Archive for ಡಿಸೆಂಬರ್ 2011

ಬೆಳಗಿನಿಂದ ಎಲ್ಲೆಡೆ ಮೌನ, ಮೌನ, ಬರೀ ಮೌನವಷ್ಟೇ!!

ಡಿಸೆಂಬರ್ 26, 2011

ಈವತ್ತು ಮುಂಜಾನೆ 5 ಗಂಟೆಗೆ ಸರಿಯಾಗಿ ಅಲಾರಂ ಹೊಡೆದುಕೊಳ್ಳುವುದಕ್ಕೆ ಶುರು ಮಾಡಿತ್ತು, ರಾತ್ರಿ ನಿನ್ನೊಡನೆ ಜಗಳವಾಡಿ ಲೇಟ್ ಆಗಿ ಮಲಗಿದ್ದರಿಂದ ಈ ಚುಮು-ಚುಮು ಚಳಿಗೆ ಇನ್ನೊದಂಷ್ಟು ಹೊತ್ತು ಕಂಬಳಿಯೊಳಗೆ ಬೆಚ್ಚಗೆ ಮಲಗುವ ಆಸೆಯಾಗಿ, ಅದರೊಳಗೆ ನನ್ನನ್ನು ನಾ ಅಡಗಿಸಿಕೊಂಡು ಮಲಗಿದೆ. ಆದರೂ ಕೇಳಬೇಕಲ್ವಾ ಆ ಅಲಾರಂ ಮತ್ತೊಮ್ಮೆ ಎದ್ದೇಳಲೇಬೇಕೆಂದು ಹಠ ಹಿಡಿದು ಕುಳಿತಿತ್ತು.. [:(]. ಕಷ್ಟ ಪಟ್ಟು ನನ್ನ ಕಣ್ಗಳು ಅರಳಿ ದೇವರಿಗೆ ನಮಸ್ಕರಿಸಿ, ನೆನ್ನೆಯಾದ ವಿರಸವ ತಾಳಲಾರದೆ ಎಂದಿನಂತೆಯೇ ನಿನಗೆ “ಸಂಜೂ ಗುಡ್ ಮಾರ್ನಿಂಗ್” ಎಂದು ಮೆಸೇಜ್ ಮಾಡಿದೆ. ಇಂದು ಏಕೋ ಗೊತ್ತಿಲ್ಲ ಮುಂಜಾನೆಯೇ ಎದ್ದು ಟೆರೇಸ್ ಮೇಲೆ ಹೋಗಿ ಡಿಸೆಂಬರ್ ನ ಚಳಿಯ ಸೊಬಗನು ಅನುಭವಿಸಲು ಆಸೆಯಾಗಿ ಹೊರಬಂದರೆ ದಟ್ಟವಾದ ಮಂಜು ಎಲ್ಲೆಲ್ಲೂ ಹಬ್ಬಿತ್ತು. ಆ ಸೂರ್ಯ ಕೂಡ ಈ ಚಳಿಯ ಸಹಿಸಲಾರದೆ ಮಂಜಿನ ಹೊದಿಕೆಯೊಳಗೆ ಅಡಗಿ ಕುಳಿತಿದ್ದನ್ನು ಕಂಡು ನನ್ನಲಿ ನಾನೇ ನಕ್ಕು, ಮತ್ತೆ ಮೊಬ್ಯೆಲ್ ಬಳಿ ಕಣ್ಹಾಯಿಸಿದೆ, ಸದಾ ಟಕ್ ಅಂತ ಪ್ರತ್ಯುತ್ತರವ ಕೊಡುವ ನೀನು ಮೌನದರಮನೆಯಲ್ಲಿ ಬಂಧಿಯಾಗಿ ಕುಳಿತಿದ್ದೆ. ಇಂತಹ ಚಳಿಯನ್ನು ಅನುಭವಿಸಲಾರದೆಯೇ ಮೈ ಬಿಸಿಯಾಗಿ ಮನವು ನಿನ್ನ ನೆನಪುಗಳ ಅಂಗಡಿಗೆ ಧಾವಿಸಿತು. . ಎಷ್ಟೇ ಪ್ರಯತ್ನಿಸಿದರೂ ಈ ಅಂಗಡಿಯಿಂದ ಹೊರಬರಲಾರದೆಯೇ ಮತ್ತೊಂದು ಮೆಸೇಜ್ ಕಳುಹಿಸಿ ಶಬರಿಯಂತೆ ನಿನಗಾಗಿ ನಾ ಕಾಯುತ ಕುಳಿತೆ. ನಿನ್ನ ಮೌನ ನನ್ನ ಹೆದರಿಕೆಗೆ ದಾರಿ ಮಾಡಿಕೊಟ್ಟಿತ್ತು. ಹೋಗಲಿ ಎಂದು ಕರೆ ಮಾಡಲು ಹೊರಟರೆ, ಸಾವಿರಾರು ಪ್ರಶ್ನೆಗಳು ಕ್ಷಣಾರ್ಧದಲ್ಲಿ ನನ್ನ ಕಣ್ಣೆದುರಿಗೆ ಬಂದು ಯೋಚನೆಗಳ ಸುಳಿಯಲ್ಲಿ ಸಿಕ್ಕಿ ಮನವು ಒದ್ದಾಡತೊಡಗಿತ್ತು….

ಸಂಜು..ನೆನ್ನೆ ನಾ ನಿನ್ನೊಡನೆ ಜಗಳ ಆಡಿದ್ದು, ಈ ನಿನ್ನ ಮೌನಕ್ಕೆ ಕಾರಣವೇ? ದಿನ ಬೆಳಗ್ಗೆಯಾದರೆ ಈ ಸಮಯಕ್ಕೆ 3-4 ಬಾರಿ ಕರೆ ಮಾಡುತ್ತಿದ್ದೆ, ಆದರಿಂದು ನಿನಗೇನಾಗಿದೆ? ನೆನ್ನೆ ಆಗಿದುದಕ್ಕೆಲ್ಲಾ ಕಾರಣವೇನೆಂದರೆ, ನೀ ಮೊದಲಿನಂತೆ ಈಗ ನನ್ನ ಮೇಲೆ ಪ್ರೀತಿ ತೋರಿಸುತ್ತಿಲ್ಲ, ಗಂಟೆ-ಗಂಟೆಗೂ ಕರೆ ಮಾಡಿ ತಿಂಡಿ ಆಯ್ತಾ? ಊಟ ಆಯ್ತಾ? ಏನು ಮಾಡುತ್ತಿದ್ದೀಯಾ? ಐ ಲವ್ ಯೂ!! ಐ ಮಿಸ್ಸ್ ಯೂ!! … ಹೀಗೆಲ್ಲಾ ಹೇಳಿ ನನ್ನ ಹೃದಯ ಸಾಮ್ರಾಜ್ಯಕ್ಕೆ ಧಕ್ಕೆ ಇಟ್ಟೆ. ಬೇಡವೆಂದರೂ ಕೇಳದೆ ಪದೇ-ಪದೇ ನನ್ನ ನೋಡುವುದಾಗಿ ಮನೆಯ ಮುಂದೆ ಬಂದು ನನಗಿಷ್ಟವಾದ ಮಲ್ಲಿಗೆಯ ಹೂ ತಂದು ನಿಲ್ಲುತ್ತಿದ್ದೆ, ಜೊತೆಗೆ ಶುಭಾಶಯ ಪತ್ರ!! ಹೀಗೆ ಹತ್ತಾರು-ಹಲವಾರು ರೀತಿಯಲ್ಲಿ ನಿನ್ನ ಪ್ರೀತಿಯ ವ್ಯಕ್ತ ಪಡಿಸಿದೆ. ನಿನ್ನಿಂದ ಏನೂ ಬಯಸದ ನನಗೆ ನನ್ನ ಇಷ್ಟ-ಕಷ್ಟಗಳ ಅರಿತು ನನ್ನ ಬಾಳಿಗೆ ಬೆಳಕ ತಂದೆ. ಬೇಡವೆಂದರೂ ನಾ ಕುಡಿದಿಟ್ಟ ಕಾಫೀಯ ಕೊನೆಯ ಗುಟುಕಿನ ರುಚಿ ನೋಡಲು ಮುಂದಾಗುತ್ತಿದ್ದೆ. ಸದಾ ನನ್ನ ಮನ ಮೆಚ್ಚಿಸುವ ಸಾಹಸಕ್ಕೆ ಕೈ ಹಾಕಿ, ನಿನ್ನ ಅಂತರಂಗದ ಪುಟಗಳ ನನ್ಮುಂದೆ ತೆರೆದಿಡುತ್ತಿದ್ದೆ. ನಿನ್ನ ಮುದ್ದು-ಮುದ್ದಾದ ಮಾತುಗಳು, ನನ್ನನು ಗೌರವಿಸುವ ರೀತಿ, ನಿನ್ನ ನಿಶ್ಕಲ್ಮಶವಾದ ಪ್ರೀತಿಗೆ ಮಣಿದು ಆ ದಿನ ಆ ಕೃಷ್ಟನ ಸನ್ನಿಧಿಯಲ್ಲಿ ನಿನ್ನ ಪ್ರೀತಿಯ ಸ್ವೀಕರಿಸಿದೆ, ನಿದ್ರೆ ಬಾರದಿದ್ದಾಗ ಜೋಗುಳ ಹಾಡಲು ಬಾರದಿದ್ದರೂ , ಹಾಡಿ ಮಲಗಿಸುವ ಪರಿ, ಮಗುವಂತೆ ನನ್ನ ಬಗ್ಗೆ ಕಾಳಜಿ ವಹಿಸಿ ನೋಡಿಕೊಳ್ಳುವ ಮನೋಭಾವ ಇವೆಲ್ಲದಕ್ಕೂ ಸೋತು ನಿನ್ನ ಪ್ರೀತಿಯ ಮಡಿಲಲ್ಲಿ ನಾ ಬೆಚ್ಚಗೆ ಮಲಗಿದ್ದೆ. ಆದರಿಂದು ನೀ ಏಕೆ ನಮ್ಮ ಸುಂದರ ಪ್ರಪಂಚದಿಂದ ಒಂದೊಂದೇ ಹೆಜ್ಜೆಗಳ ಹಿಂದೆಗೆಯುತ್ತಿದ್ದೀಯಾ? ನಾ ಅಂತಹ ತಪ್ಪೇನನ್ನು ಮಾಡಿದೆ ಸಂಜೂ??

ನಿನ್ನ ಪ್ರೀತಿ ಮಾತುಗಳು, ನಾ ಸೋತಾಗ ನನ್ನಲ್ಲಿ ತುಂಬಿದ ಧೈರ್ಯ, ಮುಂದಿನ ಜೀವನ ಸಾಗಿಸಲು ನೀಡಿದ ಪ್ರೋತ್ಸಾಹ ಎಲ್ಲವೂ ನನ್ನ ಕಣ್ಮುಂದೆ ಬಂದು ಹಿಂಸಿಸುತಿವೆ. ಆ ದಿನ ತೋರಿದ ಕಾಳಜಿ, ಪ್ರೀತಿ, ವಾತ್ಸಲ್ಯ, ಮಮತೆ ಎಲ್ಲವೂ ಈಗ ಶೂನ್ಯವಾಗಿ ನನ್ನ ಕಾಡುತಲಿದೆ. ನಿಜ ನಾ ಎಂದೂ ಖುಷಿ ಕಾಣದಷ್ಟು ನೀ ನನಗೆ ಖುಷಿಯ ನೀಡಿದ್ದೀಯ? ಸಂತೋಷ  ಎಂದರೇನೆಂಬುದನ್ನು ಅದರ ಶಿಖರವನೇರಿಸಿ ತೋರಿಸಿದ್ದೀಯ. ಇದಕ್ಕೆ ನಾ ನಿನಗೆ ಚಿರ ಋಣಿ. ನಿನ್ನ ಹಾಲ್ಜೇನಿನಂತಹ ಪ್ರೀತಿಯ ಕಡಲಲ್ಲಿ, ಬಾಳೆಂಬ ತೆಪ್ಪದ ಮೇಲೆ ಕುಳಿತು, ನೀ ಕರೆದ ಕಡೆ ನಾ ಸಾಗುತಲಿದ್ದೆ.. ನಾ ನಕ್ಕರೆ ನಿನಗದೇ ಉಲ್ಲಾಸ, ನಾ ಅತ್ತಾಗ ನನ್ನ ಧ್ವನಿ ಕೇಳದೆಯೇ ನನ್ನ ನೋವನ್ನು ಅರಿತು ಸಮಾಧಾನಿಸುತ್ತಿದ್ದ ನಿನ್ನ ಮನಸ್ಸು ಇಂದು ನಾ ಬಿಕ್ಕಿ-ಬಿಕ್ಕಿ ಅಳುತ್ತಿದ್ದರೂ ಕೇಳಿಸದೆ ಸುಮ್ಮನೆ ಕುಳಿತಿರುವೆ ಏಕೆ? ನಿನ್ನ ನೆನೆಪಿನಲೆಗಳು ಬಂದು-ಬಂದು ನನ್ನೆಡೆಗೆ ಅಪ್ಪಳಿಸುತಲಿವೆ. ಆ ದಿನ ಸಂತೋಷದ ಶಿಖರದಲ್ಲಿ ಕುಳಿತಿದ್ದ ನಾನು ಇಂದು ಆ ಶಿಖರದ ಹೊಸ್ತಿಲ ಬಳಿ ನಿನ್ನ ಪ್ರೀತಿಯ ಭಿಕ್ಷೆಯ ಬೇಡುತಲಿರುವೆ… ಹೇಳು ಮತ್ತೆ ನನ್ನ ಬಾಳಿಗೆ ಆ ಸುಂದರ ಕ್ಷಣಗಳ ತರುವೆಯಾ? ನಿನ್ನ ಪ್ರೀತಿ ಪಲ್ಲಕ್ಕಿಯಲಿ ನನ್ನ ಕುಳ್ಳಿರಿಸಿಕೊಂಡು ಹೋಗುವೆಯಾ? ನಿನ್ನೊಡನೆ ಮೂರು ದಿನ ಬಾಳಿ ತೃಪ್ತಿ ಪಡಲು ಅವಕಾಶವ ಕಲ್ಪಿಸಿಕೊಡುವೆಯಾ? ನಿನ್ನ ಮಡಿಲಲ್ಲಿ ಬೆಚ್ಚಗೆ ಮಲಗಲು ಸಮ್ಮತಿ ನೀಡುವೆಯಾ? ಐ ಮಿಸ್ಸ್ ಯೂ ಸಂಜೂ, ತುಂಬಾನೆ …

ಸಂಜೂ ನನ್ನ ಮನದಲ್ಲಿ ಇಷ್ಟೆಲ್ಲಾ ಪ್ರಶ್ನೆಗಳ ಸುರಿಮಳೆ ಹಾದು ಹೋದರೂ ಇನ್ನೂ ನಿನ್ನ ಮೊಬೈಲ್ ರಿಂಗ್-ರಿಂಗ್ ಆಗುತಲಿದೆ. ಎಲ್ಲಿ ಕಳೆದುಹೋಗಿರುವೆ ಸಂಜೂ…ಈ ಮೌನದರಮನೆಯ ಹೇಗೆ ಹೊಕ್ಕಿ ಬರಲಿ ನಾ ನಿನ್ನೆಡೆಗೆ? ಈ ದಿನ ನಿನ್ನ ಗೆಳತಿ ನಿನ್ನ ಪ್ರೀತಿಗೆ ಅಂಗಲಾಚಿ ಪರಿತಪಿಸುತಲಿದ್ದರೂ ನಿನಗೆ ಕೇಳಲಾದೀತೇ? ಒಮ್ಮೆಯೂ ಬಿಕ್ಕಿ ಅಳದ ನಾನು ಇಂದು ನನ್ನ ರೂಮಿನ ಕೋಣೆಯಲಿ ಮೂಲೆಯೊಳಗೆ ಕುಳಿತು, ಕೊರಗುತಲಿರುವೆ.. ನಿನಗಾಗಿ… ನಿನಗಾಗಿ ಮಾತ್ರ… ದಯವಿಟ್ಟು ಕರೆ ಮಾಡು. ನನ್ನ ತಪ್ಪುಗಳ ಕ್ಷಮಿಸಿ ನನ್ನ ಬಳಿ ಬಾ .. ಪ್ಲೀಜ್… ನಿನ್ನ ನಿರೀಕ್ಷೆಯಲ್ಲಿ ಕಾಯ್ತಾಯಿದ್ದೇನೆ ಸಂಜೂ… ಮತ್ತೊಮ್ಮೆ ಬಾ……………….!!!!!!