ನಲ್ಮೆಯ ಗೆಳತಿಗೆ,
ನನಗೆ ಗೊತ್ತು ನೀ ತುಂಬಾ ಚೆನ್ನಾಗಿದ್ದೀಯ ಅಂತ..ಮದುವೆಯಾದ ನಂತರ ನಿನ್ನಿಂದ ಒಂದೂ ಪತ್ರ ಬಾರದೇ ಇದ್ದುದಕ್ಕಾಗಿ ನನ್ನ ಮನಸ್ಸಿಗೆ ತುಂಬಾ ನೋವುಂಟಾಗಿದೆ.. ವಾರಕ್ಕೆ ಎರೆಡು ಬಾರಿ ನಿನ್ನ ಪತ್ರ ನನ್ನ ಮನೆ ಬಾಗಿಲಿಗೆ ಬರುತ್ತಿದ್ದುದು, ಹದಿನೈದು ದಿನಗಳಾದರು ನನ್ನ ಕಣ್ಣಿಗೆ ಬೀಳದೆ ಚಂದಿರನಿಲ್ಲದ ಆಕಾಶದಂತಾಗಿದೆ ನನ್ನ ಬದುಕು…
ಗೆಳತಿ ನೀನಿಲ್ಲದೆ ಬದುಕು ಖಾಲಿ-ಖಾಲಿ ಅನಿಸುತಿದೆ..ನಿನ್ನ ಪ್ರೀತಿ ಮಾತುಗಳನ್ನು.. ನಿನ್ನ ಮುದ್ದಾದ ಅಕ್ಷರಗಳಲ್ಲಿ ನೋಡುತ ,ಓದುತ ಇರುತ್ತಿದ್ದೆ.. ನೀ ನನ್ನೊಡನಿಲ್ಲ ಅನ್ನೋ ಭಾವನೆಗಳ ಹೋಗಲಾಡಿಸುತ್ತಿದ್ದ ನಿನ್ನ ಒಲವಿನ-ಸಾಂತ್ವಾನದ ಮಾತುಗಳು, ನಿನ್ನ ಕವಿತೆಗಳು,ನೀನು ಸೊಗಸಾಗಿ ಬಿಡಿಸುತ್ತಿದ್ದ ಚಿತ್ರಗಳನ್ನು ನಾನೆಷ್ಟು ಮಿಸ್ಸ್ ಮಾಡಿಕೊಳ್ಳುತ್ತಿದ್ದೇನೆ ಗೊತ್ತಾ?? ಒಂದು ವಾರದಿಂದ ನೀ ಬರೆದಿರುವ ಹಳೆಯ ಪತ್ರಗಳನು ನನ್ನ ಹಾಸಿಗೆಯೆಲ್ಲಾ ಹರಡಿ ಓದುತ್ತಿದ್ದೇನೆ..
ಪತ್ರದಲ್ಲಿ ಸಿಗುವ ಆತ್ಮೀಯತೆ ನೀ ನನ್ನ ಪಕ್ಕದಲ್ಲಿದ್ದರೂ ಸಿಗುವುದಿಲ್ಲ ಕಣೇ ..ಅದರ ಟೇಸ್ಟೇ ಬೇರೆ..ಅಷ್ಟು ಮುದ್ದಾಗಿ ಹೃದಯಕ್ಕೆ ಹತ್ತಿರವಾಗಿ ಮನಸ್ಸಿಗೆ ನಾಟುತ್ತವೆ ನಿನ್ನ ಕೋಲ್ಮಿಂಚಿನಂತಹ ನುಡಿಗಳು.. ಸ್ವಚ್ಚಂದದ ಭಾವನೆಗಳು.. ಮನದ ಪಿಸುಮಾತುಗಳು..ಎಲ್ಲಕ್ಕೂ ಮಿಗಿಲಾಗಿ ನಿನ್ನ ನಿಷ್ಕಲ್ಮಶ ಸ್ನೇಹಸಾಗರದಲ್ಲಿ ನಾ ಮುಳುಗಿ ಹೋಗಿದ್ದೇನೆ.. ೩ ದಿನದಲ್ಲಿ ನಡೆದ ಎಲ್ಲಾ ವಿಷಯಗಳನ್ನು ೨ ಹಾಳೆಯ ತುಂಬಾ ತುಂಬಿಸಿ ಅದಕ್ಕೆ ಬಣ್ಣಗಳಿಂದ ಅಲಂಕರಿಸಿ ಎನ್ವೆಲೋಪ್ನಲ್ಲಿ ಬಂದಿಸಿ ಅಂಚೆ ಪೆಟ್ಟಿಗೆಗೆ ಹಾಕಿ ನಿನ್ನ ಉತ್ತರಕ್ಕೆ ಕಾಯುತ್ತಿದ್ದುದರಲ್ಲಿ ಏನೋ ಮಜವಿತ್ತು…ಇದು ನನ್ನ ೪ನೇ ಪತ್ರ ದಯವಿಟ್ಟು ನನ್ನ ಈ ಒಂದು ಪತ್ರಕ್ಕೆ ಉತ್ತರಕೊಡು… ನನಗೆ ನೀನಲ್ಲದೆ ಒಂಟಿತನ ಕಾಡುತಿದೆ…
ನಿನಗೆ ನೆನಪಿದೆಯಾ ಶಾಲೆಯಲ್ಲಿದ್ದಾಗ ಇಬ್ಬರೂ ಒಟ್ಟಿಗೆ ಒಂದೇ ಬೆಂಚಿನಲ್ಲಿ ಕುಳಿತುಕೊಳ್ಳುತ್ತಿದ್ದರೂ ಪ್ರತಿನಿತ್ಯ ಪತ್ರವಿನಿಮಯವಾಗುತ್ತಿತ್ತು… ಆದರಿಂದು ಹದಿನೈದು ದಿನಗಳಾದರೂ ನಿನ್ನ ಒಂದೂ ಪತ್ರ ನನಗೆ ಬರಲಿಲ್ಲ.. ನನಗೆ ಒಂಟಿತನದ ನೆರಳೂ ಬೀಳದಂತೆ ನನ್ನ ನೆರಳಾಗಿದ್ದ ನೀನು ಇಂದು ಇಲ್ಲದೆ ಕಾರ್ಮೋಡ ಕವಿದಂತೆ ಭಾಸವಾಗುತಿದೆ… ಅಕ್ಕ-ಅಣ್ಣ, ಅಮ್ಮ-ಅಪ್ಪನಿಗಿಂತಲೂ ಮಿಗಿಲಾದ ನನ್ನ ಜೀವದ ಗೆಳತಿಯ ಕಳೆದುಕೊಳ್ಳಲು ನನ್ನಿಂದ ಸಾಧ್ಯವಾಗುತ್ತಿಲ್ಲ…. ಒಮ್ಮೆಯಾದರೂ ನನ್ನ ಮನೆಗೆ ಬಂದು ಹೋಗು..ನಿನ್ನ ಮಡಿಲಲ್ಲಿ ಮಲಗಿ ನನ್ನ ನೋವನ್ನೆಲ್ಲಾ ಹಂಚಿಕೊಳ್ಳುತ್ತೇನೆ…. ಕಣ್ಣೀರು ಬಂದರೂ ಒತ್ತಿ ಹಿಡಿದಿರುವೆ ..ನೀ ಬಂದು ಹಿಡಿಯುವೆ ಎಂದು… ಬರುವೆಯಲ್ಲವೇ…??????
-ನಿನ್ನ ಹಾದಿಯನ್ನೇ ನೋಡುತ್ತಿರುವ
ಇಂಚರ