Archive for ಡಿಸೆಂಬರ್ 2009

ಏನುಂದ್ರೆ, ನಿಮ್ಮೊಡನೆ ನನ್ನ ಒಂದು ಸವಿ-ಸವಿ ನೆನಪನ್ನು ಹಂಚಿಕೊಳ್ಳುವ ಆಸೆ ಆಗ್ತಿದೆ ಕಣ್ರೀ….

ಡಿಸೆಂಬರ್ 28, 2009

ಚಿರು.., ಆ ದಿನ ನಿಮಗೆ ನೆನಪಿದೆಯಾ? ಅದೇ ನೀವು ನನ್ನನ್ನು ನೋಡಲು ಎರಡನೇ ಸರತಿ ನಮ್ಮ ಮನೆಗೆ ಬಂದಿದ್ದೆರಲ್ಲವಾ…? ಆ ದಿನ ನೀವೇನೋ ಫೋನ್ ಮಾಡಿ ಬರುವುದಾಗಿ ತಿಳಿಸಿದಿರಿ, ಆ ವಿಷಯ ನನಗೆ ಅದ್ಯಾವ ಕ್ಷಣದಲ್ಲಿ ತಿಳಿಯಿತೋ…ಮನಸ್ಸು  ಒಳಗೊಳಗೆಯೇ ಕುಣಿದಾಡತೊಡಗಿತು, ಆಗ ತಾನೆ ಆಫೀಸಿನಿಂದ ಬಂದಿದ್ದರೂ ಎಲ್ಲಾ ಆಯಾಸವೂ ಕರಗಿಹೋಯಿತು, ಹೃದಯದ ಬಡಿತ ಏರಿಳಿತಗಳ ನಡುವೆ ಸಿಲುಕಿ ಒದ್ದಾಡುತ್ತಿತ್ತು, ಒಂದೆಡೆ ನಿಮ್ಮನ್ನು ನೋಡುವ ಆತುರ-ಕಾತುರ, ಇನ್ನೊಂದೆಡೆ ನೂರಾರು ಪ್ರಶ್ನೆಗಳ ಸುರಿಮಳೆ ನನ್ನನ್ನು ಕಾಡತೊಡಗಿತು…. ತಕ್ಷಣ ಅಮ್ಮನ ಬಳಿಗೆ ಹೋಗಿ ಅಮ್ಮ…… ಯಾವ ಸೀರೆ ಉಟ್ಟರೆ ಚೆಂದ? ತಿಳಿ ನೀಲಿ ಬಣ್ಣದ ಸಣ್ಣ ಅಂಚಿರುವ ಸೀರೆಯ ಉಡುವುದೋ ಅಥವಾ ಕಿತ್ತಲೆ ಬಣ್ಣದ ಸಣ್ಣ-ಸಣ್ಣ ಹೂಗಳಿರುವ ಆ ಸೀರೆಯ ಉಡುವುದೋ? ಇದಕ್ಕೆ ಮುತ್ತಿನಿಂದ ಪೋಣಿಸಿರುವ ಆ ಸರ ಚೆಂದವಾಗಿರುತ್ತದೋ ಅಥವಾಸಣ್ಣ ಎಳೆಯ ಚಿನ್ನದ ಈ ಸರ ಚೆಂದವಾಗಿರುತ್ತದೋ….? ಎಂದು ಬಿಡುವಿಲ್ಲದೆ ಕೇಳುವ ನನ್ನ ಪ್ರಶ್ನೆಗಳಿಗೆ ಅಮ್ಮ ಸಹನೆಯಿಂದಲೇ.. ” ತಿಳಿ ನೀಲಿ ಬಣ್ಣದ ಸೀರೆಗೆ ಮುತ್ತಿನ ಹಾರ ನಿನಗೆ ಚೆನ್ನಾಗಿ ಒಪ್ಪುತ್ತದೆ… ನನ್ನ ಭಾವಿ ಅಳಿಯನಿಗೂ ಅದು ಇಷ್ಟವಾಗುತ್ತದೆ ನೋಡುತ್ತಿರು…” ಎಂದು ಹೇಳಿ ಅಡುಗೆ ತಯಾರಿ ಮಾಡಲು ಬರುವುದಾಗಿ ಹೇಳಿದರು….

ಅಮ್ಮ ಹೇಳುತ್ತಿದ್ದ ರೀತಿಯಲ್ಲೇ ಕ್ರಮವಾಗಿ ಅಡುಗೆ ಮಾಡುವಾಗಲೂ ಕೇವಲ ನಿಮ್ಮದೇ ಚಿಂತನೆಗಳು ಮನದ ಸಾಗರದಲ್ಲಿ ಹೊಯ್ದಾಡುತ್ತಿತ್ತು. ಆ ಚಿಂತನೆಯ ಹಿಂದೆ ನೂರಾರು-ಆಸೆ ಕನಸುಗಳ ಆಶಾಗೋಪುರವಿತ್ತು.. ಸುಂದರವಾದ ಭವಿಷ್ಯವ ಕಟ್ಟುವ ಆಸೆಯಿತ್ತು… ಈ ಚಿಂತನೆಗಳಿಂದ ಹೊರಬರುಷ್ಟರೊಳಗೆ ಸಣ್ಣದಾಗಿ ಬಿಸಿ ಕೈಗೆ ತಾಗಿ ವಾಸ್ತವ ಪ್ರಪಂಚಕ್ಕೆ ಬರಲು ಅನುವು ಮಾಡಿಕೊಟ್ಟಿತು. ಇನ್ನೊಂದು ಸಂತಸವೆಂದರೆ ಮೊದಲನೇ ಬಾರಿ ನಾ ಕಯ್ಯಾರೆ ನಿಮಗಾಗಿ ಅಡಿಗೆ ಮಾಡತೊಡಗಿದ್ದೆ. ನಾವು ನಮಗೆ ತುಂಬಾ ಹತ್ತಿರವಾದ ಅದರಲ್ಲೂ ನನ್ನ ಭಾವಿ ಬಾಳಸಂಗಾತಿಗೆ ಸ್ವತಃ ನಾನೇ ಕಯ್ಯಾರೆ ಮಾಡಿದ ಅಡಿಗೆಯ ರುಚಿ ತೋರಿಸುವ ಪುಣ್ಯ ನನಗೆ ಆ ದಿನ ಸಿಕ್ಕಿತ್ತು.ಅಡುಗೆ ಮಾಡಿ ಮುಗಿಸುವುದರೊಳಗಾಗಿ ಅದೆಷ್ಟು ಬಾರಿ “ಅಮ್ಮ ಅವರಿಗೆ ಈ ತಿಂಡಿ ಇಷ್ಟವಾಗುತ್ತೋ ಇಲ್ಲವೋ….???” ಎಂದು ಪದೇ-ಪದೇ ನಾ ಹೇಳುವುದನ್ನು ಗಮನಿಸಿ..ಅವರು ಒಳಗೊಳಗೆಯೇ ನಗುತ್ತಿದ್ದರು. ನಾನು ಅಂದು ಮೊದಲನೆಯ ಬಾರಿ ಅಷ್ಟು ಸಂಭ್ರಮದಿಂದ ಅಡಿಗೆ ಮಾಡಿ ಮುಗಿಸಿದ್ದೆ.ಈ ಎಲ್ಲಾ ಸಂಭ್ರಮ, ಆತುರ, ಕಾತುರಗಳ ನಡುವೆ ಬಾಯಿ ತಪ್ಪಿ ಅಮ್ಮನೆದುರಿಗೆಯೇ, “ಚಿರು ನಿಮಗೆ ನನ್ನ ಕೈ ರುಚಿ ಇಷ್ಟವಾಗುತ್ತದೆಯಲ್ಲವೇ..?” ಎಂದು ಹೇಳಿ ತುಟಿ ಕಚ್ಚಿಕೊಂಡ ನೆನಪು ಈಗಲೂ ಅವಿಸ್ಮರಣೀಯ.

ಅಲ್ಲಿ ಕೆಲಸ ಮುಗಿಸಿ ಅಂಗಳದಲ್ಲಿ ಗಾಜಿನ ಟೇಬಲ್ ಮೇಲೆ ಸುಂದರವಾದ ಹೂಗುಚ್ಚವನಿರಿಸಿ ಅಂಗಳವನ್ನೆಲ್ಲಾ ಸ್ವಚ್ಚ ಮಾಡಿ, ಮೊಗದ ಮೇಲೊಂದಷ್ಟು ನೀರ ಹನಿಗಳನ್ನು ಚುಮುಕಿಸಿ ತಿಳಿ ನೀಲಿ ಬಣ್ಣದ ಸೀರೆಯ ಉಟ್ಟು, ಮುತ್ತಿನ ಹಾರವ ತೊಟ್ಟು, ಮಲ್ಲಿಗೆ ಹೂವ ಮುಡಿದು ಕನ್ನಡಿಯ ಮುಂದೆ ಬಂದು ನಿಂತಾಗ, ಮೊದಲ ಬಾರಿ ನನ್ನ ಪ್ರತಿಬಿಂಬವನ್ನು ನೋಡಿ  ಸ್ವತಃ ನಾನೇ ನಾಚಿಕೊಂಡೆ!

ಆ ದಿನ..ಅಚ್ಚರಿಯೆಂದರೆ ನೀವೂ ಸಹಾ ತಿಳಿ ನೀಲಿ ಬಣ್ಣದ ಶರ್ಟಿನಲ್ಲಿ ತುಂಬಾ ಅಂದವಾಗಿ ಕಾಣುತ್ತಿದ್ರಿ. ನೀವು ಬಂದು ನನ್ನ ಎದುರಿಗೆ ಕುಳಿತರೂ ಒಂದು ಮಾತು ಸಹಾ ನನ್ನ ಬಾಯಿಂದ ಬರದೇ ನನ್ನ ಸ್ವರ ಸಂತಸದ ಬಂಗಲೆಯಲ್ಲಿ ಬೀಗ ಹಾಕಿಕೊಂಡು ಕುಳಿತುಬಿಟ್ಟಿತ್ತು… ನಮ್ಮಿಬ್ಬರ ನಡುವಿನ ಸಂಭಾಷಣೆ  ಕೇವಲ ಕಣ್ಣುಗಳಿಂದಲೇ ನಡೆದಿತ್ತು.. ನಾ ಮಾಡಿದ್ದ ಅಡುಗೆಯಲ್ಲಿ ಅದೆಷ್ಟು ಪ್ರೀತಿ ತುಂಬಿತ್ತು, ಅದು ನನಗೆ ಮಾತ್ರವಲ್ಲ ಅಂದು ನಿಮಗೂ ತಿಳಿಯಿತು.. ಆ ದಿನ ನಿಮ್ಮ ನಗುವಿನಲ್ಲೇ ಇಡೀ ಭವಿಷ್ಯದ ಸುಂದರ ದಿನಗಳ ಛಾಯೆ ನನ್ನ ಕಣ್ಣ ಮುಂದೆ ಹಾದು ಹೋಗಿತ್ತು. ನೀವು ಕೊನೆಯಲ್ಲಿ ಹೋಗಿ ಬರುವುದಾಗಿ ತಿಳಿಸಿದಾಗ ಏನೋ ಒಂದು ರೀತಿಯ ದುಃಖ, ಬೇಜಾರು… ಅಗಲಿಕೆಯ ನೋವು ಮನಸ್ಸನ್ನು ಕಾಡತೊಡಗಿತ್ತು…………………………………

ನಾ ಅಂದು ಕಂಡಿದ್ದ ಸುಂದರ ಭವಿಷ್ಯದ ಛಾಯೆಯನ್ನು ಇಂದು ನೀವು ನೈಜವಾಗಿ ನನಗೆ ಧಾರೆಯೆರೆದಿದ್ದೀರಿ.. ಅದಕ್ಕೆ ನಮ್ಮ ಈ ಸ್ವಾತಿಮುತ್ತಿನಂತಹ ಪ್ರೀತಿಯೇ ಸಾಕ್ಷಿ.. ಇಂದು ನಿಮ್ಮ ಮಡಿಲಲ್ಲಿ ಮಲಗಿರುವ ನನ್ನನ್ನು ಮಗುವಿನಂತೆ ಸಲಹಿ, ನನ್ನ ಕೇಶ ರಾಶಿಯ ನೇವರಿಸುತ್ತಾ ಮಲಗಿಸುತ್ತಿರುವ ನಿಮ್ಮ ಈ ಪರಿಯ ಪ್ರೀತಿಗೆ ನಾನೆಂದೂ ಆಭಾರಿ!…

ಚಿರು,ಇಂದು ನಿಮ್ಮ ಕೈ ಹಿಡಿದು ಭಾಷೆ ನೀಡುತ್ತಿದ್ದೇನೆ… “ಕಾಯಾ, ವಾಚಾ, ಮನಸಾ ಒಪ್ಪಿ ಮದುವೆಯಾಗಿ ಅರಳಿಸಿರುವ ಈ ಪ್ರೀತಿಯನ್ನು…ನನ್ನ ಬಾಳ ಸಂಗಾತಿ-ಅರ್ಧಾಂಗಿ ಯಾಗಿರುವ ನಿಮ್ಮನ್ನು ನನ್ನ ಕಣ್ಣ ರೆಪ್ಪೆಯೊಳಗೆ ಬಂಧಿಸಿ .. ಪ್ರೀತಿಯರ ರಂಗನ್ನು ಚೆಲ್ಲಿರುವ ನನ್ನ ಹೃದಯದಂಗಳದೊಳಗೆ ನಿಮ್ಮನ್ನಿಟ್ಟು ಪೂಜಿಸುವೆ…ಪ್ರೀತಿಸುವೆ….. ಆರಾಧಿಸುವೆ……….”

ಸ್ವಾತಿಮುತ್ತಿನ ಜಲಪಾತದೊಳಗೆ ಕತ್ತಲು-ಬೆಳಕಿನ ಪುನರ್ಜನ್ಮ

ಡಿಸೆಂಬರ್ 11, 2009

ಕತ್ತಲು

ಅವಳ ಮನಸ್ಸಿಗೆ

ಅದೆಂತಹ ವಿಚಿತ್ರವಾದ

ಕಾರ್ಮೋಡ ಕವಿದಿತ್ತೆಂದರೆ

ಬಿರುಬಿಸಿಲು ಮನೆಯಂಗಳಕ್ಕೆ ನುಗ್ಗಿ

ರಾಜ್ಯಭಾರ ನಡೆಸುತ್ತಿದ್ದರೂ

ಮನೆ ತುಂಬ ದೀಪ ಹಚ್ಚಿ

ಶೂನ್ಯದತ್ತ ತಲೆಮಾಡಿ ಚಿಂತಿಸುತಿಹಳು.

ಅಮಾವಾಸ್ಯೆ

ಚಂದಿರನು ಭುವಿಯನ್ನು

ನೋಡುವ ತವಕದಲ್ಲಿ

ಬರುವಾಗ…..

ತನ್ನ ಬೆಳಕನ್ನೇ ಹೊತ್ತು

ತರುವುದನ್ನು ಮರೆತನು.

ಪುನರ್ಜನ್ಮ

ಎಲ್ಲೋ ನೋಡಿರುವಂತೆ

ಎಲ್ಲೋ ಆಡಿರುವಂತೆ

ಎಲ್ಲೋ ಈ ಮಧುರ ಧ್ವನಿಯ ಕೇಳಿರುವಂತೆ

ಎಂದೋ ಒಂದೇ ದೋಣಿಯ ನಾವಿಕರಾಗಿದ್ದಂತೆ

ಭಾಸವಾಯಿತು ನಿನ್ನ ಕಂಡ ಘಳಿಗೆ!

ಜಲಪಾತ

ತನ್ನ ಇನಿಯನ

ಅಗಲಿಕೆಯ ನೋವನ್ನು..

ಸಹಿಸಲಾರದೆಯೇ…

ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾಳೆ.

ಮೌನ

ನಾನು ಬರೆದ

ನೂರಾರು ಪತ್ರಗಳಿಗೆ

ಇದೇ

ಅವನ ಉತ್ತರ!!!!

ಸ್ವಾತಿಮುತ್ತು

ಬರೆದ ಮುತ್ತುಗಳಿಗೆಲ್ಲಾ

ಎದೆಯ ಚಿಪ್ಪಿನೊಳಗೆ

ಸ್ಥಳಾವಕಾಶವಿಲ್ಲವೆಂದು

ನಿಶೇದಾಜ್ಞೆ ಜಾರಿ ಮಾಡಿ

entranceನಲ್ಲೇ ಜರಡಿ

ಹಿಡಿದು ನಿಂತಿದ್ದಾಳೆ.