ ಭವಿಷ್ಯದ ಬಗೆಗೆ ಕನಸುಗಳ ಹೆಣೆಯುತ್ತಾ ತಂಪಾದ ಸ್ಪರ್ಶವ ನೀಡುವ ಗಾಳಿಯೊಡನೆ ಬೆರೆತು ಮಧುರ ಪಿಸುಮಾತುಗಳನಾಡುತ್ತಾ, ಜೊತೆಗೆ ಆದಿಯ ಮೊಬೈಲಿನಲ್ಲಿ ನನಗಿಷ್ಟವಾದ “ನೂರು ಜನ್ಮಕೂ..ನೂರಾರು ಜನ್ಮಕೂ”..ಹಾಡನ್ನು ಕೇಳುತ್ತಾ, ಸಾಗರದ ಅಲೆಗಳ ಭೋರ್ಗರೆತಕ್ಕೆ  ಹೆದರಿ ಅವನ ಎದೆಯೊಳಗೆ ಬಂಧಿತಳಾಗಿ ಬಿಡುತ್ತಿದ್ದೆ….. ಅವನು ನನ್ನ ಹಣೆಗೆ ಮುತ್ತಿಟ್ಟು ಹೋಗೋಣ ಎಂದು ಕಣ್ಣ ಸನ್ನೆಯಿಂದ ಹೇಳಿದಾಗಲೇ ನನಗೆ ಹೊರಗಿನ ಪ್ರಪಂಚದ ಸಮಯದ ಅರಿವಾಗುತ್ತಿದ್ದುದು..

ಎಷ್ಟೋ ಬಾರಿ ಮರಳ ಮೇಲೆ ನಮ್ಮಿಬ್ಬರ ಹೆಸರನ್ನು ಅವನು ಬರೆದಿದ್ದಾಗ ಭಯಂಕರ ಅಲೆಗಳು ಬಂದು ಹೆಸರ ಗುರುತನ್ನೂ ಉಳಿಸದೆ ಕೊಚ್ಚಿಕೊಂಡು ಹೋಗುತ್ತಿದ್ದಾಗ ಆದಿಯೊಡನೆ ಜಗಳಕ್ಕಿಳಿಯುತ್ತಿದ್ದೆ,.. ಜೊತೆಗೆ ಆ ಅಲೆಗಳಿಗೆ ಮನಃ ತೃಪ್ತಿಯಾಗುವಷ್ಟು ಬೈಯುತ್ತಿದ್ದೆ……. ಎಷ್ಟೇ ನಿರಾಕರಿಸಿದರೂ ಆದಿ ಮರಳ ಮೇಲೆ ಹೆಸರು ಬರೆಯುತ್ತಿದ್ದ.. ಅವನು ಬರೆದ ಅಕ್ಷರಗಳು ಒಮ್ಮೆಲೇ ನೀರು ಪಾಲಾಗುವುದನ್ನು ಸಹಿಸಲು ನನ್ನಿಂದಾಗುತ್ತಿರಲಿಲ್ಲ…. ಕೊನೆಗೆ ಜಗಳದಲ್ಲಿ ನಮ್ಮ ಸಂಭಾಷಣೆ ಅಂತ್ಯ ಕಾಣುತ್ತಿತ್ತು……….

ಆದರಿಂದು ಬೇಕು ಎಂದರೂ ಹೆಸರು ಬರೆಯುವರಾರಿರಲಿಲ್ಲ..ಜಗಳವಾಡಲೂ ಸಹಾ ನನ್ನಲ್ಲಿ ಚೈತನ್ಯವಿಲ್ಲದೆಯೇ ಸ್ಮಶಾಣ ಮೌನ ನನ್ನನ್ನಾವರಿಸಿತ್ತು.. ನೂರು ಜನುಮಕೂ ಹಾಡಿಗಿಂತಾ ಇಂದು ನನಗೆ ನೆನಪಿಗೆ ಬಂದಿದ್ದು….                                                                                                                 “ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು”

ಆದಿ ಏನೆಲ್ಲಾ ಆಸೆ-ಕನಸುಗಳ ನನ್ನಲ್ಲಿ ತುಂಬಿ ಹೋಗಿದ್ದ… ಸ್ವರಕ್ಕೆ – ರಾಗ ಸೇರಿಸಿ ವರ್ಷಗಳು ಸಾಗಿಸಿದ…..ಅವನ ಮೇಲೆ ನನಗಿದ್ದ ಅಪಾರವಾದ ನಂಬಿಕೆ ನಾನು ಅವನನ್ನು ಹೆಚ್ಚು ಪ್ರೀತಿಸುವಂತೆ ಮಾಡಿತು….

ಒಮ್ಮೆ ಹೀಗೆ ಸಾಗರದ ಅಲೆಗಳ ಒಡನೆ ಆಡುತ್ತಿರುವಾಗ ಆಕಸ್ಮಿಕವಾಗಿ ಅವನಿಗೆ ಸಿಕ್ಕ ಸ್ವಾತಿಮುತ್ತನ್ನು ಜೋಪಾನವಾಗಿ ತನ್ನ ಜೇಬಿನಲ್ಲಿರಿಸಿ ಹೊರಡುವ ಘಳಿಗೆಯಲ್ಲಿ  ನನ್ನ ಕಣ್ಣ ಮುಚ್ಚುವಂತೆ ಹೇಳಿ ಆ ಮುತ್ತನ್ನು ನನ್ನ ಕೈಲಿರಿಸಿ ಒಂದು ಪತ್ರವನ್ನು ನನ್ನ ಕೈಲಿಟ್ಟು ,ಹಣೆಗೆ ಒಂದು ಮುತ್ತನ್ನಿಟ್ಟು ಕಣ್ಗಳಲ್ಲೇ ಪ್ರೀತಿ ನೀಡಿ ಹೋಗಿದ್ದ…. ಆ ಕಣ್ಣ ಸನ್ನೆಯಲ್ಲಿ ಬರವಸೆ ಇತ್ತು,ಧೈರ್ಯ ತುಂಬಿತ್ತು, ನೋವು ತುಂಬಿತ್ತು…. ಅಂದು ನನ್ನ ಸಂತೋಷವು ಎಲ್ಲೆ ಮೀರಿತ್ತು, ಸಂತೋಷದಿಂದ ನನ್ನ ಕಣ್ಣೀರು ಕೆನ್ನೆಯ ಮೇಲಿಂದ ಜಾರಿತ್ತು… ಎಂದೂ ನನ್ನ ಒಂದು ಪತ್ರಗಳಿಗೂ ಪತ್ರದ ಮೂಲಕ ಉತ್ತರಿಸದ ಆದಿ ಅಂದು ಪತ್ರದಲ್ಲಿ ಏನೋ ಬರೆದು ಕೊಟ್ಟಿದ್ದ…. ಮನೆಗೆ ಬಂದವಳೇ ನನ್ನ ರೂಮಿನ ಬಾಗಿಲ ಸರಿಸಿ ಅವನು ಕೊಟ್ಟ ಸ್ವಾತಿಮುತ್ತನ್ನು ಜೋಪಾನವಾಗಿರಿಸಿ, ಪತ್ರವ ತೆರೆದು ಕುತೂಹಲದಿಂದ ಓದತೊಡಗಿದೆ…  ಆ ಪತ್ರವನ್ನು ಓದು-ಓದುತ್ತಿದ್ದಂತೆ ನನ್ನ ಪ್ರಾಣಪಕ್ಷಿ ಹಾರಿಹೋಗಿಬಿಡುತ್ತಿದೆಯೇನೋ ಎಂಬಂತೆ ಭಾಸವಾಗತೊಡಗಿತು…ಮೈ ನಡುಗಿತು .. ನಿಂತಲ್ಲೇ ನಾ ಕುಸಿದು ಬಿದ್ದೆ..ಮನೆಯಿಂದ ಹೊರಟಾಗ ಅರಳಿದ್ದ ನನ್ನ ಮೊಗ ಪತ್ರವನೋದುವಾಗ ಬಾಡತೊಡಗಿತ್ತು…ಹೊರಗಡೆ ಗುಡುಗು – ಸಿಡಿಲಿನ ಆರ್ಭಟವ ಸಹಿಸಲೂ ಕಷ್ಟವಾಯಿತು…. ಕಣ್ಣಲ್ಲಿ ಒಂದು ಹನಿ ನೀರು ಸಹಾ ಹೊರ ಬರಲಾರದೆ ಒದ್ದಾಡುತ್ತಿತ್ತು…… ಏಕೆಂದರೆ…. ಆದಿಗೆ ಅಂದು ಮುಂಜಾನೆ ಹೃದಯಾಘಾತವಾಗಿತ್ತು… ಆದರೂ ದೇವರ ದಯೆಯಿಂದ ಪಾರಗಿದ್ದ… ಅದನ್ನು ಹೇಳಿಕೊಳ್ಳಲು ಆದಿಗೆ ಯಾರೂ ಇಲ್ಲವಾದುದರಿಂದ , ನನ್ನೊಡನೆಯೂ ಹೇಳಲು ಭಯವಾಗಿ ತುಂಬಾ ಯೋಚಿಸಿ ಆ ಪತ್ರವ ಬರೆದುದಾಗಿ ತಿಳಿಸಿದ್ದ.. ಅಂದು ಅವನ ಭೇಟಿಯಾದಾಗ ಸಹಾ ಅವನ ಮುಖ ಕಳೆಗುಂದಿದುದನ್ನು ಗಮನಿಸಿ ಕೇಳಿದಾಗ ಅವನು ಏನೂ ಹೇಳಿರಲಿಲ್ಲ…

ಹೊರಗೆ ಜೋರು ಮಳೆ ಸುರಿಯುತ್ತಿದ್ದರೂ ಅಮ್ಮನಿಗೆ ಹೇಳಲಾಗದೆ ಏನೆಲ್ಲ ಸುಳ್ಳು ಹೇಳಿ ಆದಿಯ ಮನೆ ಕಡೆಗೆ ಹೊರಟೆ… ಅಮ್ಮ ನನ್ನ ಕೈಗೆ ಛತ್ರಿಯನಿಟ್ಟು ಕಳುಹಿಸಿದರು…. ಏಕೋ ಒಂದೊಂದು ಹೆಜ್ಜೆಗಳನ್ನಿಡಲೂ ಕಷ್ಟವಾಗತೊಡಗಿತು.. ಹಾಗೂ-ಹೀಗೂ ಆದಿಯ ಮನೆ ತಲುಪಿ ಬಾಗಿಲ ಸರಿಸಿ ನೋಡುವಷ್ಟರಲ್ಲಿ  ಮತ್ತೆ ಆದಿಗೆ ಹೃದಯಾಘಾತವಾಗಿ ತೀವ್ರವಾಗಿ ಒದ್ದಾಡುತ್ತಾ ಮಲಗಿದ್ದ.. ಕರುಳ ಚುಚ್ಚಿದಂತಾಯಿತು.. ನಾ ಅಲ್ಲಿದ್ದೂ ಏನೂ ಮಾಡಲಾಗದ ಪರಿಸ್ಥಿತಿ… ಹೊರಗೆ ಜೋರು ಮಳೆ… ಕೂಗಿದರೂ ಯಾರಿಗೂ ಕೇಳಿಸಲಾಗದಷ್ಟು ಮಳೆಯ ಆರ್ಭಟ.. ಏನಾದರಾಗಲಿ ಅವನನ್ನು ಉಳಿಸಿಕೊಳ್ಳಲೇಬೇಕು ಎಂದು ಹೊರ ನಡೆದಾಗ ಆದಿ ಕಣ್ಣುಗಳಲ್ಲಿ ನೀರು ತುಂಬಿ ಅವನು ನನ್ನ ಕೈಗಳನ್ನು ಅವನ ಹೃದಯದ ಮೇಲಿಟ್ಟು ನನ್ನ ಮಡಿಲಲ್ಲಿ ಮಲಗಿಸಿಕೊಳ್ಳುವುದಾಗಿ ಸನ್ನೆ ಮಾಡಿದ…. ಎಷ್ಟೇ ಹೇಳಿದರು ಡಾಕ್ಟರನ್ನು ಕರೆತರಲು ನಿರಾಕರಿಸಿದ…. ಅವನು ಸಾಯುವುದು ಅವನಿಗೆ ಖಚಿತವಾಗಿತ್ತೋ ಏನೋ ಗೊತ್ತಿಲ್ಲಾ…ನನ್ನ ಮಡಿಲಲ್ಲಿ ಪುಟ್ಟ ಮಗುವಿನಂತೆ ಮಲಗಿ ನನ್ನ ಕೈಗಳನ್ನೊತ್ತಿ “ಚಿನ್ನ ಐ ಲವ್ ಯು ” ಎಂದ .. ಅವನ ಹಣೆಗೆ ಮುತ್ತಿಟ್ಟು ಬರವಸೆಯ ತುಂಬುವ ಪ್ರಯತ್ನ ಮಾಡಿದೆ… ಅಷ್ಟರೊಳಗಾಗಿ ಆದಿಯ ಪ್ರಾಣಪಕ್ಷಿ ಹಾರಿಹೋಗಿತ್ತು….. ದಿಕ್ಕೇ ತೋಚದವಳಂತೆ ಶೂನ್ಯದೆಡೆಗೆ ನೋಡುತ್ತಾ ಕುಳಿತೆ.. ಆದಿಯ ದೇಹ ನನ್ನ ಮಡಿಲಲ್ಲಿತ್ತು…. ಕೂಡಲೇ ಅಪ್ಪ ಅಮ್ಮನಿಗೆ ವಿಷಯ ತಿಳಿಸಿದಾಗ ಅವರಿಗೆ ಆಶ್ಚರ್ಯ ನೋವು ಎಲ್ಲ ಒಟ್ಟಿಗೆ ಬಂದು ಅವರನ್ನಾವರಿಸಿತ್ತು ..ಆಗಲೂ ಒಂದು ಕಣ್ಣ ಹನಿಯು ನನ್ನ ಕಣ್ಣಿನಿಂದ ಜಾರಲಾರದೆ ಒದ್ದಾಡುತ್ತಿದ್ದೆ… ಎಲ್ಲಾ ಕಾರ್ಯಗಳ ಮುಗಿಸಿ ಮನೆಗೆಹೋದೆ…..!! ಅವನಿಲ್ಲದ ಬಾಳು ವ್ಯರ್ಥ ಅನಿಸತೊಡಗಿತು…. ನನ್ನ ತಂದೆ ತಾಯಿ ವಿಶಾಲ ಮನೋಭಾವದವರಾದುದರಿಂದ ಪರಿಸ್ಥಿತಿಯ ಅರ್ಥೈಸಿಕೊಂಡು ನನಗೆ ಸಾಂತ್ವಾನ ಹೇಳಿ, ನನಗೆ ಧೈರ್ಯದ ಮಾತುಗಳ ಹೇಳಿ, ಭವಿಷ್ಯದ ಬಗ್ಗೆ ಚಿಂತಿಸುವಂತೆ ಹೇಳಿಹೋದರು … ಆದರು ಆದಿಯ ನೆನಪು ನನ್ನ ಕಾಡತೊಡಗಿತು…..

೭ ದಿನ ೭ ವರುಷಗಳಂತೆ ಕಳೆಯಿತು… ಮತ್ತದೇ ಭಾನುವಾರ ಎದುರಾಯಿತು…. ಎಂದಿನಂತೆ ಆದಿ ನನ್ನೊಡನೆ ಇರಲಿಲ್ಲ….ಒಂಟಿಯಾಗಿದ್ದೆ ನಾನು..ಸದಾ ಅವನ ಜೊತೆಗೂಡಿ ಬರುತ್ತಿದ್ದ ನಾನು.. ಒಮ್ಮೆ ಒಂಟಿಯಾಗಿ ಬರುವ  ಪರಿಸ್ಥಿತಿ  ಎದುರಾಗುತ್ತದೆ ಎಂದು ಕನಸ್ಸಲ್ಲೂ ಊಹಿಸಿರಲಿಲ್ಲ….
ಇಂದು ನಾನು ಮರಳ ರಾಶಿಯ ಮೇಲೆ ಕಾಲ ನೀಡಿ ಕುಳಿತು ತಂಪಾದ ಗಾಳಿಯ ಅನುಭವವೂ ಆಗದಂತೆ ಶೂನ್ಯದತ್ತ ನೋಡುತ್ತಾ ಸಾಗರದ ಅಂತ್ಯವ ಹುಡುಕಲು ಪ್ರಯತ್ನಿಸುತ್ತಿದ್ದೆ… ಮೊಳೆಯದ ಅಲೆಗಳ ಬಗ್ಗೆ ಯೋಚಿಸಲು ಆಗದೆ ಸಾಗರದಲ್ಲಿ ಸುಪ್ತವಾಗಿ ಅಡಗಿ ಹೋಗುವ ಹಂಬಲ…. ಮನಸ್ಸಲ್ಲಿ ಆ ಸೂರ್ಯ ದೇವನಿಗೆ ನೂರಾರು ಪ್ರಶ್ನೆಗಳ ಸುರಿಮಳೆ ಹಾಕುತ್ತಿದ್ದೆ….. ನುಡಿಯಲು ಒಂದು ಮಾತು ಸಹಾ ಹೊರಬರಲಿಲ್ಲ..ಬರಿ ಮೌನ ಎಲ್ಲೆಲ್ಲು ಮೌನ ಅಷ್ಟೇ ….!! ಇಂದು ನನ್ನ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಆ ಸೂರ್ಯ ಸಹಾ ಮೋಡಗಳ ಹಿಂದೆ ಮರೆಯಾಗುತ್ತಾ ಸಾಗರದೊಳಗೆ ಮುಳುಗಲು ಯತ್ನಿಸುತ್ತಿದ್ದ.. ದೂರ-ತೀರಕೆ ಅವನ ಪಯಣ ಸಾಗಿತ್ತು.. ನನ್ನ ಆದಿಯ ತರಹ… ಎಲ್ಲಿ ನೋಡಿದರು ನೀರು ಹರಿದಾಡುತ್ತಿತ್ತು.. ಆ ಸಾಗರದೊಳಗೆ ನಾ ಒಂಟಿ ಬಿಂದುವಾಗಿ ಉಳಿದುಹೋದೆ.. ಮಳೆ ಬರುವ ಮುನ್ಸೂಚನೆಗಳು ಎದುರಾಗುತ್ತಿತ್ತು..ಏಳಲಾರದೆ ಎದ್ದು ಮನಸ್ಸಿನ ವೇದನೆಯನ್ನು ಸಾಗರಕೆ ಚೆಲ್ಲಿಮುಳುಗಿ ಹೋದ ಸೂರ್ಯನ ನೆನಪುಗಳನ್ನು(ಆದಿಯ ನೆನಪುಗಳನ್ನು…)ಅಲ್ಲಿಯೇ ಸಾಧ್ಯವಾದಷ್ಟು ಚೆಲ್ಲಿ  ಎಚ್ಚೆತ್ತುಕೊಂಡು ಸಾಗರದ ಕಡೆ ತಿರುಗಿಯೂ ನೋಡದೆ ಹೊರಟೆ…. ಮಳೆ ರಭಸವಾಗಿ ಬೀಳತೊಡಗಿತು.. ಏಕೋ ತಡೆಯಲಾಗದೆ ನನ್ನ ಕಂಗಳಿಂದ ಕಣ್ಣೀರು ಚಿಮ್ಮಿ ಬಂತು..ಮಳೆ ಹನಿಗಳ ನಡುವೆ ಆ ನನ್ನ ಕಣ್ಣ ಹನಿಗಳು ಸೇರಿ ಹೋದವು… ಮನಸ್ಸಿನಲ್ಲಿ ಹೆಚ್ಚುತ್ತಿದ್ದ  ನೋವಿಗೆ ಆ ಕಣ್ಣೀರು ಅಂತ್ಯ ನೀಡಿತ್ತು..ಆ ಕ್ಷಣ ಆದಿಯ ಸನಿಹ ನೆನಪಿಗೆ ಬಂದು ದುಃಖ ಉಮ್ಮಳಿಸಿ ಬಂದಿತು… ನಿಸ್ಸಹಾಯಕತೆಯಿಂದ ಬಾಳಿನಲ್ಲಿ ಬರುವ ಏರಿಳಿತಗಳ ಒಪ್ಪಿಕೊಳ್ಳುತ್ತಾ ನನಗೇ ನಾನೆ ಧೈರ್ಯ ತುಂಬಿಕೊಂಡು ಮನೆಯೊಳಗೆ ಕಾಲಿಟ್ಟೆ.. ನೇರವಾಗಿ ದೇವರ ಗುಡಿಗೆ ಹೋಗಿ ಆ ದೇವರಲ್ಲಿ ಒಂದು ಪ್ರಶ್ನೆಯ ಕೇಳಿದೆ…”ಆದಿಯೊಡನೆ ನನ್ನನ್ನೂ ಕರೆಸಿಕೊಳ್ಳದಯೇ ನನ್ನನ್ನು ಒಂಟಿ ಮಾಡಿದೆ ಏಕೆ ದೇವರೇ……???”………..

ಆದಿ ” ನಿನ್ನ ನೆನಪುಗಳು ನನ್ನನ್ನು ಬಿಗಿದಪ್ಪಿ ಸೆಳೆಯುತಿದೆ ಸದಾ……ನಿನ್ನ ಮರೆಯಲಾಗದಲ್ಲ ಮರೆತು ಉಳಿಯಲಾಗುತಿಲ್ಲ……”

ಒಂಟಿಯಾಗಿರುವಾಗ ಹೃದಯಾಘಾತವಾದಲ್ಲಿ ಹೀಗೆ ಮಾಡಿ

ಏಪ್ರಿಲ್ 7, 2009

ಆಳವಾದ ಉಸಿರನ್ನು ತೆಗೆದುಕೊಳ್ಳುತ್ತಾ ಸೆಕೆಂಡಿಗೊಮ್ಮೆ ಆಳವಾಗಿ ದೀರ್ಘವಾಗಿ ಕೆಮ್ಮುತ್ತಾ ಹೋಗಿ.

ಆಳವಾದ ಉಸಿರಿನಿಂದಾಗಿ ಶ್ವಾಸಕೋಶಗಳಿಗೆ ಆಮ್ಲಜನಕ ಯಥೇಚ್ಚವಾಗಿ ದೊರೆಯುತ್ತದೆ. ಕೆಮ್ಮುವುದರಿಂದ ಹ್ರುದಯದ ಮೇಲೆ ಒತ್ತಡ ಬಿದ್ದು ಸಂಚಾರಕ್ಕೆ ಸಹಾಯವಾಗುತ್ತದೆ.

ಹ್ರುದಯಘಾತವಾದ ವ್ಯಕ್ತಿಗಳು ಈ ಕ್ರಮವನ್ನು ಅನುಸರಿಸಿ,  ಕೂಡಲೆ ಆಸ್ಪತ್ರೆಗೆ ದಾಖಲಾಗಿ ತಜ್ಞವೈದ್ಯರಿಂದ ಚಿಕಿತ್ಸೆ ಪಡೆಯತಕ್ಕದ್ದು…..