ಅಂದು ಏಪ್ರಿಲ್ ೧ನೇ ತಾರೀಖು, ನಾ ಮೊದಲ ಬಾರಿಗೆ ಕೆಲಸ ಮಾಡಲು ಕೆಲಸಕ್ಕೆ ಸೇರಿದ ದಿನ… ನನ್ನ ಕಾಲ ಮೇಲೆ ನಿಲ್ಲಲು ಅವಕಾಶ ಸಿಕ್ಕ ಮೊದಲ ದಿನ… ನಾನು ಒಂದು ಕಂಪ್ಯೂಟರ್ ಇನ್ಸ್ಟಿಟ್ಯೂಟ್ ನಲ್ಲಿ faculty ಆಗಿ ಕೆಲಸಕ್ಕೆ ಸೇರಿದೆ…ಹೊಸ ದಿನ, ಹೊಸ ಜಾಗ, ಮನಸ್ಲಲ್ಲಿ ಕಳವಳ.. ಆ ಸುತ್ತಮುತ್ತಲಿನ ಪರಿಸರ ..ಜನ ಹೇಗೆ ಇರುತ್ತಾರೋ, ಎಂದೆಲ್ಲಾ ನೂರೆಂಟು ಯೋಚನೆಗಳು ಕಾಡತೊಡಗಿತ್ತು… ಆದರೂ ಸಂತೋಷದಿಂದಲೇ ಬೆಳಿಗ್ಗೆ ಬೇಗನೆ ಎದ್ದು ದೇವರಿಗೆ ಕೈ ಮುಗಿದು ತಿಂಡಿ ತಿಂದು ಇನ್ಸ್ಟಿಟ್ಯೂಟ್ ಗೆ ತಂದೆಯಿಂದ drop ತೆಗೆದುಕೊಂಡೆ.. ಹೋದ ತಕ್ಷಣ ಒಬ್ಬ ಸರ್ ಅವರ ಪರಿಚಯ ಮಾಡಿಕೊಂಡು, ಅಲ್ಲಿನ ವಾರಸುದಾರರಿಗೆ ಕರೆ ಮಾಡಿ ನಾನು ಕೆಲಸಕ್ಕೆ ಬಂದಿರುವುದಾಗಿ ತಿಳಿಸಿದರು,ಆ ಸರ್ ಸಹಾ ನನಗೆ ಹಾರ್ಧಿಕವಾದ ಸ್ವಾಗತ ಕೋರಿ ಶುಭ ಹಾರೈಸಿದರು. ಮೊದಲಿಗೆ ಅಲ್ಲಿದ್ದ ನನ್ನ ಜೊತೆಗೆ ಕೆಲಸ ಮಾಡುವ ಇತರೆ facultyಯವರ ಪರಿಚಯ ಮಾಡಿಕೊಂಡೆ. ಅಂದು ಅವರಲ್ಲಿ ಒಬ್ಬರ ಹುಟ್ಟಿದಹಬ್ಬವಿದ್ದುದರಿಂದ ಅವರು ಎಲ್ಲರಿಗೂ ಸಿಹಿ ಹಂಚಿದರು..ಅಲ್ಲಿದ್ದ faculty ನನಗೆ ತುಂಬಾ ಸಹಕರಿಸಿ, ಎಲ್ಲಾ ಕೆಲಸಗಳ ಬಗ್ಗೆ ತಿಳಿ ಹೇಳಿದರು. ನಂತರ ಎಲ್ಲಾ ವಿದ್ಯಾರ್ಥಿಗಳ ಪರಿಚಯ ಮಾಡಿಕೊಳ್ಳುತ್ತಾ ಬಂದೆ.. ಹಾಗೂ ಮೊದಲ ಬಾರಿಗೆ ಕ್ಲಾಸ್ ತೆಗೆದುಕೊಂಡೆ.. ಅಂದು ತುಂಬಾ ಕಷ್ಟವಾದ ವಿಷಯವನ್ನೇ ಹೇಳಿಕೊಡಲು ನಮ್ಮ ಸರ್ ತಿಳಿಸಿದರು.ನಾನು ಧೈ ರ್ಯವಾಗಿ ಕ್ಲಾಸ್ ಮಾಡಿ ಮುಗಿಸಿದೆ.. ಬಂದು ಹೋಗುತ್ತಿದ್ದ ನನ್ನ ವಿದ್ಯಾರ್ಥಿಗಳು mam, ಮೇಡಮ್, ಅಕ್ಕ ಅಂತೆಲ್ಲಾ ವಿಧ-ವಿಧವಾಗಿ ಕರೆಯುತ್ತಿದ್ದರು.. ಅವರೆಲ್ಲರೂ ಹಾಗೆ ಕರೆಯುತ್ತಿದ್ದಾಗ ನನ್ನ ಸ್ಥಾನ ಅಲ್ಲಿ ಏನು ಎಂಬುದರ ಅರಿವು ಪದೇ-ಪದೇ ನನಗೆ ಆಗುತ್ತಿತ್ತು. ಕೆಲವರು ತೀರಾ ವಿನಮ್ರ ಭಾವದಿಂದ ಗುಡ್ ಮಾರ್ನಿಂಗ್ ಮೇಡಮ್ ಅಂದಾಗ ನನಗೆ ಒಂದು ತರಹ ಖುಷಿಯಾಗುತ್ತಿತ್ತು. ನನಗೆ ಎಷ್ಟು ಬೆಲೆಯಿದೆ ಇಲ್ಲಿ ಎಂದು ಅಂದುಕೊಳ್ಳುತ್ತಿದ್ದೆ…. (ಏಕೆಂದರೆ ಆಗ ತಾನೆ ಕಾಲೇಜು ಬಿಟ್ಟು ಹೊರಬಂದ ಸಮಯ.. ನಾನು ಬೇರೆಯವರಿಗೆ ಆತರಹದ ಗೌರವ ನೀಡುತ್ತಿದೆ,…ಆದರೆ ನನಗೆ ಆತರಹದ ಗೌರವ ಸಿಕ್ಕಿದ್ದು ಒಂದು ತರಹ ಹೊಸದಾಗಿ ಇತ್ತು..:) ).. “ಬರುವವರು ಬರುತ್ತಿದ್ದರು..ಹೋಗುವವರು ಹೋಗುತ್ತಿದ್ದರು..ಆದರೆ ನಾವು ಮಾತ್ರ ನಿಶ್ಚಲವಾಗಿದ್ದೆವು..” ನಮ್ಮ ಜೀವನವೂ ಹಾಗೆ ಅಲ್ಲವೇ??? ಮಧ್ಯಾಹ್ನ ಊಟಕ್ಕೆ ಮನೆಗೆ ಬಂದು ಊಟ ಮುಗಿಸಿ ಮತ್ತೆ ಇನ್ಸ್ಟಿಟ್ಯೂಟ್ಗೆ ಬಂದೆ…ಎಲ್ಲರೂ ತುಂಬಾ ಆತ್ಮೀಯತೆಯಿಂದ ಮಾತನಾಡಿಸಿದರು.. ನಮ್ಮ ಹುಟ್ಟಿದಹಬ್ಬದ ಹುಡುಗ(ಸರ್)…. part-T (party) ಕೊಡಿಸಿದರು.. ಎಷ್ಟೋ ಜನ ನನಗೆ ಅಲ್ಲಿ ಕೊಡುವ ಸಂಭಾವನೆ ಕಡಿಮೆಯೆಂದು, ಅಲ್ಲಿ ಕೆಲಸ ಮಾಡಬಾರದೆಂದು ಹೇಳಿದರು..ಆದರೆ ನನಗೆ ಮುಖ್ಯವಾಗಿ ಬೇಕಾಗಿದ್ದುದು ಕೆಲಸ, ಹಾಗು ಮನೆಯಲ್ಲಿ ಅನಾವಶ್ಯಕವಾಗಿ ಕಾಲಹರಣ ಮಾಡುವುದನ್ನು ತಡೆಯಲೇಬೇಕಿತ್ತು.. ಜೊತೆಗೆನನ್ನಲ್ಲಿರುವ ವಿದ್ಯೆಯನ್ನು ದಾನ ಮಾಡುವುದು ಶ್ರೇಷ್ಟವಾದ ಕೆಲಸ ಎಂದು ನನಗೆ ಕೊಡುವ ಸಂಭಾವನೆಗೆ ಬೆಲೆ ಕೊಡದೆಯೇ ಶ್ರದ್ದೆಯಿಟ್ಟು ಕೆಲಸ ಮಾಡಿದೆ. ಸಂಜೆ ಮನೆಗೆ ಬಂದಾಗ ಏನೋ ಉತ್ಸಾಹ ಉಲ್ಲಾಸವಿತ್ತು. ಮನೆಯಲ್ಲಿ ಎಲ್ಲರಿಗು ಅಂದಿನ ದಿನದ ಅನುಭವದ ಬಗ್ಗೆ ಹೇಳಿದೆ.ಮಾರನೆಯ ದಿನ ಕೆಲಸಕ್ಕೆ ಹೋಗಲು ಮನ ತುಡಿಯುತ್ತಿತ್ತು. ಒಂದೇ ದಿನಕ್ಕೆ ಆ ಪರಿಸರಕ್ಕೆ ಹೊಂದಿಕೊಂಡು ಬಿಟ್ಟಿದ್ದೆ. ಭವಿಷ್ಯದ ಬಗ್ಗ್ಗೆ ಆಸಕ್ತಿ ಮೂಡಿತ್ತು, ಆಸೆ ಹುಟ್ಟಿತ್ತು. ಆ ಸುಂದರ ಪ್ರಪಂಚದಲ್ಲಿ ಮಿನುಗಲು ನನಗೊಂದು ಅವಕಾಶ ಸಿಕ್ಕಿತ್ತು. ಇಂದಿಗೂ ನನಗೆ ಇದೆ ಭಾವನೆಗಳಿವೆ..ನಾಳೆ ಮತ್ತೆ ಕೆಲಸಕ್ಕೆ ಹೋಗಲು ಕಾಯುತಿರುವೆ..ಇಂದಿಗೂ ಕಾಲೆಳೆಯುವವರಿದ್ದಾರೆ..ಆದರೆ ನಮ್ಮ ಇತಿ-ಮಿತಿಗಳಲ್ಲಿ ನಾವಿದ್ದು, ಶ್ರಮಪಟ್ಟು ನಮ್ಮ ಕೆಲಸಮಾಡಿಕೊಂಡು, ಇತರರೊಡನೆ ಸ್ನೇಹ ಭಾವದಿಂದ ಇದ್ದುಬಿಟ್ಟರೆ ಯಾರ ಮಾತು ಸಹಾ ನಮ್ಮನ್ನು ಕೊರೆಯಲಾರದು..
ಮತ್ತೆ ಇನ್ನೊದು ವಿಷಯ ಹೇಳುವುದು ಮರೆತೆ.. ನನಗೆ ನನ್ನ ವಿದ್ಯಾರ್ಥಿಯೊಬ್ಬಳು ಒಮ್ಮೆ ಅವರ ಮನೆಯಲ್ಲಿ ಅರಳಿದ್ದ ಗುಲಾಬಿ ಹೂವನ್ನು (ಪಿಂಕ್) ತಂದು ಕೊಟ್ಟಳು.. ಆಗ ನಿಜವಾಗಲೂ ನನಗೆ ನನ್ನ ಶಾಲೆಯ ನೆನಪಾಯಿತು..ಯಾಕೆಂದರೆ ನಾನು ಶಾಲೆಗೆ ಹೋಗುತ್ತಿದ್ದ ಸಮಯದಲ್ಲಿ ಮಾರ್ಕೆಟಿಗೆ ಬೇಕಂತಲೇ ಹೋಗಿ ಮೇಡಂಗೆ ಹೂ ತೆಗೆದುಕೊಂಡು ಹೋಗುತ್ತಿದ್ದೆ.. ಅದೇ ನೆನಪಿನ ಛಾಯೆ ಅಂದು ನನ್ನಲ್ಲಿ ಮೂಡಿತು..
ಹಾಗು ಕೆಲವರು ನನ್ನ “ನಗು”ವಿನ ಬಗ್ಗೆ ಕಾಮೆಂಟ್ ಮಾಡಿದರು..”ಮೇಡಂ ನೀವು ಸದಾ ನಗುತ್ತಲೇ ಸ್ವಾಗತ ಕೋರುತ್ತೀರಿ ಸದಾ ಹೀಗೆಯೇ ನಗುತ್ತಿರಿ …ನಿಮ್ಮ ನಗು ಚಂದ ” ಎಂದಿದ್ದರು..
ಒಬ್ಬ ವಿದ್ಯಾರ್ಥಿ ಅವರ ಕೋರ್ಸ್ ಮುಗಿಸಿ ಹೋದರೂ ಇನ್ನೂ ನನ್ನ ಬಗ್ಗೆ ವಿಚಾರಿಸಿಕೊಳ್ಳುತ್ತಿರುತ್ತಾರಂತೆ..
ಹೀಗೆ ಏನೆಲ್ಲಾ ಸಣ್ಣ-ಪುಟ್ಟ ವಿಷಯಗಳು ತುಂಬಾನೇ ಖುಷಿ ನೀಡುತ್ತದೆ.. ಏನೆಲ್ಲಾ ಅನುಭವಗಳಾಗುತ್ತದೆ.. ಕಹಿಗಿಂತಲೂ ಸಿಹಿಯೇ ಹೆಚ್ಚು ..ನಮಗೆ ನಾವು ಕೆಲಸ ಮಾಡುವ ಪರಿಸರ ಚೆನ್ನಾಗಿದ್ದಾರೆ ಎಷ್ಟು ನೆಮ್ಮದಿ ಸಿಗುತ್ತದೆಂದು ಅರಿವಾಯಿತು..ಅನುಭವವೂ ಆಯಿತು… ಎಲ್ಲಾ ಅನುಭವಗಳ ನಡುವೆ ಹೋಗುವ ಬರುವ ಜನರೊಡನೆ ಮಿಂದು ಅರಿತು..ಕೆಲವು ಸಿಹಿ ನೆನಪುಗಳ ನಿಮ್ಮೆಲ್ಲರ ಬಳಿ ಹಂಚಿಕೊಂಡೆ….ಸ್ವೀಟ್ ಆಗಿದೆ ತಾನೇ??? ಏನಂತಿರಾ???