Archive for the ‘ಪ್ರೀತಿಯ ಪತ್ರ’ Category

ಗೆಳತಿ..ನಿನ್ನ ಒಂದು ಪತ್ರದ ನಿರೀಕ್ಷೆಯಲ್ಲಿ ….

ಜೂನ್ 28, 2009

miss_u

ನಲ್ಮೆಯ ಗೆಳತಿಗೆ,

ನನಗೆ ಗೊತ್ತು ನೀ ತುಂಬಾ ಚೆನ್ನಾಗಿದ್ದೀಯ ಅಂತ..ಮದುವೆಯಾದ ನಂತರ ನಿನ್ನಿಂದ ಒಂದೂ ಪತ್ರ ಬಾರದೇ ಇದ್ದುದಕ್ಕಾಗಿ ನನ್ನ ಮನಸ್ಸಿಗೆ ತುಂಬಾ ನೋವುಂಟಾಗಿದೆ.. ವಾರಕ್ಕೆ ಎರೆಡು ಬಾರಿ ನಿನ್ನ ಪತ್ರ ನನ್ನ ಮನೆ ಬಾಗಿಲಿಗೆ ಬರುತ್ತಿದ್ದುದು, ಹದಿನೈದು ದಿನಗಳಾದರು ನನ್ನ ಕಣ್ಣಿಗೆ ಬೀಳದೆ ಚಂದಿರನಿಲ್ಲದ ಆಕಾಶದಂತಾಗಿದೆ ನನ್ನ ಬದುಕು…

ಗೆಳತಿ ನೀನಿಲ್ಲದೆ ಬದುಕು ಖಾಲಿ-ಖಾಲಿ ಅನಿಸುತಿದೆ..ನಿನ್ನ ಪ್ರೀತಿ ಮಾತುಗಳನ್ನು.. ನಿನ್ನ ಮುದ್ದಾದ ಅಕ್ಷರಗಳಲ್ಲಿ ನೋಡುತ ,ಓದುತ ಇರುತ್ತಿದ್ದೆ.. ನೀ ನನ್ನೊಡನಿಲ್ಲ ಅನ್ನೋ ಭಾವನೆಗಳ ಹೋಗಲಾಡಿಸುತ್ತಿದ್ದ ನಿನ್ನ ಒಲವಿನ-ಸಾಂತ್ವಾನದ ಮಾತುಗಳು, ನಿನ್ನ ಕವಿತೆಗಳು,ನೀನು ಸೊಗಸಾಗಿ ಬಿಡಿಸುತ್ತಿದ್ದ ಚಿತ್ರಗಳನ್ನು ನಾನೆಷ್ಟು ಮಿಸ್ಸ್ ಮಾಡಿಕೊಳ್ಳುತ್ತಿದ್ದೇನೆ ಗೊತ್ತಾ?? ಒಂದು ವಾರದಿಂದ ನೀ  ಬರೆದಿರುವ ಹಳೆಯ ಪತ್ರಗಳನು ನನ್ನ ಹಾಸಿಗೆಯೆಲ್ಲಾ ಹರಡಿ ಓದುತ್ತಿದ್ದೇನೆ..

ಪತ್ರದಲ್ಲಿ ಸಿಗುವ ಆತ್ಮೀಯತೆ ನೀ ನನ್ನ ಪಕ್ಕದಲ್ಲಿದ್ದರೂ ಸಿಗುವುದಿಲ್ಲ ಕಣೇ ..ಅದರ ಟೇಸ್ಟೇ ಬೇರೆ..ಅಷ್ಟು ಮುದ್ದಾಗಿ ಹೃದಯಕ್ಕೆ ಹತ್ತಿರವಾಗಿ ಮನಸ್ಸಿಗೆ ನಾಟುತ್ತವೆ ನಿನ್ನ ಕೋಲ್ಮಿಂಚಿನಂತಹ ನುಡಿಗಳು.. ಸ್ವಚ್ಚಂದದ ಭಾವನೆಗಳು.. ಮನದ ಪಿಸುಮಾತುಗಳು..ಎಲ್ಲಕ್ಕೂ ಮಿಗಿಲಾಗಿ  ನಿನ್ನ ನಿಷ್ಕಲ್ಮಶ ಸ್ನೇಹಸಾಗರದಲ್ಲಿ ನಾ ಮುಳುಗಿ ಹೋಗಿದ್ದೇನೆ.. ೩ ದಿನದಲ್ಲಿ ನಡೆದ ಎಲ್ಲಾ ವಿಷಯಗಳನ್ನು ೨ ಹಾಳೆಯ ತುಂಬಾ ತುಂಬಿಸಿ ಅದಕ್ಕೆ ಬಣ್ಣಗಳಿಂದ ಅಲಂಕರಿಸಿ ಎನ್ವೆಲೋಪ್ನಲ್ಲಿ ಬಂದಿಸಿ ಅಂಚೆ ಪೆಟ್ಟಿಗೆಗೆ ಹಾಕಿ ನಿನ್ನ ಉತ್ತರಕ್ಕೆ ಕಾಯುತ್ತಿದ್ದುದರಲ್ಲಿ ಏನೋ ಮಜವಿತ್ತು…ಇದು ನನ್ನ ೪ನೇ ಪತ್ರ ದಯವಿಟ್ಟು ನನ್ನ ಈ ಒಂದು ಪತ್ರಕ್ಕೆ ಉತ್ತರಕೊಡು… ನನಗೆ ನೀನಲ್ಲದೆ ಒಂಟಿತನ ಕಾಡುತಿದೆ…

ನಿನಗೆ ನೆನಪಿದೆಯಾ ಶಾಲೆಯಲ್ಲಿದ್ದಾಗ ಇಬ್ಬರೂ ಒಟ್ಟಿಗೆ ಒಂದೇ ಬೆಂಚಿನಲ್ಲಿ ಕುಳಿತುಕೊಳ್ಳುತ್ತಿದ್ದರೂ ಪ್ರತಿನಿತ್ಯ ಪತ್ರವಿನಿಮಯವಾಗುತ್ತಿತ್ತು… ಆದರಿಂದು ಹದಿನೈದು ದಿನಗಳಾದರೂ ನಿನ್ನ ಒಂದೂ ಪತ್ರ ನನಗೆ ಬರಲಿಲ್ಲ.. ನನಗೆ ಒಂಟಿತನದ ನೆರಳೂ ಬೀಳದಂತೆ ನನ್ನ ನೆರಳಾಗಿದ್ದ ನೀನು ಇಂದು ಇಲ್ಲದೆ ಕಾರ್ಮೋಡ ಕವಿದಂತೆ ಭಾಸವಾಗುತಿದೆ… ಅಕ್ಕ-ಅಣ್ಣ, ಅಮ್ಮ-ಅಪ್ಪನಿಗಿಂತಲೂ ಮಿಗಿಲಾದ ನನ್ನ ಜೀವದ ಗೆಳತಿಯ ಕಳೆದುಕೊಳ್ಳಲು ನನ್ನಿಂದ ಸಾಧ್ಯವಾಗುತ್ತಿಲ್ಲ…. ಒಮ್ಮೆಯಾದರೂ ನನ್ನ ಮನೆಗೆ ಬಂದು ಹೋಗು..ನಿನ್ನ ಮಡಿಲಲ್ಲಿ ಮಲಗಿ ನನ್ನ ನೋವನ್ನೆಲ್ಲಾ ಹಂಚಿಕೊಳ್ಳುತ್ತೇನೆ…. ಕಣ್ಣೀರು ಬಂದರೂ ಒತ್ತಿ ಹಿಡಿದಿರುವೆ ..ನೀ ಬಂದು ಹಿಡಿಯುವೆ ಎಂದು… ಬರುವೆಯಲ್ಲವೇ…??????

-ನಿನ್ನ ಹಾದಿಯನ್ನೇ ನೋಡುತ್ತಿರುವ

ಇಂಚರ

ರೀ ಏನುಂದ್ರೆ ಬೇಗ ಬರ್ತೀರಾ??

ಜೂನ್ 9, 2009

writing-a-letter

ನನ್ನ ಜೀವಕೆ ಉಸಿರಾದ ಪ್ರೀತಿಯ ಪತಿದೇವರಿಗೆ,

ನಂಗೊತ್ತು, ನನ್ನ  ಮನಕೆರಳಿಸುವ ನಿಮ್ಮ ಮೀಸೆಯಡಿಯಲ್ಲಿ ಅರಳುತಿರುವ ಮುದ್ದಾದ ನಗು ಹೊತ್ತು ಈ ಪತ್ರವನ್ನು ಓದುತ್ತಿದ್ದೀರಿ ಅಲ್ವಾ? ರೀ ಈ ಪತ್ರ ಓದುವಾಗ ಹಾಗೂ ಓದಿದ ಮೇಲೂ ಹೀಗೆ ನಗುತ್ತಿರಿ ಎಂದು ನಾನು ಬಯಸುತ್ತೇನೆ.ಏಕೆಂದರೆ ಈ ಮುದ್ದಾದ ನಗುವಿಗೆ ತಾನೆ ೨ ವರಷಗಳ ಹಿಂದೆ ನಾ ಸೋತು ಹೋಗಿದ್ದು.. ನಾನು ಅಲ್ಲಿ ಇಲ್ಲದೆಯೇ ನೀವು ಚೆನ್ನಾಗಿಲ್ಲ ಎಂದು ನನಗೆ ಗೊತ್ತು..ನನ್ನ ಮೇಲೆ ಪ್ರೀತಿ ಇದ್ದರೆ  ನಿಮ್ಮ ಆರೋಗ್ಯದ ಕಡೆಗೂ ಗಮನ ಕೊಡಿ.. ದಿನ್ನಕ್ಕೆರಡು ಬಾರಿ ನಿಮ್ಮ ಜೊತೆ ಫೋನಿನಲ್ಲಿ ಮಾತನಾಡಿದರೂ ಪತ್ರದಲ್ಲಿ ತೋರುವ ಆತ್ಮೀಯತೆ ಅದರಲ್ಲಿರುವುದಿಲ್ಲವಲ್ಲವೇ? ಒಂದು ದಿನವೂ ನನ್ನ ಕೈಯ್ಯಾರೆ ತುತ್ತು ತಿನ್ನದೆ ಊಟ ಮಾಡದ ನೀವು ಈವಾಗ ಹೇಗಿದಿರೋ ಊಟ-ತಿಂಡಿ ಸರಿಯಾಗಿ ಸೇವಿಸುತ್ತಿದ್ದೀರೋ ಇಲ್ಲವೋ ಎಂದು ನಿಮ್ಮ ಬಗ್ಗೆಯೇ ನೂರಾರು ಯೋಚನೆಗಳು ನನ್ನ ಕಾಡುತಿದೆ ಚಿನ್ನ.. ಈ ಹದಿನೈದು ದಿನಗಳಲ್ಲಿ ನಿಮ್ಮನ್ನು ತುಂಬಾನೆ ಮಿಸ್ ಮಾಡಿಕೊಂಡೆ ಚಿನ್ನ…ನನ್ನಷ್ಟೇ ನೀವು ಮಿಸ್ ಮಾಡಿಕೊಳ್ಳುತ್ತಿದ್ದೀರಿ ಎಂದು ನನಗನ್ನಿಸುತ್ತಿದೆ…ನಾನು ಗರ್ಭಿಣಿ ಎಂದು ಇನ್ನೆಷ್ಟು ದಿನ ನನ್ನ ತಾಯಿಯಮನೆಯಲ್ಲಿ ನನ್ನನ್ನು ಬಿಟ್ಟು ಒಂಟಿಯಾಗಿರುವಿರಿ??

ಆದಷ್ಟು ಬೇಗ ಈ ಭಾನುವಾರ ಬರಲಿ.. ಆ ಒಂದು ವಾರದ ರಜೆಯಲ್ಲಿ ಸಂಪೂರ್ಣವಾಗಿ ನಾ ನಿಮ್ಮೊಡನೆ ಸಮಯ ಕಳೆಯಲು ಇಚ್ಚಿಸುತ್ತೇನೆ. ನಿಮ್ಮ ತೋಳೊಳಗೆ ನನ್ನನ್ನು ಬಳಸಿ ನೆಮ್ಮದಿಯಿಂದ ನಿಮ್ಮ ಎದೆಗೊರಗಿ ಮೌನ ಸಂಭಾಷಣೆಯಲ್ಲಿ ತೊಡಗಬೇಕು, ನಿಮ್ಮ ಮಡಿಲಲ್ಲಿ ನೆಮ್ಮದಿಯಿಂದ ಮಲಗಬೇಕೆಂದೆಲ್ಲಾ ಮನಃ  ಹಾತೊರೆಯುತ್ತಿದೆ… ಏನುಂದ್ರೆ ಬರುವಾಗ ತಪ್ಪದೇ ನನಗಿಷ್ಟವಾದ ಸಿಹಿ ತಿನಿಸು ಮತ್ತೆ ಮಲ್ಲಿಗೆಯ ತೋಮಾಲೆ ತರುವುದನ್ನು ಮರೆಯಬೇಡಿ..

ಇನ್ನೊಂದು ವಾರದೊಳಗೆ ನಮ್ಮಿಬ್ಬರ ಪ್ರೇಮದ ಕುಡಿ ಈ ಜಗತ್ತಿಗೆ ತನ್ನ ಮುಗ್ಧ ಮೋರೆ ಹೊತ್ತು ಬರಲಿದೆ.. ಆ ಕ್ಷಣವ ನೆನೆದರೆ  ಭಯ-ಆತಂಕಗಳು, ಖುಷಿ-ಸಂತಸ ಎಲ್ಲವೂ ಆಗುತ್ತಿದೆ… ಆ ಮಗುವಿನ ಮೊದಲ ಕೂಗನ್ನು ಕೇಳಲು ನನ್ನ ಕಿವಿಗಳು ಕಾಯುತಿವೆ.. ಅದರ ಮೊದಲ  ಸ್ಪರ್ಶವ ಅನುಭವಿಸಲು ತುಂಬಾ ಕಾತುರದಿಂದ ಕಾಯುತಿರುವೆ… ಆದರೂ ಏನೋ ಭಯ ನನ್ನ ಕಾಡುತಿದೆ.. ನೀವು ನನ್ನೊಡನಿದ್ದರೆ ಈ ಪ್ರಪಂಚವನ್ನೇ ನಾ ಗೆಲ್ಲಬಲ್ಲೆ ಎಂಬ ನಂಬಿಕೆ ಇದೆ.. ಏನುಂದ್ರೆ ಬೇಗ ಬಂದುಬಿಡಿ.

ಆದಷ್ಟು ನಿಮ್ಮ ಸನಿಹದಲ್ಲೇ ಇದ್ದು ನಿಮ್ಮ ಪ್ರೇಮ ಸಾಗರದಲ್ಲಿ ಮುಳುಗಿ ನನ್ನಲ್ಲಿರುವ ಭಯ-ಆತಂಕಗಳನ್ನು ನೀವು ಹೊರದೂಡಿಸಿ.  ನಮ್ಮ ಭವಿಷ್ಯವ ಬೆಳಗುವ ಮುತ್ತಿನಂತಹ ಮುದ್ದಾದ ಮಗುವಿಗೆ ಜನ್ಮ ನೀಡುತ್ತೇನೆ. ಈ ನನ್ನ ಆಸೆಗಳನ್ನು ಈಡೇರಿಸಲು ಬೇಗ ಬರುವಿರೆಂದು ನಂಬಿದ್ದೇನೆ. ಆದಷ್ಟು ಬೇಗನೆ ಬಂದು ನನ್ನನ್ನು ಸೇರಿ.. ನಮ್ಮ ಕುಟುಂಬಕ್ಕೆ ಆಗಮಿಸಲಿರುವ ಸ್ವಾತಿಮುತ್ತಿನ ಬಗ್ಗೆ ನೂರಾರು ಕನಸುಗಳ ಹೆಣೆಯೋಣ….. ನಿಮ್ಮದೇ ನಿರೀಕ್ಷೆಯಲ್ಲಿ…….

ನಿಮ್ಮ ಬಾಳಸಂಗಾತಿ

ರೀ.. ಏನೂಂದ್ರೆ ಸ್ವಲ್ಪ ನೋಡ್ತೀರಾ ಇಲ್ಲಿ !

ಫೆಬ್ರವರಿ 20, 2009

ಪ್ರೀತಿಯ ಪತಿ ದೇವರಿಗೆ,

ನಿಮ್ಮ ಅರ್ಧಾಂಗಿಯ ಹೃದಯ ಪೂರ್ವಕ ನಮನಗಳು. ಇವತ್ತು ಯಾವ ದಿನ ಗೊತ್ತೇ? ನಮ್ಮ ಮದುವೆಯಾಗಿ, ನಾನು ನಿಮ್ಮ ಅರ್ಧಾಂಗಿಯಾಗಿ ಇವತ್ತಿಗೆ ಒಂದು ತಿಂಗಳು ತುಂಬಿದೆ. ನಿಮಗೆ ನೆನಪಿದೆಯಾ ಆ ದಿನ ನಾನು ಮದುಮಗಳಾಗಿ ಕಲ್ಯಾಣ ಮಂಟಪಕ್ಕೆ ನೂರಾರು ಕನಸುಗಳ ಹೊತ್ತು ವರನಾದ ನಿಮ್ಮೆಡೆಗೆ ಮತ್ತು ನಿಮ್ಮ ಪ್ರೀತಿಯ ಸಾಗರಕ್ಕೆ ನಾನು ಹೆಜ್ಜೆ ಇಡುತ್ತಿದ್ದೆ. ನಿಮ್ಮ ಕಣ್ಣುಗಳಲ್ಲಿ ಸಂತೋಷದಿಂದ ಉರಿಯುತ್ತಿರುವ ಜ್ಯೋತಿ ನನ್ನ ಬಾಳ ಬೆಳಗಲು ಹೊತ್ತಿಸಿದೆಯೋ ಎಂಬಂತೆ ನಿಮ್ಮ ಬಾಳ ಸಾಗಾರಕೆ ನೀವು ನನಗೆ ಭರ್ಜರಿಯಾದ ಆಹ್ವಾನ ನೀಡುತ್ತಿದ್ದೀರಿ ಎಂದು ಹೇಳತೊಡಗಿತ್ತು ಆ ನಿಮ್ಮ ಆಸೆ ಹೊತ್ತ ಕಣ್ಣುಗಳು!

ಆ ಕ್ಷಣ ನಿಮ್ಮ ಬಲಭಾಗಕ್ಕೆ ಕುಳಿತು ಮಂತ್ರೋಪದೇಶಗಳ ಪಠಿಸಿ, ಅಗ್ನಿ ಸಾಕ್ಷಿಯಾಗಿ ಕಾಯ-ವಾಚ-ಮನಸಾ ಒಪ್ಪಿ ನಿಮ್ಮವಳಾದೆ. ನೀವು ನನ್ನ ಕೊರಳಿಗೆ ಮಾಂಗಲ್ಯಧಾರಣೆ ಮಾಡುವ ಕ್ಷಣವಂತೂ ಒಂದೆಡೆ ಮುಂದಿನ ಸುಂದರ ಬಾಳಿನ ಚಿತ್ತಾರ ಕಣ್ಣ ಮುಂದೆ ಹರಿಯತೊಡಗಿದ್ದರೆ ಇನ್ನೊಂದೆಡೆ ತಂದೆ-ತಾಯಿಯ ಅಗಲಿ ಹೋಗಬೇಕೆಂಬ ನೋವು ಕಾರ್ಮೊಡದಂತೆ ನನ್ನ ತಬ್ಬಿ ಕುಳಿತಿತ್ತು. ಕಂಬನಿಯು ಚಿಮ್ಮಲು ಹೊರಬರುತ್ತಿದ್ದರೂ ನನ್ನ ಮನಸ್ಸು ಅದನ್ನು ತಡೆದು ನಿಲ್ಲಿಸಿ ಬದಲಾಗಿ ಮುಖದಲ್ಲೊಂದು ಸಣ್ಣನೆ ಮುಗುಳ್ನಗೆಯಾಗಿ ಹೊರಬಿದ್ದಿತ್ತು. ನಂತರ ಆಕಾಶದಲ್ಲಿ ಅರುಂಧತಿ ನಕ್ಷತ್ರ ತೋರಿಸಲು ಪುರೋಹಿತರ ಹಿಂದೆ ಹೋದಾಗ ನೀವು ನನ್ನ ಬಳಸಿ ನನ್ನ ಕೈಯನ್ನು ನಿಮ್ಮ ಕೈಯೊಳಗೆ ಹಿಡಿದು ಭದ್ರವಾದ ಕೋಟೆಯೊಳಗೆ ನನ್ನ ಬಂಧಿಸಿದಾಗ ಪುಳಕಗೊಂಡು ಆ ಕ್ಷಣ ನಲಿವಿನ ತೋಟವಾಯಿತು. ಎಲ್ಲರ ಆಶಿರ್ವಾದಗಳಿಗೆ ಮೊರೆ ಹೊಕ್ಕು ಹೂವ ಹಾಸಿಗೆಯ ಬೆನ್ನ ಹತ್ತಿ ಮನ ಸೋತು ಕಿಟಕಿಯಂಚಿನಲ್ಲಿ ಕದ್ದು-ಕದ್ದು ನೋಡುತ್ತಿದ್ದ ಚಂದ್ರನ ಕಣ್ಮುಚ್ಚಿ ನಿಮ್ಮ ಬಿಸಿಯಪ್ಪುಗೆಯಲ್ಲಿ ಕರಗಿ ನೀರಾಗಿ ಸಂತೋಷವನುಂಡು ನಿಮ್ಮವಳಾದ ಭಾಗ್ಯವ ನೆನೆಸಿಕೊಂಡು ಈ ಪತ್ರವ ಬರೆಯುತ್ತಿದ್ದೇನೆ.

ಇಷ್ಟು ದಿನ ತವರಿನ ಆಸೆ ಹೊತ್ತು ಇಲ್ಲಿಗೆ ಬಂದರೆ ಬರೀ ನಿಮ್ಮ ನೆನಪುಗಳೇ ಹೃದಯ ತುಂಬುವಷ್ಟು ನನ್ನನ್ನಾವರಿಸಿ ವಿರಹ ವೇದನೆಯ ರಾಗವ ನುಡಿಸುತಿದೆ. ನೀವು ಆದಷ್ಟು ಬೇಗ ಬಂದು ನಿಮ್ಮವಳನ್ನು ನಿಮ್ಮ ಮನೆಯಂಗಳಕೆ, ಹೃದಯದಂಗಳಕೆ ಕರೆದುಕೊಂಡು ಹೋಗಿ.

ನಿಮ್ಮ ನೀರೀಕ್ಷೆಯಲ್ಲಿ ನಿಮಗಾಗಿ ಕಾಯುತ್ತಿರುವೆ…

ಇಂತಿ,
ನಿಮ್ಮ ಒಲವಿನ ಅರ್ಧಾಂಗಿ…

ಕನಸು

ನಿನ್ನ ತಬ್ಬಿಕೋಬೇಕು ಕಣೊ !

ಫೆಬ್ರವರಿ 8, 2009

0001-0401-2319-5145_couple_on_the_beach_at_sunset

ಮುದ್ದು-ಮುದ್ದಾಗಿ ಪೆದ್ದು ಪೆದ್ದಾಗಿ ನನ್ನ ಕಣ್ಣುಗಳನ್ನು ಕಿತ್ತು ತಿಂದು ಬಿಡುವ ಹಾಗೆ ನೋಡುತ್ತಾ ನನ್ನ ಮಡಿಲಲ್ಲಿ ಬಂದು ಮಲಗಿದ್ದನ್ನು ಯಾಕೋ ಮರೆಯೋಕಾಗ್ತಿಲ್ಲ ಸಂಜು. ಆ ಸೂರ್ಯ ನಮಗೆ ತೊಂದರೆ ಕೊಡಬಾರದು ಅಂತ ಚೂರು ಚೂರು ಮರದ ಎಲೆಗಳ ಸಂಧಿಯಿಂದ  ಕದ್ದು ನೋಡುತ್ತಿದ್ದ.. ನಾನಾಗ ಗದರಿದ್ದಕ್ಕೆ ಕೋಪಗೊಂಡು ಮಲಗೊಕ್ಕೆ ಹೊರಡುತ್ತಿದ್ದ, ಆಗ ನೀ ಅವನಿಗೆ ಕಂಡೂ ಕಾಣದಂತೆ ನನ್ನ ಕೆನ್ನೆಗೆ ಮುತ್ತಿಟ್ಟು ನನ್ನ ಗಲ್ಲ ಕೆಂಪು-ಕೆಂಪಾದಾಗ ನೀ ನನ್ನ ಬರಸೆಳೆದು ಇನ್ನೊದು ಮುತ್ತಿಟ್ಟು ನಿನ್ನೆದೆಯೊಳಗೆ ನನ್ನ ತುಂಬಿಸಿಕೊಂಡು ನಾ ಕರಗಿಹೊದಾಗ ಆ ಮರದಲ್ಲಿ ಕುಳಿತ್ತಿದ್ದ ಜೋಡಿ ಹಕ್ಕಿಗಳು ನಮ್ಮನ್ನೇ ದಿಟ್ಟಿಸುತ್ತಿದ್ದನ್ನು ನೀ ತಾಳಲಾರದೆ ಅದಕ್ಕೆ ಕಲ್ಲೆಸೆದು ನನ್ನ ಹೃದಯಕ್ಕೆ ಕನ್ನ ಹಾಕಿದ್ದನ್ನು ನೆನೆಸಿಕೊಳ್ಳುತ್ತಾ ಒಳಗೊಳಗೇ ನಗುತ್ತಿದ್ದೀನಿ ಸಂಜು.
ನಿನ್ನೊಡನ್ನಿದ್ದಷ್ಟು ಹೊತ್ತು ಅದೇನೋ ಲಜ್ಜೆ ಖುಷಿ ಒಲವು ಎಲ್ಲವೂ ದಡ ದಾಟಿ ನಿನ್ನೊಲವಿನ ಊರಿನೆಡೆಗೆ ಹರಿಯತೊಡಗಿತ್ತು. ನೀನು ನನ್ನ ನೀಲ ಕೇಶದ ತುದಿಯನ್ನಿಡಿದು ನಿನ್ನ ಮುದ್ದು-ಮುದ್ದಾದ ಕೈಬೆರಳುಗಳ ನಡುವೆ ಹೆಣೆದಿದ್ದ ಜಡೆಯನ್ನಿಡಿದು ಆಟವಾಡುತ್ತಿದ್ದಾಗ ನನಗೆನೇನೋ ಅನ್ನಿಸುತ್ತಿತ್ತು . ನಿನ್ನ ಕೈಬೆರಳುಗಳ ನಡುವೆ ನನ್ನ ಕೈ ಬೆರಳುಗಳ ಹೆಣೆದು ಕೊರಳಿಗೆ ಹಾರ ಹಾಕಿದಾಗ ಈಗಾಲೇ ನಿನ್ನೆಳೆದುಕೊಂಡು ಹೋಗಿ ಮದುವೆ ಆಗಿ ಬಿಡೋಣ ಎಂದನಿಸಿ, ನನ್ನ ಮಂಕುಬುದ್ದಿಗೆ ನಾನೇ ತುಂಟ ನಗೆ ಬೀರಿ  ತಲೆ ಚಚ್ಚಿಕೊಂಡು ನಿನಗೆ ಮುತ್ತಿಟ್ಟಾಗ ನಿನ್ನ ಕಚಗುಳಿಯಿಡುವ ಮೀಸೆ ನನ್ನ ಕೆಣಕಿದ್ದನ್ನು ನೆನೆಯುತ್ತಾ ನಾಚಿ ನೀರಾಗುತ್ತಿದ್ದೇನೆ ..ಸಂಜು ಬೇಗ ಬಂದು ನನ್ನ ಕುಡಿದುಬಿಡು, ಇಲ್ಲ ಅಂದ್ರೆ ಹರಿದು ಹೋಗಿಬಿಡುತ್ತೇನೆ .

ನಿನ್ನೆದೆಗೆ ನನ್ನ ತಲೆಯೊತ್ತಿ ಮಲಗಿದ್ದಾಗ  ನಿನ್ನ ತುಂಟ ಹೃದಯ ಇದೆಯಲ್ವಾ, ಅದು ನನ್ನ ಏನೇನೋ ಕೇಳಿ ಪಡೆದುಕೊಳ್ಳುತ್ತಿತ್ತು..ಇನ್ನೊಂದೆಡೆ ನಿನ್ನ ಬಿಸಿ ಉಸಿರು ನನ್ನ ಮುಂಗುರುಳಿಗೆ ತಾಗಿ ಅದು ನನ್ನ ಗಲ್ಲವ ಮುತ್ತಿಡುತ್ತಿತ್ತು. ನಿನ್ನ ಹಿತವಾದ ಸನಿಹ ಅದರೊಡನೆ ನನ್ನ ತಲೆ ನೇವರಿಸುವ ನಿನ್ನ ಕೈ ಇವೆಲ್ಲವ ನಡುವೆ ಮೌನ ಸಂಭಾಷಣೆಯು ನಡೆಯುತ್ತಿತ್ತು ಅದೆಂತಹ ಮಧುರ ಕ್ಷಣಗಳು ನಮ್ಮಿಬ್ಬರ ಮನ ತುಂಬಿತ್ತು. ನೀ ಹೊರಡೋಣ ಎಂದಾಗ ಏಳಲೂ ಆಗದೆ, ಏನೋ ಹೃದಯ ತುಂಬಿ ಬಂದು ನನ್ನ ಕಣ್ಣಾಲಿಗಳಲ್ಲಿ ಮುತ್ತಿನ ಬಿಂದುಗಳು ಹೋರಾಡಲಾಗದೆ ನನ್ನ ಗಲ್ಲದ ಹಾದಿ ಹಿಡಿದಾಗ ನೀ ಅವಕ್ಕೆ ಮುತ್ತಿಟ್ಟು ನಿನ್ನ ಕಣ್ಣುಗಳಲ್ಲೇ ಮುದ್ದು-ಮುದ್ದಾಗಿ ನನಗೆ ಧೈರ್ಯ-ಆಶ್ವಾಸನೆ ಕೊಟ್ಟು ನನ್ನ ಕೈಯೊಳಗೆ ನಿನ್ನ ಕೈಯನಿಟ್ಟು   ಅದಕೊಂದು ಸಿಹಿಯಾದ ಮುತ್ತನಿಟ್ಟು  ಕಳಿಸಿದ್ದನ್ನು ಇಗಲೂ ನೆನೆಸಿಕೊಂಡು ಯಾವುದೋ ಮೋಡದ ಮರೆಯಲಿ ನಿಂತು ನಗುತ್ತಿರುವೆ ಸಂಜು. ಹೇಳು, ಮತ್ಯಾವಾಗ ಬರ್ತಿಯಾ…ನಿನ್ನವಳ ನೋಡಲು? ಕದ್ದು-ಕದ್ದು ನನಗೆ ಮುತ್ತನಿಡಲು? ನಿನ್ನ ಬಾಹುಗಳಲಿ ನನ್ನ ತುಂಬಿಕೊಳ್ಳಲು?
………….ಕಾಯುತ್ತಿರುವೆ ಸಂಜು……………..

ಮನದ ದುಗುಡವನ್ನೆಲ್ಲ ಒಂದೆಡೆಗೆ ಬಚ್ಚ್ಚಿಟ್ಟು ಬಂದಿರುವೆ.. ನಿನ್ನ ಮದುವೆಗೆಂದು.. ನಿನಗೆ ಹರಸಲೆಂದು…

ಜನವರಿ 20, 2009

pic14

ಚಿನ್ನು..ನೋಡು ರೆಡಿ ಆಗ್ತಿದ್ದೇನೆ ನಿನ್ನ ಮದುವೆಗೆ ಬರಲೆಂದೇ..ನೀ ಕೊಡಿಸಿದ ಬಟ್ಟೆಯನ್ನೇ ಹಾಕಿಕೊಂಡಿದ್ದೇನೆ ಹೇಗೆ ಕಾಣಿಸುತ್ತಿದ್ದೇನೆ ಹೇಳುತ್ತಿಯ? ನಿನಗೆ ಮಾಡಿದ್ದ ಪ್ರಮಾಣನ ಉಳಿಸಿಕೊಲ್ಲೋದಕ್ಕೊಸ್ಕರ ನನ್ನ ಮನದ ದುಗುಡವನ್ನೆಲ್ಲ ಬಚ್ಚ್ಚಿಟ್ಟು ಬರಲು ತಯಾರಿದ್ದೇನೆ..ಚಿನ್ನು.. ಯಾವಗಲೂ ನಾನು ಕನ್ನಡಿ ಮುಂದೆ ಬಂದು ನಿಂತರೆ ಸಾಕು ನನ್ನ ನಾಚಿ ನೀರಾಗುವಂತೆ ಮಾಡುತ್ತಿದ್ದ ನೀನು ನಿನ್ನ ಕಲ್ಪನೆಗಳು. ಇಂದು ಯಾಕೋ ನೀ ಇಲ್ಲದೆ ವ್ಯತೆಯೇ ತುಂಬಿದೆಯಲ್ಲ..ಪ್ರತಿ ನಿತ್ಯ ಕನ್ನಡಿಯಲ್ಲಿ ಮೊಗವ ನೋಡಿದರೆ ಅರಳಿನಿಂತಿರುತ್ತಿತ್ತು ಇಂದು ನೊಡುತ್ತಿದ್ದರೆಯಾಕೋ ಮೊಗ,ಮನಸ್ಸೆಲ್ಲ ಬಾಡಿ ಹೋಗಿದೆ ಅಂತ ಅನಿಸುತಿಹುದು..ನಿನಗೆ ಗೊತ್ತ ರಾತ್ರಿ ಎಲ್ಲ ನನ್ನ ಕಣ್ಣಿಗೆ ನಿದ್ರೆ ಹತ್ತಲೇ ಇಲ್ಲ..ಅದೆಷ್ಟು ಅತ್ತೇನೋ ನಿನಗಾಗಿ..ಅದಕ್ಕೆ ಆ ಕಣ್ಣ ಹನಿಗಳೇ ಸಾಕ್ಷಿ ..!!

ನಾನು ಇಂದು ನನ್ನ ಗೆಳತಿಯೊಡನೆ ಬರುತ್ತಿದ್ದೇನೆ ನಿನ್ನ ಮದುವೆಗೆಂದು! ಮನದಲ್ಲಿ ಸಾಗರದಷ್ಟು ನೋವಿದ್ದರೂ ಎಲ್ಲವೂ ನುಂಗಿ ಬಸ್ ಹತ್ತಿ ಹೊರಟೆ ಬಿಟ್ಟೆ..ಆ ಬಸ್ ಬಂದು ನಿಂತಿದ್ದು ನಿನ್ನ  ಮದುವೆ ನಡೆಯುವ ಛತ್ರದ ಎದುರು..ಅಲ್ಲಿವರೆಗೆ ಸ್ವಲ್ಪ ಧೈರ್ಯದಿಂದಿದ್ದ ನನಗೆ ಭಯ ಶುರುವಾಯಿತು..ಬಸ್ ಇಳಿಯುತ್ತಿದ್ದಂತೆ ವಾಲಗದ ಶಬ್ದ ಕೇಳಿಸಿತು ನನ್ನದನ್ನ ನನ್ನ  ಚಿನ್ನುವನ್ನ ಕಳೆದುಕೊಳ್ಳುವ ಕ್ಷಣಗಳು ಹತ್ತಿರವಾಗುತ್ತಿದೆಯಲ್ಲ ಎಂಬ ವೇದನೆಯ ಹೊತ್ತು ಕಾಲೆಳೆದು ನಡೆದೇ ಮುಂದೆ..

ಇನ್ನೇನು ಮದುವೆ ಮನೆಗೆ ಕಾಲಿಡಬೇಕು ಅನ್ನೋಷ್ಟರಲ್ಲಿ ನಿನ್ನ್ನ ಹಾಗು ನಿನ್ನ ಭಾವಿ ಪತ್ನಿಯ ಹೆಸರಿರುವ ಫಲಕ ಕಾಣಿಸಿತು..ನಾನು ಅಂದುಕೊಂಡಿದ್ದೆ ಒಂದಲ್ಲ ಒಂದು ದಿನ ನಿನ್ನ ಹೆಸರಿನೊಡನೆ ನನ್ನ ಹೆಸರ ಫಲಕ ಹೀಗೆ ತೂಗಬಹುದೆಂದು ಆದರೆ ಆ ಆಶಾಗೋಪುರ ಇಂದು ಕುಸಿದು ಬಿದ್ದಿದೆ..ಅದನ್ನೂ ಸಹಿಸಿ ಮುಂದೆ ನಡೆದೇ ಮದುವೆ ಮನೆಗೆ ಕಾಲಿಟ್ಟೆ ಎದುರಿಗೇ ಹಸೆಮಣೆಯ ಮೇಲೆ ನೀ ನಗುತ ಕುಳಿತಿದ್ದೆ ನಿನ್ನ ಮುಂದಾಗುವ  ಒಡತಿಯೊಡನೆ..ಏನೋ ಹಿಂಸೆ ಕಳವಳ ನನ್ನ  ಕಾಡುತ್ತಿತ್ತು  ಚಿನ್ನು..ಮನದಲ್ಲೇ ಸಂಭಾಷಣೆ ಶುರುವಾಗಿತ್ತು..ಯಾಕೆ ಹೀಗೆ ಮಾಡಿದೆ ಚಿನ್ನು ..ನೀ ನನಗೆ ತಾಳಿ ಕಟ್ಟಬಹುದಿತ್ತಲ್ಲವೆ? ಹೀಗೆ ನೂರಾರು ಪ್ರಶ್ನೆಗಳಿಗೆ ಉತ್ತರವಿಲ್ಲದೆ ನಿನ್ನ ನೋಡುತ್ತಾ ಕುಳಿತೆ..ನನ್ನ ಮನದಲ್ಲಿ ಸ್ಮಶಾನ ಮೌನವಡಗಿ ಕುಳಿತಿತ್ತು..ಕಣ್ಣಲ್ಲಿ ನೀರು ಬಂದರು ಒತ್ತಿಟ್ಟು ಕುಳಿತಿರುವೆ ನಿನಗಾಗಿ!ನನ್ನ ಗೆಳತಿಯ ಕೈ ಹಿಡಿದೆ ಕುಳಿತಿದ್ದೆ.. ಏನು ಮಾತನಾಡಲೂ ತೋಚುತ್ತಿಲ್ಲ ಬರಿ ಪ್ರಶ್ನೆಗಳೇ..ಇಷ್ಟು ದಿನ ನೀ ಪ್ರೀತಿಸಿದ್ದು ನಿನ್ನ ಮದುವೆಯ ನಾನು ಕಣ್ಣು ತುಂಬಾ ನೋಡಲೆಂದೇ? ನಿನ್ನೊಡನೆ ಕಳೆದ ಸವಿ ಕ್ಷಣಗಳು ಕಣ್ಣ ಮುಂದೆ ಬಂದು ಹಿಮ್ಸಿಸುತ್ತಿದೆ..ಆದರೂ ನಿನಗೆ ಮಾಡಿದ ಪ್ರಮಾಣವ ಉಳಿಸಿಕೊಳ್ಳಲು ಎಲ್ಲವೂ ಸಹಿಸಿ ಕುಳಿತಿದ್ದೇನೆ..ನೋಡ ನೋಡುತ್ತಲೇ ಯಾವುದೊ ಶುಭ ಗಳಿಗೆಯಲ್ಲಿ ನೀ ಅವಳಿಗೆ ತಾಳಿ ಕಟ್ಟುಬಿಟ್ಟೆ ..ಆ ತಾಳಿ ಕಟ್ಟುವಾಗ ಒಮ್ಮೆ ನಿನ್ನ ಮನಸಲ್ಲಿ ನನ್ನ ಬಗ್ಗೆ ಏನಾದರೂ ಯೋಚನೆ ಬಂದಿತೇ? ಅದೆಷ್ಟು ಕುಶಿ ಇಂದ ಇದ್ದೀಯ ಚಿನ್ನು..ಒಂದು ಕಡೆ ನನಗೆ ನೀ ಕುಶಿ ಇಂದಿರುವೆ ಎಂಬ ಕುಶಿ ಇನ್ನೊಂದೆಡೆ..ನಿನ್ನ ಕಳೆದುಕೊಲ್ಲುವೆನೆಂಬ ನೋವು..ಕಾಡುತ್ತಿತ್ತು..ಎಲ್ಲರೂ ಮುಯ್ಯಿ ಕೊಡಲು ಸ್ಟೇಜ್ ಹತ್ತಿರ ಸಾಗತೊಡಗಿದರು..ನನಗೆ ಮೈ ಮೇಲೆ ಪ್ರಜ್ಞೆಯೇ ಇರಲಿಲ್ಲ ವೆಂಬಂತೆ ಇದ್ದೆ..ಯಾಕೋ ನಿನ್ನ ಹತ್ತಿರ ಬರುತ್ತಿದ್ದಂತೆ ಕೈ ಕಾಲು ನಡುಕ ಶುರುವಾಯಿತು..ಅದು ಮೊದಲ ಅನುಭವ..ನನ್ನ ಜೀವನದಲ್ಲಿ ಎಂದು ಅಷ್ಟು ನೋವಿನಾಳಕ್ಕೆ ನಾನು ಹೋಗಿರಲಿಲ್ಲ..ಇದೆ ಮೊದಲ ಬಾರಿ..ಈ ರೀತಿಯಾದ ಹಿಂಸೆ ಶುರುವಾಯಿತು.. ಆಗಲಾದರೂ ನೀ ನನ್ನ ಕನ್ನುಗಲೊಡನೆ ನನ್ನ ಕಣ್ಣುಗಳ ಬೇರೆಸುವೆಯೇನೋ ಎಂಬ ಪುಟ್ಟ ಆಸೆಯ ಹೊತ್ತು ನಿನ್ನನ್ನೇ ನನ್ನೆರಡೂ ಕಣ್ಣುಗಳಲಿ ಮುಗ್ಧತೆ ಇಂದ ನೋಡತೊಡಗಿದೆ..ಮೊದಲು ನನ್ನ ಕಂಬನಿಗಳು ಹರಿಯತೋದಗಿದರೆ ಮುತ್ತಿಟ್ಟು ಒರೆಸುತ್ತಿದ್ದ ನೀನು ಇಂದು ನಾ ಕಂಬನಿಗೈದರೂ ಕಂಡೂ ಕಾಣದವನಂತೆ ನಗುತ್ತಿದ್ದಿಯ ..ಯಾಕೆ ಅಂತ ಕೇಳಬಹುದೇ ? ನಿನಗಾಗಿ  ನಾನೇ ಕೈಯ್ಯಾರೆ ಬಿಡಿಸಿರುವ ಕಲಾಗುಚ್ಚವ ತಂದಿದ್ದೇನೆ ಉಡುಗೊರೆಯಾಗಿ ನೀಡಲು..ಅದರಲ್ಲಿ ಅದೆಷ್ಟು ಪ್ರೀತಿ ತುಂಬಿ ಬಿಡಿಸಿದ್ದೇನೆ ಎಂಬುದು ನನಗೆ ಗೊತ್ತು! ಸಾದ್ಯವಾದರೆ ನೀನು ಅದನ್ನು ಹುಡುಕಲು ಪ್ರಯತ್ನಿಸು ..ಅಂತು ಇಂತೂ ನಾ ನಿಂತಿದ್ದ ಸಾಲು ನಿನ್ನ ಸನಿಹಕ್ಕೆ ಬಂದೆ ಬಿಟ್ಟಿತು..ಮನದ ದುಗುಡವು ಲಾವರಸದಂತೆ ಚಿಮ್ಮಲೆ ಬೇಕಾದ ಕ್ಷಣ….. ಹತ್ತಿರವಾಗುತ್ತಿತ್ತು..ನಿನಗೆ ಹರಸೋಣ ಎಂದರೂ ಬಾಯಲ್ಲಿ ಮಾತುಗಳು ಹೊರಡುತ್ತಿಲ್ಲ..ತುಟಿಗಳೇನೋ ಆಡುತ್ತಿದ್ದವು ಆದರೆ ಸ್ವರವೆಲ್ಲೋ ಮಾಯವಾಗಿ ಹೋಗಿತ್ತು.. ನಿನ್ನ ಕೈಗೆ ನನ್ನ ಪ್ರೀತಿಯ ಉಡುಗೊರೆಯ ಇತ್ತು.. ಇಟ್ಟ ಮುಂದಿನ ಹೆಜ್ಜೆಯಲ್ಲೇ ಲಾವರಸವು(ನೋವು) ಭೋರ್ಗರೆಯತೊಡಗಿತು..ಕೈ ಕಾಲುಗಳೋ  ಇನ್ನು ನಡುಗುತಲಿದ್ದವು.. ನಿನ್ನ ಹಿಂದೆ ಸಹಾ ತಿರುಗಿ ನೋಡದೆ ಹೊರಟೆ..ಅಂತಹ ಭಯಂಕರ ಯಾತನೆ..ನನ್ನ ಗೆಳತಿ ಊಟದ ಕೊಠಡಿಗೆ ಕರೆಧೋಯ್ದಳು ಎಂದು ತಿಳಿದಿದ್ದು ಅವರು ಎಲೆ ಹಾಕಲು ಬಂದಾಗಲೇ..ನಾನು ಯಾವುದೋ ತೀಕ್ಷ್ನತೆಯಲ್ಲಿ ಅಂದಕಾರದಲ್ಲಿ ತಲ್ಲಿನಳಾಗಿ ಹೋಗಿದ್ದೆ..ನನಗೆ ಗೊತ್ತಿದ್ದೂ ಇಷ್ಟೇ ನನ್ನ ಗೆಳತಿ ಊಟ ಮಡಿ ನನ್ನ ಎಚ್ಹರಿಸಿದಾಗ ಎಲೆಯಲ್ಲಿ ಮೊದಲು ಏನಿತ್ತು ಹೋಗಿದ್ದರೋ ಅದೆಲ್ಲವೂ ಚಾಚು ತಪ್ಪದೆ ಅಲ್ಲೇ ಕುಳಿತು ನಗುತ್ತಿದ್ದವು.. ನನ್ನ ವ್ಯತೆ ಅದಕ್ಕೆ ಹೇಗೆ ತಿಳಿದೀತು ..ಅಲ್ಲವೆ ಚಿನ್ನು? ಕೈ ತೊಳೆದು..ತಾಮ್ಬೂಲವ ಹೊತ್ತು..ನೋಡಿದವರಿಗೆ ಕಿರು ನಗೆ ಕೊಟ್ಟು ಮದುವೆ ಮನೆ ಇಂದ ಹೊರಗೆ ನಡೆದಾಗ ಏನೋ ಅತ್ಯಮೂಲ್ಯವಾದದ್ದನ್ನು ಕಳೆದುಕೊಂಡ ಅನುಭವ..!!ಎಲ್ಲವೂ ಮರೆಯಾಗಿ ಮರುಭೂಮಿಯಾಗಿತ್ತು ಮನಸ್ಸು..ಎಲ್ಲೆಲ್ಲೋ ಉದುರಿದ ಎಲೆಗಳು ಹುಡುಕಿದರೂ ಕಾಣದ ನೆರಳು ನನ್ನ ಕಾಡತೊಡಗಿತ್ತು..ಬರಿ ಮೌನ ಮೌನ ಮೌನ ಅಷ್ಟೇ! ನಾನು ಮನೆಗೆ ಬಂದು ಬಚ್ಚಿಟ್ಟು ಬಂದಿದ್ದ ದುಗುದವನ್ನೆಲ್ಲ ತೆಗೆದು ನೋಡತೊಡಗಿದೆ..ಆಗ ಅರಳಿ ನಿಂತಿದ್ದ ನನ್ನ ಸ್ವಾತಿಮುತ್ತು(ಪ್ರೀತಿ) ಬಾಡತೊಡಗಿತ್ತು..ಚಿನ್ನ ನಿನ್ನು ಮರೆಯಲಾಗದಲ್ಲ….ಏನು ಮಾಡಲಿ ನಾನು..ಹೇಳು..

ಇಂತಿ ನಿನ್ನ..
ಕ್ಷಮಿಸು….ಇನ್ನೆಂದೂ ನಿನ್ನವಳಲ್ಲದ…
ಮುದುಡಿರುವ ಜೀವ

ನಿಜವಾದ ಪ್ರೀತಿ ಅಂದರೆ ಇದೇನಾ?

ಜನವರಿ 10, 2009

ಅನಿಸುತಿದೆ ಏಕಿಂದು ಮನಸೆಲ್ಲಾ ಖಾಲಿ ಖಾಲಿ ಎಂದು? ಅರಳಿದ ಹೂನಂತಿದ್ದುದು ಇಂದು ಬಾಡಿದೆ ಎಂದು! ಬರಡು ಭೂಮಿಯಲ್ಲಿ ನೀರಿಲ್ಲದೆ ಬಿದ್ದಿರುವ ಜೀವದಂತೆ ನಾ ಕಾಯುತ್ತಿದ್ದೇನೆ ನೀ ಬರುವ ಹಾದಿಯಲ್ಲೇ.. ಆದರಿಂದು ಅನಿಸುತಿದೆ ಮನಸೆಲ್ಲ ಖಾಲಿ ಖಾಲಿ ಎಂದು..!

ಅದೊಂದು ಗಳಿಗೆ ನಾ ನಿತ್ಯ ನಿನ್ನ ನೋಡುತ್ತಿದ್ದೆ .ನಿನ್ನ ಮುಂದೆ ನಿಂತು ನೋಡಲೂ ಹೆದರುತ್ತಿತ್ತು     ನನ್ನೀ ಮನಸ್ಸು . ನೀ ಎಂದು ನೋಡುವೆ ಎಂದು ಚಡಪಡಿಸುತ್ತಿತ್ತು ಈ ಮುದ್ದು ಮನಸ್ಸು. ದಿನಾಗಲೂ        ಎದುರು ಬಂದರೂ ನೀ ನನಗೆ ನೀಡುತ್ತಿದ್ದ  ಆ ಮುದ್ದಾದ ನಗು ನನ್ನನ್ನು ನಾಚುವಂತೆ ಮಾಡುತ್ತಿತ್ತು. ಆ   ದಿನಗಳಲ್ಲಿ ನಮ್ಮಿಬರಲ್ಲಿ ಇರಿಸು ಮುರಿಸು ಬಂದದ್ದೇ ಈ ಪ್ರೀತಿ ಬೆಳೆಯಲು ಕಾರಣವಾಯಿತು. ದಿನಗಳೆದಂತೆ  ನೀ ನನ್ನವನಾದೆ. ನಾ ನಿನ್ನ ಮನದ ಒಡತಿಯಾಗಲೇ ಎಂದಾಗ ನೀನಿತ್ತ  ಉತ್ತರ ನನಗೀಗಲೂ ನೆನಪಿದೆ..

ಸತ್ಯ ನಿಷ್ಠೆಯ ನಿನ್ನೀ ಬಾಳು ನಿಜವಾಗಲೂ ಸಾರ್ಥಕ. ನಿನಗಿದ್ದ ಜವಾಬ್ದಾರಿಗಳೋ ಇಂದು ನಮ್ಮಿಬ್ಬರನ್ನೂ ದೂರಕೆ ಸರಿಸುತಲಿದೆ.

ನೀ ನನ್ನ ಮೇಲಿಟ್ಟ ಪ್ರೀತಿ, ಅಭಿಮಾನ, ಗೌರವ ಗಂಗೆಯಷ್ಟೇ ಪವಿತ್ರವಾದುದು. ಎಷ್ಟೋ ಬಾರಿ ನಿನ್ನ ನಗು ನೋಡುತ್ತಲೇ ನಾ ಮೈಮರೆಯುತ್ತಿದ್ದೆ. ನಿನ್ನ ತೋಳ ತೆಕ್ಕೆಗಳಲ್ಲಿ ನಾ ಗುಬ್ಬಿಮರಿಯಂತೆ ಅವಿತುಕೊಂಡು ಇಡೀ ಪ್ರಪಂಚದ ಸುಖವನ್ನೆಲ್ಲಾ ಆ ಆಲಿಂಗನದಲ್ಲಿ ನಾ ಕಂಡೆ. ಈಗಲೂ ನೆನಪಿದೆ ಆ ನಿನ್ನ ಕಣ್ಣುಗಳು ನನ್ನ ಹೇಗೆ ಕೆಣಕುತ್ತಿತ್ತು ಎಂದು..ಅದು ಈಗಲೂ ಕೆಣಕುತ್ತಿದೆ ನನ್ನನು…..

ತಂಗಾಳಿಯಂತೆ ನಿನ್ನ ಪ್ರೇಮ. ಒಮ್ಮೆಗೇ ಹಾರಿ ಬಂದು ನನ್ನ ಮಡಿಲಲ್ಲಿ ಸೇರುತ್ತಿದ್ದ ನಿನ್ನ ಮೊಗ ನಿಜವಾಗಲೂ ಆ ಪೂರ್ಣ ಚಂದಿರನಂತೆ ಹೊಳೆಯುತ್ತಿತ್ತು. ರೋಮಾಂಚನ ಮಾಡುತ್ತಿತ್ತು. ನಿನ್ನ ನಡೆ -ನುಡಿ ಮುತ್ತಿನಂತದ್ದು. ನಿನ್ನ ಹೃದಯ ಅಮೃತಧಾರೆ.ಆ ದೇವರು ನಿನಗೆ ಕಷ್ಟ ನೀಡಿ ನಿನ್ನ ಮೊಗದಲ್ಲೆಲ್ಲೋ ಮೂಲೆಯಲ್ಲಿ ದುಃಖದ ಛಾಯೆಯ ಅಡಗಿಸಿದ್ದರು, ಅದನ್ನು ನಾ ಕಂಡೂ ಏನೂ ಮಾಡಲಾಗದೆ ಮೌನಿಯಾದೆ. ಇದೆ ನನ್ನ ಸದಾ ಹಿಂಸಿಸಿದ್ದು ಸಹಾ…

ನನ್ನ ಮಡಿಲಿಗೆ ತುಂಬಿ ಒಂದು ಹನಿ ಕಣ್ಣೀರು ಸಹ ನನ್ನ ಗಲ್ಲದ ಮೇಲೆ ಬೀಳದಂತೆ ನೋಡಿಕೊಂಡು, ಸಾಗರದಂತಹ ನಿನ್ನ ಪ್ರೀತಿಯ ನನ್ನ ಮೇಲೆ ಹರಿಸಿ, ಧೈರ್ಯ, ಆತ್ಮವಿಶ್ವಾಸಗಳನ್ನು ನನ್ನ ಎದೆಗೆ ಅಪ್ಪಳಿಸುವಂತೆ ಮಾಡಿ, ಜೀವನದ ಏರಿಳಿತಗಳ ಬಗ್ಗೆ ಅರಿಯುವಂತೆ ಹೇಳಿ, ನಿನ್ನ ಮುಗ್ಧತೆಯ ಒಲವಲ್ಲಿ
ನನ್ನ ಕರಗುವಂತೆ ಮಾಡಿದ ನನ್ನ ಸರ್ವಸ್ವವೂ ನೀನೆ ನೀನೇನೆ….!!!

ನಮ್ಮಿಬ್ಬರ ಒಲವು ಸಂಗಮವಾಗಿ ಅದು ಭೋರ್ಗರೆಯಲ್ಲೂ ತೊಡಗಿತು. ಬರೀ ನೀ ನನ್ನ ಒಳವಾಗದೆ ಬಾಳ ಸಖನಾದೆ,ಧೈರ್ಯ ತುಂಬುವ ಗೆಳೆಯನಾದೆ, ಸರಿ ದಾರೀಲಿ ನಡೆಸುವ ತಂದೆಯಾದೆ. ಆಕಾಶದೆತ್ತರದ ನಿನ್ನ ಅಮೂಲ್ಯವಾದ ಅನನ್ಯವಾದ ಪ್ರೀತಿ ನೀಡಿ ನನ್ನ ಅರ್ದಾಂಗಿಯಾದೆ…

ಆದರೇನು ಮಾಡುವುದು ಎಲ್ಲ ವಿಧಿಬರಹ..ಅನ್ದಾಗಿತ್ತು ನಮ್ಮ ಮನಸ್ಸು-ಹೃದಯಗಳ ಮದುವೆ ಈ ಹೃದಯದಂಗಳದಲಿ, ಆದರೆ ಇದನ್ನು ಸಮಾಜ ಒಪ್ಪಿತೇ? ಹಾಗಾಗಿ ಇಂದು ನಾ ನಿನಗಾಗಿಯೇ ಕಾಯುತಿರುವೆನು, ಆ ಮರಗಿಡಗಳ ನಡುವೆ ಹೂವನಿಡಿದು, ಪ್ರೀತಿಯ ಹೂಗೊಂಚಲ ಹೊತ್ತು, ಆದರೇನು ಮಾಡುವುದು ಇಂದು ನಿನ್ನ ಮದುವೆ!ನನ್ನೊಡನೆ ಅಲ್ಲ …ಬೇರೆಯ ಹೆಣ್ಣಿನೊಂದಿಗೆ ! ನೋಯುತ್ತಿದೆ ಮನಸ್ಸು ಕಾಯುತ್ತಿದೆ ಹೃದಯ ನೀ ಎಂದು ಮತ್ತೆ ಬಂದು ನನ್ನ ಹೃದಯದ ಬಾಗಿಲ ತಟ್ಟುವೆ ಎಂದು ….?

ನೀ ಏನಾದರೂ ಆ ದಾರೀಲಿ ಮತ್ತೆ ಬಂದರೆ ಮರೆಯದೆ ನೋಡು ನಾನಲ್ಲಿ ನಿನಗಾಗಿ ಬಿಟ್ಟು ಹೋಗಿರುತ್ತೇನೆ   ನನ್ನ ಹೃದಯವನ್ನು. ಸಿಕ್ಕರೆ ಮರೆಯದೆ ಅದನ್ನು ಎತ್ತಿಕೊಂಡು ಹೋಗು, ನನ್ನ ಹಾಲಿನಂತಹ ಪ್ರೀತಿಯ ತೊಯ್ದು ಎರಕವ ಹೊಯ್ದು ನೀನದನ್ನು ಸ್ವೀಕರಿಸು. ಈಗಲೂ ಒಂದು ಕತ್ತಲೆ  ಕೋಣೆಯಲ್ಲಿ  ಬೆಳಕನ್ನು ಬಾರದಂತೆ ಮಾಡಿ ಅಳುತ ಕುಳಿತಿರುವೆ ಒಂದು ಮೂಲೆಯಲ್ಲಿ…

ಮನೆಯಲ್ಲಿ ನನ್ನ ತಂದೆ ನನ್ನ ಮದುವೆಗೆಂದು ಸಿದ್ಧತೆ ನಡೆಸುತ್ತಿದ್ದಾರೆ. ಮದುವೆಯೂ ಆಯಿತು ನಾನು ಅಳುತ್ತ ಮನೆಯಿಂದ ಹೊರಗೆ ನಡೆದೆ..ಅವರು ತಿಳಿದರು ಅದು ತವರು ಮನೆಯನ್ನು ಬಿಟ್ಟು ಹೋಗುತ್ತಿರುವುದರಿಂದ ಬಂದ ಕಣ್ಣೀರು ಎಂದು,ಆದರೆ ಅವರಿಗೇನು ಗೊತ್ತು  ಆ ಕಣ್ಣೀರು ನಿನಗಾಗಿ ಬಂದದ್ದೆಂದು? ಮದುವೆಯಾದರೂ ಈಗೆಲ್ಲಿದೆ ಸುಖ? ಅದಿದ್ದಿದ್ದು ನಿನ್ನೊಡನೆ ಮಾತ್ರ..ಈಗಲೂ ಕಾಯುತಿರುವೆ ಆ ನಿನ್ನ ಮುದ್ದು ಮೊಗವ ನೋಡಿ ನಾಚಲು, ನಿನ್ನ ತೋಳ-ತೆಕ್ಕೆಗಳಲ್ಲಿ ಬಂಧಿಯಾಗಲು, ಹೇಳು ಗೆಳೆಯ ನೀನೆಂದು ಬರುವೆ  ನನ್ನ ಎದೆಯ  ಬಾಗಿಲ ತಟ್ಟಲು? ನನ್ನ ಹೃದಯದ ಒಡೆಯನ ಸಿಂಹಾಸನವನೆರಲು?

-ನಿನಗಾಗಿ ಕಾದಿರುವ ನಿನ್ನ ಸರ್ವಸ್ವ..