Archive for the ‘ಸವಿ ಸವಿ ನೆನಪುಗಳು’ Category

ಬೆಳಗಿನಿಂದ ಎಲ್ಲೆಡೆ ಮೌನ, ಮೌನ, ಬರೀ ಮೌನವಷ್ಟೇ!!

ಡಿಸೆಂಬರ್ 26, 2011

ಈವತ್ತು ಮುಂಜಾನೆ 5 ಗಂಟೆಗೆ ಸರಿಯಾಗಿ ಅಲಾರಂ ಹೊಡೆದುಕೊಳ್ಳುವುದಕ್ಕೆ ಶುರು ಮಾಡಿತ್ತು, ರಾತ್ರಿ ನಿನ್ನೊಡನೆ ಜಗಳವಾಡಿ ಲೇಟ್ ಆಗಿ ಮಲಗಿದ್ದರಿಂದ ಈ ಚುಮು-ಚುಮು ಚಳಿಗೆ ಇನ್ನೊದಂಷ್ಟು ಹೊತ್ತು ಕಂಬಳಿಯೊಳಗೆ ಬೆಚ್ಚಗೆ ಮಲಗುವ ಆಸೆಯಾಗಿ, ಅದರೊಳಗೆ ನನ್ನನ್ನು ನಾ ಅಡಗಿಸಿಕೊಂಡು ಮಲಗಿದೆ. ಆದರೂ ಕೇಳಬೇಕಲ್ವಾ ಆ ಅಲಾರಂ ಮತ್ತೊಮ್ಮೆ ಎದ್ದೇಳಲೇಬೇಕೆಂದು ಹಠ ಹಿಡಿದು ಕುಳಿತಿತ್ತು.. [:(]. ಕಷ್ಟ ಪಟ್ಟು ನನ್ನ ಕಣ್ಗಳು ಅರಳಿ ದೇವರಿಗೆ ನಮಸ್ಕರಿಸಿ, ನೆನ್ನೆಯಾದ ವಿರಸವ ತಾಳಲಾರದೆ ಎಂದಿನಂತೆಯೇ ನಿನಗೆ “ಸಂಜೂ ಗುಡ್ ಮಾರ್ನಿಂಗ್” ಎಂದು ಮೆಸೇಜ್ ಮಾಡಿದೆ. ಇಂದು ಏಕೋ ಗೊತ್ತಿಲ್ಲ ಮುಂಜಾನೆಯೇ ಎದ್ದು ಟೆರೇಸ್ ಮೇಲೆ ಹೋಗಿ ಡಿಸೆಂಬರ್ ನ ಚಳಿಯ ಸೊಬಗನು ಅನುಭವಿಸಲು ಆಸೆಯಾಗಿ ಹೊರಬಂದರೆ ದಟ್ಟವಾದ ಮಂಜು ಎಲ್ಲೆಲ್ಲೂ ಹಬ್ಬಿತ್ತು. ಆ ಸೂರ್ಯ ಕೂಡ ಈ ಚಳಿಯ ಸಹಿಸಲಾರದೆ ಮಂಜಿನ ಹೊದಿಕೆಯೊಳಗೆ ಅಡಗಿ ಕುಳಿತಿದ್ದನ್ನು ಕಂಡು ನನ್ನಲಿ ನಾನೇ ನಕ್ಕು, ಮತ್ತೆ ಮೊಬ್ಯೆಲ್ ಬಳಿ ಕಣ್ಹಾಯಿಸಿದೆ, ಸದಾ ಟಕ್ ಅಂತ ಪ್ರತ್ಯುತ್ತರವ ಕೊಡುವ ನೀನು ಮೌನದರಮನೆಯಲ್ಲಿ ಬಂಧಿಯಾಗಿ ಕುಳಿತಿದ್ದೆ. ಇಂತಹ ಚಳಿಯನ್ನು ಅನುಭವಿಸಲಾರದೆಯೇ ಮೈ ಬಿಸಿಯಾಗಿ ಮನವು ನಿನ್ನ ನೆನಪುಗಳ ಅಂಗಡಿಗೆ ಧಾವಿಸಿತು. . ಎಷ್ಟೇ ಪ್ರಯತ್ನಿಸಿದರೂ ಈ ಅಂಗಡಿಯಿಂದ ಹೊರಬರಲಾರದೆಯೇ ಮತ್ತೊಂದು ಮೆಸೇಜ್ ಕಳುಹಿಸಿ ಶಬರಿಯಂತೆ ನಿನಗಾಗಿ ನಾ ಕಾಯುತ ಕುಳಿತೆ. ನಿನ್ನ ಮೌನ ನನ್ನ ಹೆದರಿಕೆಗೆ ದಾರಿ ಮಾಡಿಕೊಟ್ಟಿತ್ತು. ಹೋಗಲಿ ಎಂದು ಕರೆ ಮಾಡಲು ಹೊರಟರೆ, ಸಾವಿರಾರು ಪ್ರಶ್ನೆಗಳು ಕ್ಷಣಾರ್ಧದಲ್ಲಿ ನನ್ನ ಕಣ್ಣೆದುರಿಗೆ ಬಂದು ಯೋಚನೆಗಳ ಸುಳಿಯಲ್ಲಿ ಸಿಕ್ಕಿ ಮನವು ಒದ್ದಾಡತೊಡಗಿತ್ತು….

ಸಂಜು..ನೆನ್ನೆ ನಾ ನಿನ್ನೊಡನೆ ಜಗಳ ಆಡಿದ್ದು, ಈ ನಿನ್ನ ಮೌನಕ್ಕೆ ಕಾರಣವೇ? ದಿನ ಬೆಳಗ್ಗೆಯಾದರೆ ಈ ಸಮಯಕ್ಕೆ 3-4 ಬಾರಿ ಕರೆ ಮಾಡುತ್ತಿದ್ದೆ, ಆದರಿಂದು ನಿನಗೇನಾಗಿದೆ? ನೆನ್ನೆ ಆಗಿದುದಕ್ಕೆಲ್ಲಾ ಕಾರಣವೇನೆಂದರೆ, ನೀ ಮೊದಲಿನಂತೆ ಈಗ ನನ್ನ ಮೇಲೆ ಪ್ರೀತಿ ತೋರಿಸುತ್ತಿಲ್ಲ, ಗಂಟೆ-ಗಂಟೆಗೂ ಕರೆ ಮಾಡಿ ತಿಂಡಿ ಆಯ್ತಾ? ಊಟ ಆಯ್ತಾ? ಏನು ಮಾಡುತ್ತಿದ್ದೀಯಾ? ಐ ಲವ್ ಯೂ!! ಐ ಮಿಸ್ಸ್ ಯೂ!! … ಹೀಗೆಲ್ಲಾ ಹೇಳಿ ನನ್ನ ಹೃದಯ ಸಾಮ್ರಾಜ್ಯಕ್ಕೆ ಧಕ್ಕೆ ಇಟ್ಟೆ. ಬೇಡವೆಂದರೂ ಕೇಳದೆ ಪದೇ-ಪದೇ ನನ್ನ ನೋಡುವುದಾಗಿ ಮನೆಯ ಮುಂದೆ ಬಂದು ನನಗಿಷ್ಟವಾದ ಮಲ್ಲಿಗೆಯ ಹೂ ತಂದು ನಿಲ್ಲುತ್ತಿದ್ದೆ, ಜೊತೆಗೆ ಶುಭಾಶಯ ಪತ್ರ!! ಹೀಗೆ ಹತ್ತಾರು-ಹಲವಾರು ರೀತಿಯಲ್ಲಿ ನಿನ್ನ ಪ್ರೀತಿಯ ವ್ಯಕ್ತ ಪಡಿಸಿದೆ. ನಿನ್ನಿಂದ ಏನೂ ಬಯಸದ ನನಗೆ ನನ್ನ ಇಷ್ಟ-ಕಷ್ಟಗಳ ಅರಿತು ನನ್ನ ಬಾಳಿಗೆ ಬೆಳಕ ತಂದೆ. ಬೇಡವೆಂದರೂ ನಾ ಕುಡಿದಿಟ್ಟ ಕಾಫೀಯ ಕೊನೆಯ ಗುಟುಕಿನ ರುಚಿ ನೋಡಲು ಮುಂದಾಗುತ್ತಿದ್ದೆ. ಸದಾ ನನ್ನ ಮನ ಮೆಚ್ಚಿಸುವ ಸಾಹಸಕ್ಕೆ ಕೈ ಹಾಕಿ, ನಿನ್ನ ಅಂತರಂಗದ ಪುಟಗಳ ನನ್ಮುಂದೆ ತೆರೆದಿಡುತ್ತಿದ್ದೆ. ನಿನ್ನ ಮುದ್ದು-ಮುದ್ದಾದ ಮಾತುಗಳು, ನನ್ನನು ಗೌರವಿಸುವ ರೀತಿ, ನಿನ್ನ ನಿಶ್ಕಲ್ಮಶವಾದ ಪ್ರೀತಿಗೆ ಮಣಿದು ಆ ದಿನ ಆ ಕೃಷ್ಟನ ಸನ್ನಿಧಿಯಲ್ಲಿ ನಿನ್ನ ಪ್ರೀತಿಯ ಸ್ವೀಕರಿಸಿದೆ, ನಿದ್ರೆ ಬಾರದಿದ್ದಾಗ ಜೋಗುಳ ಹಾಡಲು ಬಾರದಿದ್ದರೂ , ಹಾಡಿ ಮಲಗಿಸುವ ಪರಿ, ಮಗುವಂತೆ ನನ್ನ ಬಗ್ಗೆ ಕಾಳಜಿ ವಹಿಸಿ ನೋಡಿಕೊಳ್ಳುವ ಮನೋಭಾವ ಇವೆಲ್ಲದಕ್ಕೂ ಸೋತು ನಿನ್ನ ಪ್ರೀತಿಯ ಮಡಿಲಲ್ಲಿ ನಾ ಬೆಚ್ಚಗೆ ಮಲಗಿದ್ದೆ. ಆದರಿಂದು ನೀ ಏಕೆ ನಮ್ಮ ಸುಂದರ ಪ್ರಪಂಚದಿಂದ ಒಂದೊಂದೇ ಹೆಜ್ಜೆಗಳ ಹಿಂದೆಗೆಯುತ್ತಿದ್ದೀಯಾ? ನಾ ಅಂತಹ ತಪ್ಪೇನನ್ನು ಮಾಡಿದೆ ಸಂಜೂ??

ನಿನ್ನ ಪ್ರೀತಿ ಮಾತುಗಳು, ನಾ ಸೋತಾಗ ನನ್ನಲ್ಲಿ ತುಂಬಿದ ಧೈರ್ಯ, ಮುಂದಿನ ಜೀವನ ಸಾಗಿಸಲು ನೀಡಿದ ಪ್ರೋತ್ಸಾಹ ಎಲ್ಲವೂ ನನ್ನ ಕಣ್ಮುಂದೆ ಬಂದು ಹಿಂಸಿಸುತಿವೆ. ಆ ದಿನ ತೋರಿದ ಕಾಳಜಿ, ಪ್ರೀತಿ, ವಾತ್ಸಲ್ಯ, ಮಮತೆ ಎಲ್ಲವೂ ಈಗ ಶೂನ್ಯವಾಗಿ ನನ್ನ ಕಾಡುತಲಿದೆ. ನಿಜ ನಾ ಎಂದೂ ಖುಷಿ ಕಾಣದಷ್ಟು ನೀ ನನಗೆ ಖುಷಿಯ ನೀಡಿದ್ದೀಯ? ಸಂತೋಷ  ಎಂದರೇನೆಂಬುದನ್ನು ಅದರ ಶಿಖರವನೇರಿಸಿ ತೋರಿಸಿದ್ದೀಯ. ಇದಕ್ಕೆ ನಾ ನಿನಗೆ ಚಿರ ಋಣಿ. ನಿನ್ನ ಹಾಲ್ಜೇನಿನಂತಹ ಪ್ರೀತಿಯ ಕಡಲಲ್ಲಿ, ಬಾಳೆಂಬ ತೆಪ್ಪದ ಮೇಲೆ ಕುಳಿತು, ನೀ ಕರೆದ ಕಡೆ ನಾ ಸಾಗುತಲಿದ್ದೆ.. ನಾ ನಕ್ಕರೆ ನಿನಗದೇ ಉಲ್ಲಾಸ, ನಾ ಅತ್ತಾಗ ನನ್ನ ಧ್ವನಿ ಕೇಳದೆಯೇ ನನ್ನ ನೋವನ್ನು ಅರಿತು ಸಮಾಧಾನಿಸುತ್ತಿದ್ದ ನಿನ್ನ ಮನಸ್ಸು ಇಂದು ನಾ ಬಿಕ್ಕಿ-ಬಿಕ್ಕಿ ಅಳುತ್ತಿದ್ದರೂ ಕೇಳಿಸದೆ ಸುಮ್ಮನೆ ಕುಳಿತಿರುವೆ ಏಕೆ? ನಿನ್ನ ನೆನೆಪಿನಲೆಗಳು ಬಂದು-ಬಂದು ನನ್ನೆಡೆಗೆ ಅಪ್ಪಳಿಸುತಲಿವೆ. ಆ ದಿನ ಸಂತೋಷದ ಶಿಖರದಲ್ಲಿ ಕುಳಿತಿದ್ದ ನಾನು ಇಂದು ಆ ಶಿಖರದ ಹೊಸ್ತಿಲ ಬಳಿ ನಿನ್ನ ಪ್ರೀತಿಯ ಭಿಕ್ಷೆಯ ಬೇಡುತಲಿರುವೆ… ಹೇಳು ಮತ್ತೆ ನನ್ನ ಬಾಳಿಗೆ ಆ ಸುಂದರ ಕ್ಷಣಗಳ ತರುವೆಯಾ? ನಿನ್ನ ಪ್ರೀತಿ ಪಲ್ಲಕ್ಕಿಯಲಿ ನನ್ನ ಕುಳ್ಳಿರಿಸಿಕೊಂಡು ಹೋಗುವೆಯಾ? ನಿನ್ನೊಡನೆ ಮೂರು ದಿನ ಬಾಳಿ ತೃಪ್ತಿ ಪಡಲು ಅವಕಾಶವ ಕಲ್ಪಿಸಿಕೊಡುವೆಯಾ? ನಿನ್ನ ಮಡಿಲಲ್ಲಿ ಬೆಚ್ಚಗೆ ಮಲಗಲು ಸಮ್ಮತಿ ನೀಡುವೆಯಾ? ಐ ಮಿಸ್ಸ್ ಯೂ ಸಂಜೂ, ತುಂಬಾನೆ …

ಸಂಜೂ ನನ್ನ ಮನದಲ್ಲಿ ಇಷ್ಟೆಲ್ಲಾ ಪ್ರಶ್ನೆಗಳ ಸುರಿಮಳೆ ಹಾದು ಹೋದರೂ ಇನ್ನೂ ನಿನ್ನ ಮೊಬೈಲ್ ರಿಂಗ್-ರಿಂಗ್ ಆಗುತಲಿದೆ. ಎಲ್ಲಿ ಕಳೆದುಹೋಗಿರುವೆ ಸಂಜೂ…ಈ ಮೌನದರಮನೆಯ ಹೇಗೆ ಹೊಕ್ಕಿ ಬರಲಿ ನಾ ನಿನ್ನೆಡೆಗೆ? ಈ ದಿನ ನಿನ್ನ ಗೆಳತಿ ನಿನ್ನ ಪ್ರೀತಿಗೆ ಅಂಗಲಾಚಿ ಪರಿತಪಿಸುತಲಿದ್ದರೂ ನಿನಗೆ ಕೇಳಲಾದೀತೇ? ಒಮ್ಮೆಯೂ ಬಿಕ್ಕಿ ಅಳದ ನಾನು ಇಂದು ನನ್ನ ರೂಮಿನ ಕೋಣೆಯಲಿ ಮೂಲೆಯೊಳಗೆ ಕುಳಿತು, ಕೊರಗುತಲಿರುವೆ.. ನಿನಗಾಗಿ… ನಿನಗಾಗಿ ಮಾತ್ರ… ದಯವಿಟ್ಟು ಕರೆ ಮಾಡು. ನನ್ನ ತಪ್ಪುಗಳ ಕ್ಷಮಿಸಿ ನನ್ನ ಬಳಿ ಬಾ .. ಪ್ಲೀಜ್… ನಿನ್ನ ನಿರೀಕ್ಷೆಯಲ್ಲಿ ಕಾಯ್ತಾಯಿದ್ದೇನೆ ಸಂಜೂ… ಮತ್ತೊಮ್ಮೆ ಬಾ……………….!!!!!!

ನೆನಪು

ಏಪ್ರಿಲ್ 24, 2011

ಏಕಿಂದು ನಿನ್ನ ನೆನಪುಗಳು ನನ್ನ ಮನದ ದಡಕೆ

ರಾಶಿ-ರಾಶಿಯಾಗಿ ಬಂದು ಸಾಗುತಿವೆ …?

ಮರೆತಿಹೆನು ಎಂದುಕೊಂಡದ್ದೆಲ್ಲಾ

ಸಾಗರದಂತ್ಯದಲಿ ಚುಕ್ಕಿಗಳಂತೆ ಹೊಳೆಯುತಿವೆ…!

ಆ ಚಂದಿರನ ಮೊಗದಲ್ಲಿ

ನೀ ಏಕೆ ಕಂಡಿರುವೆ …?

ಇಷ್ಟು ದಿನಗಳ ಬಳಿಕ ಎಲ್ಲಿಂದ ಬಂದಿವೆ

ಈ ನೆನಪುಗಳ ಅಬ್ಬರ ನನ್ನ ಮನದ ದಡಕೆ ….?

**** ಕೆಲವು ತಿಂಗಳುಗಳಿಂದ ಸ್ವಾತಿಮುತ್ತಿಗೆ ಬೀಗ ಹಾಕಿ ಹೋಗಿದುದಕ್ಕಾಗಿ ಎಲ್ಲಾ ಓದುಗರಿಗೂ ಮೊದಲು ಕ್ಷಮೆಯಾಚಿಸುತ್ತಾ , ಮತ್ತೆ ಸ್ವಾತಿಮುತ್ತಿನಂಗಳಕೆ ನೆನಪನ್ನು ಮೊದಲಿಗೆ ಹಾಸಿ… ಮುಂದೆ ಸಾಗೋಣ ಎಂದು ತೀರ್ಮಾನಿಸಿ ಈ ಮೇಲಿನ ಸಾಲುಗಳನ್ನು ಬರೆದಿದ್ದೇನೆ…  ಎಲ್ಲರೂ ಹಿಂದಿನಂತೆಯೇ ಈಗಲೂ ನನ್ನ ಪ್ರೋತ್ಸಾಹಿಸಿ ಸ್ವಾತಿಮುತ್ತನ್ನು ಮೆಚ್ಚುತ್ತೀರಿ ಎಂದು ನಂಬಿದ್ದೇನೆ….. ಧನ್ಯವಾದಗಳು.

-ಇಂಚರ

ನನ್ನ ಮೊದಲ ಕೆಲಸದ ಬಗ್ಗೆ ಒಂದಿಷ್ಟು ತುಂತುರು ಹನಿಗಳು

ಜುಲೈ 9, 2009

writing - pen

ಅಂದು ಏಪ್ರಿಲ್ ೧ನೇ ತಾರೀಖು, ನಾ ಮೊದಲ ಬಾರಿಗೆ ಕೆಲಸ ಮಾಡಲು ಕೆಲಸಕ್ಕೆ ಸೇರಿದ ದಿನ… ನನ್ನ ಕಾಲ ಮೇಲೆ ನಿಲ್ಲಲು ಅವಕಾಶ ಸಿಕ್ಕ ಮೊದಲ ದಿನ… ನಾನು ಒಂದು ಕಂಪ್ಯೂಟರ್ ಇನ್ಸ್ಟಿಟ್ಯೂಟ್ ನಲ್ಲಿ faculty ಆಗಿ ಕೆಲಸಕ್ಕೆ ಸೇರಿದೆ…ಹೊಸ ದಿನ, ಹೊಸ ಜಾಗ, ಮನಸ್ಲಲ್ಲಿ ಕಳವಳ.. ಆ ಸುತ್ತಮುತ್ತಲಿನ ಪರಿಸರ ..ಜನ ಹೇಗೆ ಇರುತ್ತಾರೋ, ಎಂದೆಲ್ಲಾ ನೂರೆಂಟು ಯೋಚನೆಗಳು ಕಾಡತೊಡಗಿತ್ತು… ಆದರೂ ಸಂತೋಷದಿಂದಲೇ ಬೆಳಿಗ್ಗೆ ಬೇಗನೆ ಎದ್ದು ದೇವರಿಗೆ ಕೈ ಮುಗಿದು ತಿಂಡಿ ತಿಂದು ಇನ್ಸ್ಟಿಟ್ಯೂಟ್ ಗೆ ತಂದೆಯಿಂದ drop ತೆಗೆದುಕೊಂಡೆ.. ಹೋದ ತಕ್ಷಣ ಒಬ್ಬ ಸರ್ ಅವರ ಪರಿಚಯ ಮಾಡಿಕೊಂಡು, ಅಲ್ಲಿನ ವಾರಸುದಾರರಿಗೆ ಕರೆ ಮಾಡಿ ನಾನು ಕೆಲಸಕ್ಕೆ ಬಂದಿರುವುದಾಗಿ ತಿಳಿಸಿದರು,ಆ ಸರ್ ಸಹಾ ನನಗೆ ಹಾರ್ಧಿಕವಾದ ಸ್ವಾಗತ ಕೋರಿ ಶುಭ ಹಾರೈಸಿದರು. ಮೊದಲಿಗೆ ಅಲ್ಲಿದ್ದ ನನ್ನ ಜೊತೆಗೆ ಕೆಲಸ ಮಾಡುವ ಇತರೆ facultyಯವರ ಪರಿಚಯ ಮಾಡಿಕೊಂಡೆ. ಅಂದು ಅವರಲ್ಲಿ ಒಬ್ಬರ ಹುಟ್ಟಿದಹಬ್ಬವಿದ್ದುದರಿಂದ ಅವರು ಎಲ್ಲರಿಗೂ ಸಿಹಿ ಹಂಚಿದರು..ಅಲ್ಲಿದ್ದ faculty ನನಗೆ ತುಂಬಾ ಸಹಕರಿಸಿ, ಎಲ್ಲಾ ಕೆಲಸಗಳ ಬಗ್ಗೆ ತಿಳಿ ಹೇಳಿದರು. ನಂತರ ಎಲ್ಲಾ ವಿದ್ಯಾರ್ಥಿಗಳ ಪರಿಚಯ ಮಾಡಿಕೊಳ್ಳುತ್ತಾ ಬಂದೆ.. ಹಾಗೂ ಮೊದಲ ಬಾರಿಗೆ ಕ್ಲಾಸ್ ತೆಗೆದುಕೊಂಡೆ.. ಅಂದು ತುಂಬಾ ಕಷ್ಟವಾದ ವಿಷಯವನ್ನೇ ಹೇಳಿಕೊಡಲು ನಮ್ಮ ಸರ್ ತಿಳಿಸಿದರು.ನಾನು ಧೈ ರ್ಯವಾಗಿ ಕ್ಲಾಸ್ ಮಾಡಿ ಮುಗಿಸಿದೆ.. ಬಂದು ಹೋಗುತ್ತಿದ್ದ ನನ್ನ ವಿದ್ಯಾರ್ಥಿಗಳು mam, ಮೇಡಮ್, ಅಕ್ಕ ಅಂತೆಲ್ಲಾ ವಿಧ-ವಿಧವಾಗಿ ಕರೆಯುತ್ತಿದ್ದರು.. ಅವರೆಲ್ಲರೂ ಹಾಗೆ ಕರೆಯುತ್ತಿದ್ದಾಗ ನನ್ನ ಸ್ಥಾನ ಅಲ್ಲಿ ಏನು ಎಂಬುದರ ಅರಿವು ಪದೇ-ಪದೇ ನನಗೆ ಆಗುತ್ತಿತ್ತು. ಕೆಲವರು ತೀರಾ ವಿನಮ್ರ ಭಾವದಿಂದ ಗುಡ್ ಮಾರ್ನಿಂಗ್ ಮೇಡಮ್ ಅಂದಾಗ ನನಗೆ ಒಂದು ತರಹ ಖುಷಿಯಾಗುತ್ತಿತ್ತು. ನನಗೆ ಎಷ್ಟು ಬೆಲೆಯಿದೆ ಇಲ್ಲಿ ಎಂದು ಅಂದುಕೊಳ್ಳುತ್ತಿದ್ದೆ…. (ಏಕೆಂದರೆ ಆಗ ತಾನೆ ಕಾಲೇಜು ಬಿಟ್ಟು ಹೊರಬಂದ ಸಮಯ.. ನಾನು ಬೇರೆಯವರಿಗೆ ಆತರಹದ ಗೌರವ ನೀಡುತ್ತಿದೆ,…ಆದರೆ ನನಗೆ ಆತರಹದ ಗೌರವ ಸಿಕ್ಕಿದ್ದು ಒಂದು ತರಹ ಹೊಸದಾಗಿ ಇತ್ತು..:) ).. “ಬರುವವರು ಬರುತ್ತಿದ್ದರು..ಹೋಗುವವರು ಹೋಗುತ್ತಿದ್ದರು..ಆದರೆ ನಾವು ಮಾತ್ರ ನಿಶ್ಚಲವಾಗಿದ್ದೆವು..” ನಮ್ಮ ಜೀವನವೂ ಹಾಗೆ ಅಲ್ಲವೇ??? ಮಧ್ಯಾಹ್ನ  ಊಟಕ್ಕೆ ಮನೆಗೆ ಬಂದು ಊಟ ಮುಗಿಸಿ ಮತ್ತೆ ಇನ್ಸ್ಟಿಟ್ಯೂಟ್ಗೆ  ಬಂದೆ…ಎಲ್ಲರೂ ತುಂಬಾ ಆತ್ಮೀಯತೆಯಿಂದ ಮಾತನಾಡಿಸಿದರು.. ನಮ್ಮ ಹುಟ್ಟಿದಹಬ್ಬದ ಹುಡುಗ(ಸರ್)…. part-T (party) ಕೊಡಿಸಿದರು.. ಎಷ್ಟೋ ಜನ ನನಗೆ ಅಲ್ಲಿ ಕೊಡುವ ಸಂಭಾವನೆ ಕಡಿಮೆಯೆಂದು, ಅಲ್ಲಿ ಕೆಲಸ ಮಾಡಬಾರದೆಂದು ಹೇಳಿದರು..ಆದರೆ ನನಗೆ ಮುಖ್ಯವಾಗಿ ಬೇಕಾಗಿದ್ದುದು ಕೆಲಸ, ಹಾಗು ಮನೆಯಲ್ಲಿ ಅನಾವಶ್ಯಕವಾಗಿ ಕಾಲಹರಣ ಮಾಡುವುದನ್ನು ತಡೆಯಲೇಬೇಕಿತ್ತು.. ಜೊತೆಗೆನನ್ನಲ್ಲಿರುವ ವಿದ್ಯೆಯನ್ನು ದಾನ ಮಾಡುವುದು ಶ್ರೇಷ್ಟವಾದ ಕೆಲಸ ಎಂದು ನನಗೆ ಕೊಡುವ ಸಂಭಾವನೆಗೆ ಬೆಲೆ ಕೊಡದೆಯೇ ಶ್ರದ್ದೆಯಿಟ್ಟು ಕೆಲಸ ಮಾಡಿದೆ. ಸಂಜೆ ಮನೆಗೆ ಬಂದಾಗ ಏನೋ ಉತ್ಸಾಹ ಉಲ್ಲಾಸವಿತ್ತು. ಮನೆಯಲ್ಲಿ ಎಲ್ಲರಿಗು ಅಂದಿನ ದಿನದ ಅನುಭವದ ಬಗ್ಗೆ ಹೇಳಿದೆ.ಮಾರನೆಯ ದಿನ ಕೆಲಸಕ್ಕೆ ಹೋಗಲು ಮನ ತುಡಿಯುತ್ತಿತ್ತು. ಒಂದೇ ದಿನಕ್ಕೆ ಆ ಪರಿಸರಕ್ಕೆ ಹೊಂದಿಕೊಂಡು ಬಿಟ್ಟಿದ್ದೆ. ಭವಿಷ್ಯದ ಬಗ್ಗ್ಗೆ ಆಸಕ್ತಿ ಮೂಡಿತ್ತು, ಆಸೆ ಹುಟ್ಟಿತ್ತು. ಆ ಸುಂದರ ಪ್ರಪಂಚದಲ್ಲಿ ಮಿನುಗಲು ನನಗೊಂದು ಅವಕಾಶ ಸಿಕ್ಕಿತ್ತು. ಇಂದಿಗೂ  ನನಗೆ ಇದೆ ಭಾವನೆಗಳಿವೆ..ನಾಳೆ ಮತ್ತೆ ಕೆಲಸಕ್ಕೆ ಹೋಗಲು ಕಾಯುತಿರುವೆ..ಇಂದಿಗೂ ಕಾಲೆಳೆಯುವವರಿದ್ದಾರೆ..ಆದರೆ ನಮ್ಮ ಇತಿ-ಮಿತಿಗಳಲ್ಲಿ ನಾವಿದ್ದು, ಶ್ರಮಪಟ್ಟು ನಮ್ಮ ಕೆಲಸಮಾಡಿಕೊಂಡು, ಇತರರೊಡನೆ ಸ್ನೇಹ ಭಾವದಿಂದ ಇದ್ದುಬಿಟ್ಟರೆ ಯಾರ ಮಾತು ಸಹಾ ನಮ್ಮನ್ನು ಕೊರೆಯಲಾರದು..

ಮತ್ತೆ ಇನ್ನೊದು ವಿಷಯ ಹೇಳುವುದು ಮರೆತೆ.. ನನಗೆ ನನ್ನ ವಿದ್ಯಾರ್ಥಿಯೊಬ್ಬಳು ಒಮ್ಮೆ ಅವರ ಮನೆಯಲ್ಲಿ ಅರಳಿದ್ದ ಗುಲಾಬಿ ಹೂವನ್ನು (ಪಿಂಕ್) ತಂದು ಕೊಟ್ಟಳು.. ಆಗ ನಿಜವಾಗಲೂ ನನಗೆ ನನ್ನ ಶಾಲೆಯ ನೆನಪಾಯಿತು..ಯಾಕೆಂದರೆ ನಾನು ಶಾಲೆಗೆ ಹೋಗುತ್ತಿದ್ದ ಸಮಯದಲ್ಲಿ ಮಾರ್ಕೆಟಿಗೆ ಬೇಕಂತಲೇ ಹೋಗಿ ಮೇಡಂಗೆ ಹೂ ತೆಗೆದುಕೊಂಡು ಹೋಗುತ್ತಿದ್ದೆ.. ಅದೇ ನೆನಪಿನ ಛಾಯೆ ಅಂದು ನನ್ನಲ್ಲಿ ಮೂಡಿತು..
ಹಾಗು ಕೆಲವರು ನನ್ನ “ನಗು”ವಿನ ಬಗ್ಗೆ ಕಾಮೆಂಟ್ ಮಾಡಿದರು..”ಮೇಡಂ ನೀವು ಸದಾ ನಗುತ್ತಲೇ ಸ್ವಾಗತ ಕೋರುತ್ತೀರಿ ಸದಾ ಹೀಗೆಯೇ ನಗುತ್ತಿರಿ …ನಿಮ್ಮ ನಗು ಚಂದ ” ಎಂದಿದ್ದರು..

ಒಬ್ಬ ವಿದ್ಯಾರ್ಥಿ ಅವರ ಕೋರ್ಸ್ ಮುಗಿಸಿ ಹೋದರೂ ಇನ್ನೂ ನನ್ನ ಬಗ್ಗೆ ವಿಚಾರಿಸಿಕೊಳ್ಳುತ್ತಿರುತ್ತಾರಂತೆ..
ಹೀಗೆ ಏನೆಲ್ಲಾ ಸಣ್ಣ-ಪುಟ್ಟ ವಿಷಯಗಳು ತುಂಬಾನೇ ಖುಷಿ ನೀಡುತ್ತದೆ.. ಏನೆಲ್ಲಾ ಅನುಭವಗಳಾಗುತ್ತದೆ.. ಕಹಿಗಿಂತಲೂ ಸಿಹಿಯೇ ಹೆಚ್ಚು ..ನಮಗೆ ನಾವು ಕೆಲಸ ಮಾಡುವ ಪರಿಸರ ಚೆನ್ನಾಗಿದ್ದಾರೆ ಎಷ್ಟು ನೆಮ್ಮದಿ ಸಿಗುತ್ತದೆಂದು ಅರಿವಾಯಿತು..ಅನುಭವವೂ ಆಯಿತು… ಎಲ್ಲಾ ಅನುಭವಗಳ ನಡುವೆ ಹೋಗುವ ಬರುವ ಜನರೊಡನೆ ಮಿಂದು ಅರಿತು..ಕೆಲವು ಸಿಹಿ ನೆನಪುಗಳ ನಿಮ್ಮೆಲ್ಲರ ಬಳಿ ಹಂಚಿಕೊಂಡೆ….ಸ್ವೀಟ್ ಆಗಿದೆ ತಾನೇ??? ಏನಂತಿರಾ???

ಸ್ನೇಹವೆಂಬುದು ಬೆಂಗಾಡಿನಲ್ಲಿ ಬೀಸುವ ತಂಗಾಳಿ ಇದ್ದಂತೆ……

ಮಾರ್ಚ್ 21, 2009

ಜೀವದ ಗೆಳತಿಯ ನೆನಪುಗಳು-೧

ಒಮ್ಮೆ ಬಾಳೆಂಬ ರಥದಲ್ಲಿ ಸಾಗುತ್ತಿರಬೇಕಾದಾಗ ಸುಂದರ ಹೂದೋಟವ ಕಂಡೆ, ಆ ಸುಂದರವಾದ ಹೂದೋಟವ ನೋಡಿ, ಇನ್ನು ನೋಡುವ ಆಸೆಯಾದರೂ ಮನಸ್ಸಲ್ಲಿದ್ದ ಹೊಟ್ಟೆಕಿಚ್ಚು ನನ್ನ ಕಣ್ಣುಗಳ ಅತ್ತ ನೋಡದಂತೆ ಮಾಡಿತು. ದಿನಗಳು ಉರುಳಿದವು. ಆದರೂ ಆ ಹೂದೋಟವೇ ಒಂದು ದಿನ ನನ್ನರಸಿ ಬರುತ್ತೆ ಎಂಬ ಊಹೇ ಸಹಾ ನನಗಿರಲಿಲ್ಲ. ..ಆದ್ರೆ ಆದದ್ದು ಇದೆ! ಆ ಹೂದೋಟದ ಬಗ್ಗೆ ನಂಗೆ ಹೆಮ್ಮೆ ಇತ್ತು, ಆಸೆ ಇತ್ತು, ಜೊತೆಗೆ ಈ ಹೊಟ್ಟೆಕಿಚ್ಚಿನ ಮೊಟ್ಟೆ ಕೋಳಿ ಬೇರೆ ನನ್ನ ಮನದಲ್ಲಿ ಕುಣಿದಾಡುತಿತ್ತು. ಆದರೆ ಆ ಹೂದೋಟವೇ ನನ್ನ ಹುಡುಕಿ ಬಂದಾಗ ನಾನು ಅದಕೆ ತಲೆಬಾಗಲೇ ಬೇಕಾಯಿತು. ಈ ಹೂದೋಟ ಯಾರು ಎಂದು ನೀವು ಯೋಚಿಸುತ್ತಿರಬೇಕಲ್ಲವೇ….? ಅವಳೇ ನನ್ನ ಆತ್ಮೀಯ ಗೆಳತಿ, ಚಂದ್ರಮುಖಿ, ಪ್ರಾಣಸಖಿ ಭಾವನ! ಅವಳು ನನಗೇ ಪರಿಚಯವಾದ ರೀತಿ ಇದೆ ತರನಾಗಿತ್ತು. ಹೂದೋಟದಷ್ಟೇ ಸುಂದರವಾಗಿಯೂ ಸಹಾ ಇದ್ದಾಳೆ.
ಸುಮಾರು ಒಂಬತ್ತು ವರುಷಗಳ ಹಿಂದೆ ಮೊದಲ ಭೇಟಿಯಾದಾಗ ಒಂದು ವರುಷ ಪೂರ್ತಿ ಆಕೆಯೊಡನೆ ನಾ ಪೈಪೋಟಿ ನಡೆಸುತ್ತಿದ್ದೆ ಆಕೆಯೂ ಸಹಾ….!! ಆದರೆ “ಸ್ನೇಹ” ಅನ್ನುವ ಅನನ್ಯ ಬಂಧನ ಯಾವ ಘಳಿಗೆಯಲ್ಲಿ ನಮ್ಮಿಬ್ಬರ ನಡುವೆ ಚಿಗುರೊಡೆದು ಬೇರೂರಿಬಿಟ್ಟಿತೋ ..ನಾ ಅರಿಯೆ ! ಈ ಪೈಪೋಟಿ ಇರಿಸು-ಮುರಿಸಿನ ನಡುವೆ ಒಂದು ವಸಂತ ಹಾರಿ ಹೋಗಿತ್ತು. ಸುಂದರವಾದ ಬಾಳಿಗೆ ಈ ಗೆಳತಿಯ ಪ್ರವೇಶ ತುಂಬಾನೇ ಹಿತ ನೀಡಿತ್ತು.ಅಮಾವಾಸ್ಯೆಯ ದಿನಗಳು ಕಳೆದು ಹುಣ್ಣಿಮೆಯ ಬೆಳಕು ಎಲ್ಲೆಡೆ ಹರಡಿತ್ತು , ಚಳಿಗಾಲದ ಎಲೆಗಳು ಉದುರಿ ..ವಸಂತಕಾಲ ಮನೆಬಾಗಿಲಿಗೆ ಬಂದು ತಳಿರುತೋರಣವಾಗಿತ್ತು.ಇಂತಹ ಅಮೃತ ಘಳಿಗೆಯಲ್ಲಿ ಆಕೆ ತಂಗಾಳಿಯಾಗಿ ನನ್ನ ಬಾಳಲ್ಲಿ ಬಂದಳು. . ನಮ್ಮಿಬ್ಬರಲ್ಲಿ ತುಂಬಾ ಒಂದೇ ತರನಾದ ಭಾವನೆಗಳಿದ್ದವು.. ವಸ್ತುಗಳು ಸಹಾ ಇದ್ದವು! ಒಂದು ರೀತಿಯಲ್ಲಿ ಜನ್ಮ-ಜನ್ಮದ ಸಂಬಂಧವಿದೆ ಎಂಬಂತೆ ಭಾಸವಾಗತೊಡಗಿತ್ತು .ಹೀಗಿರುವಾಗ ಒಮ್ಮೆ ಸುಂದರವಾಗಿ ಅರಳಿದ್ದ ಹೂದೋಟವು ಒಣಗಿತ್ತು, ಚಂದಿರನ ಮುಖದಲ್ಲಿ ಕಳೆಗುಂದಿತ್ತು , ಭಾವನೆಗಳು ನೋವಾಗಿ ಹರಿಯತೊಡಗಿತ್ತು , ಅವಳ ಪ್ರಾಣ ನನ್ನ ಕೈಲಿತ್ತು, ಧಾರಾಕಾರವಾಗಿ ಬರುತ್ತಿದ್ದ ಅವಳ ಕಂಬನಿ ನನ್ನ ಮಡಿಲ ತೋಯ್ದಿತ್ತು .. ಒಂದು ಕ್ಷಣ ಏನು ಅರಿಯದೆ,ಇಷ್ಟೊಂದು ಕಂಬನಿಗಳ ಹಿಂದಿನ ನೋವೇನೆಂಬುದನ್ನು ತಿಳಿಯುವ ಕಾತುರವಾಯಿತು. ಅವಳ ಗಲ್ಲವನ್ನು ನನ್ನೆರಡು ಕೈಗಳಿಂದಿಡಿದು ಕೇಳಿದೆ, “ಹೇ..ಭಾವನ , ಏನಯ್ತು? ನಿನ್ನ ನೋವೇನೆಂಬುದ ಹೇಳುವೆಯಾ ಕಂದ..??” ಎಂದೆ. ಅದಕ್ಕೆ ಮೌನವೇ ಉತ್ತರವಾಗಿತ್ತು. ಆದರೂ ಎಡಬಿಡದೆ ಆ ಕಣ್ಣೀರು ಅವಳ ಮುದ್ದಾದ ಕಣ್ಣುಗಳಿಂದ ಸುರಿದು ಗಲ್ಲದ ದಾರಿ ಹಿಡಿದಿದ್ದನ್ನು ತಾಳಲಾರದೆ ನನ್ನ ಕಣ್ಣುಗಳೂ ಅಳತೊಡಗಿದವು. ಆ ದಿನವೆಲ್ಲಾ ಹೀಗೆ ಕಳೆಯಿತು. ನನಗೆ ಏನೂ ಅರಿಯದವಳಂತೆ ಮೂಖ ಪ್ರೇಕ್ಷಕಳಾಗಿ ಅವಳ ಕಣ್ಣೊರೆಸುವ ಪ್ರಯತ್ನವ ಮಾಡಿದೆ. ಆಗೊಮ್ಮೆ-ಈಗೊಮ್ಮೆ ಕೆಲವು ಧೈರ್ಯದ ನುಡಿಗಳ ಹೇಳಿ ಅವಳ ಸಂತೈಸುವುದರೊಳಗಾಗಿ ಸಂಜೆಯಾಗಿತ್ತು.
ಮುಂದಿನ ದಿನ ಶಾಲೆಗೆ ಬಂದವಳೇ ನನ್ನ ಕೈಗೊಂದು ಚೀಟಿ ಇಟ್ಟು ಹೊರಟು ಹೋದಳು. ನನಗೋ ಓದುವ ತವಕ..ಆದರೆ ಅಂತಹ ಮುಕ್ತ ವಾತಾವರಣಕ್ಕಾಗಿ ಮನ ತವಕಿಸುತ್ತಿತ್ತು. ಹಾಗೂ – ಹೀಗೂ ಒಂದು ಪ್ರಶಾಂತವಾದ ಸ್ಥಳ ಸಿಕ್ಕಿತು…ಆ ಚೀಟಿಯ ತೆರೆದು ಓದಲು ಶುರುಮಾಡಿದೆ……ಅದರಲ್ಲಿ ಹೀಗೆ ಬರೆದಿತ್ತು..

ಪ್ರೀತಿಯ ಕವನ,

ಭಾವನ ಅಂತ ಹೆಸರಿಟ್ಟುಕೊಂಡು ಭಾವನೆಗಳ ಅರ್ಥೈಸಿಕೊಳ್ಳದೆ ಇದ್ದ ಸಮಯದಲ್ಲಿ, ಭಾವನೆಗಳ ಹಂಚಿಕೊಳ್ಳಲು ಒಂದು ಪುಟ್ಟ ಹ್ರುದಯವೂ ನನ್ನೊಡನಿಲ್ಲದಿದ್ದ ಸಮಯದಲ್ಲಿ ಭಾವನೆಗಳಿಗೆ ಜೀವತುಂಬಿದ ನನ್ನ ಪ್ರೀತಿಯ ಗೆಳತಿಗೆ ನಾನೆಂದೂ ಋಣಿ . ನಾನು ಇಷ್ಟು ದಿನ ನಿನ್ನನು ಅರ್ಥೈಸಿಕೊಳ್ಳದೇ ನಿನ್ನನು ತುಂಬಾ ನೋಯಿಸಿಬಿಟ್ಟೆ,ನಿನ್ನ ಮುಗ್ಢ ಮನಸಿನ ನಡುವೆ ನನ್ನ ಹುಸಿ ಪ್ರೀತಿಯ ಬೆರೆಸಿದ್ದೆ, ಸಾಧ್ಯವಾದರೆ ನನ್ನ ಕ್ಷಮಿಸಿಬಿಡು. ಈಗ ನಾನು ಒಂದು ತೊಂದರೆಯಲ್ಲಿ ಸಿಕ್ಕಿಬಿದ್ದಿದ್ದೇನೆ. ನನ್ನ ತಂದೆ ಎಲ್ಲ ಲೊಸ್ ಮಾಡಿಕೊಂಡಿದ್ಡಾರೆ, ವಿಪರೀತವಾಗಿ ಕುಡಿಯೋಕೆ ಶುರು ಮಾಡಿಕೊಂಡಿದ್ಡಾರೆ, ಒಂದು ಪುಸ್ತಕ ತೆಗೆದುಕೊಳ್ಳಲೂ ಸಹಾ ನನ್ನಲ್ಲಿ ಹಣವಿಲ್ಲ.. ಏನೂ ದಿಕ್ಕು ತೋಚದಂತಾಗಿದೆ. ನೆಮ್ಮದಿ ಇಲ್ಲದಂತಾಗಿದೆ..ಮನೆಯಲ್ಲಿ ದಿನಾ ರಂಪ-ರಗಳೆ….ನನ್ನ ಕಂಬನಿಗಳ ಹಿಂದಿರುವ ಕಾರಣ ಇದೇ..ನನಗೆ ಬಾಯಿ ಬಿಟ್ಟು ಹೇಳಲು ಸಾಧ್ಯವಾಗಲಿಲ್ಲ, ಅದಕ್ಕೆ ಈ ಪತ್ರದ ಮೂಲಕ ನನ್ನ ನೋವನ್ನು ತೆರೆದಿಟ್ಟಿದ್ದೇನೆ. ನಿನ್ನಂತಹ ಒಳ್ಳೆಯ ಗೆಳತಿ ಸಿಕ್ಕಿದ್ದು ನನ್ನ ಪುಣ್ಯ. ಇನ್ನೆಂದಿಗೂ ನಿನ್ನ ನೋಯಿಸುವುದಿಲ್ಲ, ನನ್ನಾಣೆ!

ಇಂತಿ,
ಸದಾ ನಿನ್ನವಳೇ ಆದ
ಭಾವನ

ಎಂದು ಬರೆದಿತ್ತು. ಜೊತೆಗೆ ಇನ್ನೊಂದು ಚೀಟಿ ಇತ್ತು, ಅದನ್ನು ತೆಗೆದು ನೋಡಿದ ತಕ್ಷಣ ನನ್ನ ಕಣ್ಣುಗಳಲಿ ನೀರು ತುಂಬಿ ಬಂದಿತು, ಜೊತೆಗೆ ಕೋಪವೂ ಸಹಾ ನುಗ್ಗಿ ಬಂದು ನನ್ನ ಕಣ್ಣುಗಳನ್ನು ಕೆಂಪೇರಿಸಿತು.ಏಕೆಂದರೆ ಅವಳು ಆಕೆಯ ರಕ್ತದಲ್ಲಿ ನನ್ಹೆಸರ ಬರೆದಿದ್ದಳು. ನನ್ಗೆ ಒಂದು ಕ್ಷಣ ದಿಕ್ಕೇ ತೋಚದಂತಾಗಿ ಅಲ್ಲಿಯೇ ಕುಸಿದುಬಿದ್ದೆ.ನಂತರ ಕ್ಲಾಸ್ ಗಳು ಶುರುವಾದವು. ಅವಳು ಮತ್ತೆ ನನಗೆ ಸಿಕ್ಕಿದ್ದು ಮಧ್ಯ್ಹಾಹ್ನ ಊಟದ ಸಮಯದಲ್ಲಿ…ಅವಳೊಡನೆ ಮಾತನಾಡುವವರೆಗೂ ನನಗೆ ನೆಮ್ಮದಿಯಿಲ್ಲದಂತಾಯಿತು.ಬೇಗ-ಬೇಗನೆ ಊಟ ಮುಗಿಸಿ ಅವಳ ಕೈ ಹಿಡಿದು ಮೆಟ್ಟಿಲುಗಳ ಬಳಿ ನಡೆದೆ….ಆಕೆ ತುಂಬಾನೆ ಸೂಕ್ಷ್ಮ..ಅಳೋದಕ್ಕೆ ಶುರುಮಾಡಿದಳು, ಆಕೆಯ ಕಂಬನಿಗಳು ನನ್ನ ಹಿಂಸಿಸತೊಡಗಿತ್ತು, ಅವಳ ಕಂಬನಿ ನನ್ನ ಕೋಪವ ಒಂದೇ ಕ್ಷಣದಲ್ಲಿ ಕರಗಿಸಿಬಿಟ್ಟಿತು.. ಮನಃಬಿಚ್ಚಿಮಾತನಾಡುವಂತೆ ಕೋರಿಕೊಂಡೆ. ಸುಮಾರು ಹೊತ್ತು ಮಾತನಾಡಿದ ಬಳಿಕ ಅವಳ ಸ್ಥಿತಿ ಸಾಧಾರಣವಾಯಿತು. ಮನಸ್ಸಲ್ಲಿ ಬೆಂಕಿಯನ್ನಿಟ್ಟುಕೊಂಡು ಹೊರಗೆ ಸದಾ ಹಸನ್ಮುಖಿಯಾಗಿದ್ದ ಅವಳ ಭಾವನೆಗಳು ಅಂದು ನನಗೆ ಅರ್ಥವಾಗತೊಡಗಿತು. ಆಕೆ ನೂರಾರು ಕಷ್ಟಗಳ ಸುಳಿಯಲ್ಲಿ ಸಿಕ್ಕಿ ಬಿದ್ದು ಹೊರಬರಲಾರದೆ ಒದ್ದಾಡುತ್ತಿದ್ದಳು, ಅಂತಹ ಸಂಧರ್ಭದಲ್ಲಿ ನನ್ನದೊಂದು ಅಳಿಲು ಸೇವೆಯೂ ನಡೆಯಿತು, ಆದರೆ ಅದು ಸಾಕಾಗಲಿಲ್ಲ, ಆದರೆ ನನ್ನಿಂದಾಗೋಂತದ್ದು ಅಷ್ಟೇ ಆಗಿತ್ತು, ಆ ಕ್ಷಣಕ್ಕೆ…. ಆದರೆ ಅವಳಿಗೆ ಧೈರ್ಯ ತುಂಬುವ ಸಾಹಸಕ್ಕೆ ಕೈ ಹಾಕಿ ಸಫಲಳಾದೆ. ಅವಳ ನೋವಿಗೆ,ಕಣ್ಣೀರಿಗೆ ನನ್ನ ಮಡಿಲನ್ನು ಆಕೆಗೆ ಧಾರೆ ಎರೆದೆ. ದಿನಾ ಆಕೆ ತನ್ನ ಭಾವನೆಗಳನ್ನು ಪತ್ರದ ಮೂಲಕ ಹಂಚಿಕೊಳ್ಳುತ್ತಿದ್ದಳು.., ನಾನು ಸಹಾ ಹಾಗೆಯೇ ಪ್ರತ್ಯುತ್ತರವ ನೀಡುತ್ತಿದ್ದೆ. ಪ್ರತಿ ದಿನಾ ಒಂದು ಚಿತ್ರವ ಬಿಡಿಸಿ ಕೊಡುತ್ತಿದ್ದಳು..ಅವಳ ಭಾವನೆಗಳಿಗೆ ಆ ಚಿತ್ರಗಳು ಸಾಕ್ಷಿ ಯೆಂಬಂತೆ! ಒಂದು ರೀತಿಯಲ್ಲಿ ಮೌನ ಸಂಭಾಶಣೆ ಇಬ್ಬರಿಗೂ ಹಿತ ನೀಡಿತ್ತು..

ದಿನಗಳು ಉರುಳುತ್ತಿತ್ತು.ಆಕೆ ನನಗೆ ತುಂಬಾ ಆಪ್ತಳಾದಳು.ಅಕ್ಕ-ತಂಗಿಯರಿಗಿಂತ ಹೆಚ್ಚು, ಅಮ್ಮ – ಮಗಳಿಗಿಂತ ಹೆಚ್ಚು ಆತ್ಮೀಯತೆ, ನಿಶ್ಕಲ್ಮಶವಾದ ಪ್ರೀತಿ ಅಷ್ಟೇ ಇದ್ದಿದ್ದು, ಅದೇ ಎಷ್ಟೋ ನೆಮ್ಮದಿ ನೀಡಿತ್ತು.ಆಕೆ ನನ್ನನ್ನೆಷ್ಟು ಅಚ್ಚಿಕೊಂಡಳೆಂದರೆ ಆಕೆಗೆ ನಾನೆ ಪ್ರಪಂಚವಾದೆ, ನಾನು ಇನ್ಯಾರೊಡನೆಯಾದರೂ ತುಂಬಾ ಸಲುಗೆ, ಆತ್ಮೀಯತೆಯಿಂದ ಮಾತನಾಡಿದರೆ ನನಗೆ ಆ ಸಂಜೆ ಮಹಾಮಂಗಳಾರತಿ ನಡೆಯುತ್ತಿತ್ತು, ಅಷ್ಟು ಆಕೆಗೆ ನಾ ಇಷ್ಟವಾಗತೊಡಾಗಿದೆ, ನನಗೂ ಸಹಾ, ಆದರೆ ಏಕೋ ಅವಳಷ್ಟಿರಲಿಲ್ಲ..ದಿನೇ-ದಿನೇ ಆಕೆಯ ಮುಖ ಅರಳತೊಡಗಿತ್ತು, ನೂರಾರು ನೋವುಗಳ ಮಧ್ಯೆ ಒಬ್ಬ ಗೆಳತಿ ಸಿಕ್ಕಿದ್ಡು ಆಕೆಗೆ ನೆಮ್ಮದಿಯ ನೀಡಿತ್ತು. ಒಂದು ದಿನಾ ನಾ ಶಾಲೆಗೆ ರಜೆ ಹಾಕಿದರೆ ಆಕೆಗೆ ತಡೆಯಲಾರದೆ ಫೋನ್ ಮಾಡುತ್ತಿದ್ದಳು. ಒಟ್ಟಿಗೆ ಊಟ, ಆಟ, ಪಾಠ ನಡೆಯುತ್ತಿತ್ತು..ಇನ್ನೇನು ಶಾಲೆ ಮುಗಿಯುವ ವೇಳೆ ಹತ್ತಿರವಾಗುತ್ತಿತ್ತು…ಇನ್ನೂ ಇಬ್ಬರು ದೂರವಾಗಬೇಕೆಂಬ ನೋವು ನಮ್ಮಿಬ್ಬರ ಮನಗಳಲ್ಲಿ  ಬೇರೂರಿಬಿಟ್ಟಿತ್ತು. ಆದರೂ ವಿಧಿ ಬರಹ ನಮ್ಮಿಬ್ಬರ ದೇಹಗಳ ದೂರ ಮಾಡಿತ್ತೇ ವಿನಹ ಮನಸ್ಸುಗಳನ್ನಲ್ಲ!… ಮನಸ್ಸುಗಳೂ ಇನ್ನು ಹೆಚ್ಚು ಹತ್ತಿರವಾಗಲು ಅವಕಾಶ ಕಲ್ಪಿಸಿಕೊಟ್ಟಿತು ಎಂದರೆ ತಪ್ಪಾಗಲಾರದು. ನಾವಿಬ್ಬರೂ ಬೇರೆ-ಬೇರೆ ಕಾಲೇಜಿನಲ್ಲಿ ಸೇರಿದ್ದೆವು. ಆದ್ರೂ ವರಕ್ಕೊಮ್ಮೆ ಅವಳ ಪತ್ರ ಹಾಯ್ದು ಬರುತ್ತಿತ್ತು….ಎರಡು-ಮೂರು ತಿಂಗಳಿಗೊಮ್ಮೆ  ಭೇಟಿಯಾಗುತ್ತಿದ್ದೆವು. ವರುಷಗಳು ಕಳೆದರೂ ಸ್ನೇಹ ಬಲಗೊಳ್ಳುತ್ತಿತ್ತು. ಭಾವನೆಗಳು ಇನ್ನಷ್ಟು ಅರಳುತ್ತಿತ್ತು.  ನಮ್ಮಿಬ್ಬರ ನಡುವೆ ಹೇಳದಂತಹ ಗುಟ್ಟೇನೂ ಇರಲಿಲ್ಲ. ಎಂತಹ ಸಂಧರ್ಭದಲ್ಲೂ ಅವಳಿಗೆ ನಾ ಆಸರೆಯಾದೆ, ನನಗೆ ಅವಳಾಸರೆಯಾದಳು. ಜೀವನ ಹಿತವಾಗಿ ಸಾಗಿತ್ತು. ಶಾಲೆಯಲ್ಲಿದ್ದಾಗ ನಮ್ಮಿಬ್ಬರ ಆತ್ಮೀಯತೆಯ ಬಗ್ಗೆ ಎಲ್ಲರ ಬಾಯಲ್ಲೂ ಕೇಳುತ್ತಿದ್ದೆವು.ಆಗ ತಂಬಾನೇ ಖುಷಿಯಾಗುತ್ತಿತ್ತು.
ಕಾಲೇಜಿನಲ್ಲಿ ಅವಳಿಲ್ಲದೆ ತುಂಬಾ ಒಂಟಿತನ ಕಾಡತೊಡಗಿತು. ಅವಳ ಪ್ರೀತಿನಾ ತುಂಬಾ ಮಿಸ್ಸ್ ಮಾಡಿಕೊಳ್ಳುತ್ತಿದ್ದೆ… ಅವಳು ನನ್ನ ಹುಸಿರೆಂಬಂತೆ ಅವಳ ಸ್ನೇಹವ ಕಾಪಾಡಿದೆ. ಒಮ್ಮೆ ಇದ್ದಕ್ಕಿದ್ದಂತೆ ಅವಳು ಸ್ವಲ್ಪ ಪ್ರಮಾಣದ ವಿಷ ಕುಡಿದು ಆಸ್ಪತ್ರೆಗೆ ಸೇರಿರುವುದು ತಿಳಿದು ನನಗೆ ಹುಸಿರೇ ನಿಂತಂತಾಗಿ ಆಸ್ಪತ್ರೆಗೆ ಓಡಿದೆ. ಅವಳ ಆ ಸ್ಥಿತಿ ನೋಡಿ ನಾ ಬದುಕಿರುವುದಾದರೂ ಏಕೆ ಎಂಬುವಷ್ಟು ಹಿಂಸೆಯಾಯಿತು. ಅವಳ ಸ್ಥಿತಿ ನನ್ನ ಮನಸ್ಸ ಹಿಂಡಿತು.. ಏನೂ ಅರಿಯದವಳಂತೆ ನೆಮ್ಮದಿಯಿಂದ ಕಣ್ಣ ಮುಚ್ಚಿ ಉಸಿರಾಡುತ್ತಿದ್ದಳು…. ಅವಳ ಕೈಗಳನ್ನು ನನ್ನ ಎರಡೂ ಕೈಗಳಲ್ಲಿ ಹಿಡಿದು ಅಳಲಾರಂಬಿಸಿದೆ…ನನ್ನ ಕಣ್ಣ ಹನಿಗಳು ಅವಳ ಕೈ ಮೇಲೆ ಬಿದ್ದೋ ಏನೋ ಮೆಲ್ಲಗೆ ತನ್ನ ಕಣ್ಣುಗಳ ತೆರೆದು ಶಾಂತಚಿತ್ತದಿಂದ ನನ್ನೆಡೆ ನೋಡುತ್ತಿದ್ದಳು..ಮಾತನಾಡಲೂ ಸಹಾ ಆಕೆಯಲ್ಲಿ ಶಕ್ತಿಯಿರಲಿಲ್ಲ…ಏಕೆ, ಏನು,ಹೇಗಯ್ತು ಎಂದು ಕೇಳಲು ಸಹಾ ನನ್ನ ಸ್ವರ ಹೊರಬರಲಾರದೆ ಧರಣಿ ಕುಳಿತಿತ್ತು. ಎಷ್ಟೋ ಹೊತ್ತು ಚೇತರಿಸಿಕೊಂಡ ನಂತರ ಆಕೆಯ ತಾಯಿಯನ್ನು ಕೇಳಿದಾಗ ವಿವರಿಸಿದ್ದು ಹೀಗೆ..”ಮನೆಯಲ್ಲಿ ನೆಮ್ಮದಿಯಿಲ್ಲ, ಅವಳ ತಂದೆ ಕುಡಿದು ಬಂದು ದಿನಾ ಹೊಡೆಯುತ್ತಾರೆ, ಒಂದು ಹೊತ್ತು ಊಟಕ್ಕೂ ತೊಂದರಯಾಗಿದೆ, ಇನ್ನೂ ೩ ಜನ ಅಕ್ಕಂದಿರ ಮದುವೆ ಮಾಡಬೇಕು….ಇವಳು ಇನ್ನೂ ಚಿಕ್ಕವಳು ಏನೂ ಅರಿಯದವಳು ಪರಿಸ್ಥಿತಿಗೆ ಹೆದರಿ ಹೀಗೆ ಮಾಡಿಕೊಂಡಿದ್ದಾಳೆ…ಸಧ್ಯ ನಾವು ನೋಡಿ ಅವಳ ಉಳಿಸಿಕೊಂಡೆವು..ಇಲ್ಲವಾದರೆ ಇಷ್ಟು ಹೊತ್ತಿಗೆ ಆಕೆ ನಮ್ಮ ಪಾಲಿಗೆ ಉಳಿಯುತ್ತಿರಲಿಲ್ಲ….ಎಂದು ತನ್ನ ದುಃಖವ ನನ್ನೊಡನೆ ತೋಡಿಕೊಂಡರು.ಅವಳು ಗುಣವಾಗುವುದಕ್ಕೆ ಸುಮಾರು ದಿನಗಳು ಹಿಡಿಯಿತು…..
ದಿನಗಳೆದಂತೆ ಆಕೆ ಚೇತರಿಸಿಕೊಂಡಳು, ನನಗೆ ಹೋದ ಜೀವ ಮತ್ತೆ ಬಂದಿತು..ಅವಳ ಭಾವನೆಗಳ ಸಾಗರದಲ್ಲಿ ನಾ ಮಿಂದೆ, ಇಂದಿಗೂ ಆಕೆ ನನ್ನವಳು, ನನ್ನ ಆಪ್ತ ಗೆಳತಿ, ನಮ್ಮಿಬ್ಬರ ಸ್ನೇಹ ಚಿರಕಾಲ ಉಳಿಯಲಿ ಎಂದು ದೇವರಲ್ಲಿ ಪ್ರತಿನಿತ್ಯ ಬೇಡುತ್ತೇನೆ. ಅಂದವಳು ಭಾವಜೀವಿ ಅಂದಿದ್ದೆ ನೆನಪಿದೆಯಾ? ಆದರೆ ಈಗವಳು ಆ ರೀತಿಯಾದ ನೂರು ಕಷ್ಟಗಳು ಬಂದರೂ ಎದೆಗುಂದದೆ ಎದುರಿಸಿ ನಿಲ್ಲುವ ನಿಲುವನ್ನು ಬೆಳೆಸಿಕೊಂಡಿದ್ದಾಳೆ. ಈಗಲೂ ಆ ನೋವು-ದುಃಖಗಳಿದ್ದರೂ ಆಕೆ ಖುಷಿಯಾಗಿದ್ದಾಳೆ.. ದೇವರು ಅಷ್ಟು ನೋವು ಕೊಟ್ಟರೂ ಆ ದೇವರನ್ನೂ ಪ್ರೀತಿಸುತ್ತಾಳೆ..ಅವಳಿಗೆ ನನ್ನ ಬಗ್ಗೆ ಎಷ್ಟು ಪ್ರೀತಿ ಎಂದರೆ ಖುಷಿಯಿಂದಿದ್ದರೆ ನನ್ನ ಖುಷಿಯಲ್ಲಿ ಅವಳ ಖುಷಿಯ ಕಾಣುತ್ತಾಳೆ, ದುಃಖದಲ್ಲಿದ್ದರೆ ಹೆಗಲು ನೀಡಿ ಧೈರ್ಯ ಹೇಳುತ್ತಾಳೆ.. ಜೀವನದ ಪ್ರತಿ ಹೆಜ್ಜೆಯಲ್ಲೂ ನನ್ನ ನೆನೆಯುತ್ತಾಳೆ…. ಇಂತಹ ಜೀವದ ಗೆಳತಿ ಎಂದೆಂದಿಗೂ ಖುಷಿಯಾಗಿರಲಿ ಎಂಬುದೇ ನನ್ನಾಸೆ….ನನ್ನ ಕೈ ಎಂದೂ ಹಿಡಿದಿರು…ನಿನ್ನ ಹ್ರುದಯದಲ್ಲಿ ಸದಾ ನಾ ಇರುತ್ತೇನೆ….

“ಅನುಭವಕ್ಕಿಂತ ಅನುಭವದ ನೆನಪೇ ಸಿಹಿ”…..ಅಲ್ಲವೇ???????

ಆ ಪುಟ್ಟ ಕಂದಮ್ಮಳ ಕೂಗು ಹೊರಸೂಸಿದಾಗ

ಜನವರಿ 18, 2009

baby

ಅದೊಂದು ಶುಭದಿನ, ಬೆಳಿಗ್ಗೆ ಎದ್ದು ಆತುರಾತುರವಾಗಿ ಕಾಲೇಜಿಗೆ ಹೋಗಲು ತಯಾರಿ ನಡೆಸುತ್ತಿದ್ದೆ. ತಕ್ಷಣ ಫೋನ್ ಬಾ ಬಾ ಎಂದು ಕರೆಯತೊಡಗಿತ್ತು…ಆ ತರಾತುರಿಯಲ್ಲಿ ಓಡಿ  ಬಂದು ಹಲೋ ಎಂದೆ, ಆ ಕಡೆಯಿಂದ ನನ್ನ ಪ್ರೀತಿಯ ಅಕ್ಕ ಸಂಜನಾ(ಅಕ್ಕ ಅಂದರೆ ನನ್ ಕಸಿನ್) ಶುಭಾಸಮಾಚಾರವ ನಮ್ಮಲ್ಲಿಗೆ  ಚೆಲ್ಲಲು ಕರೆಮಾದಿದ್ದಳು. ಅಕ್ಕನ ಫೋನ್ ಬಂದಿದ್ದರಿಂದ ನಾನು ಅವಳಿಗೆ ಮಾತನಾಡಲು ಬಿಡದೆ ನೂರೆಂಟು ಪ್ರಶ್ನೆಗಳ ಸುರಿಮಳೆಯನ್ನೇ ಸುರಿದುಬಿಟ್ಟೆ…ಅಷ್ಟು ಕುಶಿಯಾಗುತ್ತಿತ್ತು ನನಗೆ..ಸ್ವಲ್ಪ ಕ್ಷಣಗಳ ನಂತರ ನಾನು ಅವಳಿಗೆ ಮಾತನಾಡಲು ಬಿಟ್ಟೆ..ಅವಳು ಹೇಳಿದಳು..” ನಾನು ಗರ್ಭಿಣಿ ನನಗೆ ಮೂರು ತಿಂಗಳು.. ನಮ್ಮ ಮನೆಗೆ ಹೊಸ ಕಂದಮ್ಮ ಬರುತ್ತೆ ” ಅಂತ..ಹೇಳಿ ಸ್ವಲ್ಪ ಮಾತಾಡಿ ಫೋನ್ ಇಟ್ಟಳು..ನಾನು ತಕ್ಷಣ ಅಂಗಳದಿಂದ ಅಡಿಗೆಮನೆಗೆ ಧಾವಿಸಿ ಅಮ್ಮನಲ್ಲಿಗೆ ಶುಭ ಸಂದೇಶವ ನೀಡಿ, ರೂಮಿಗೆ ಹೋಗಿ ಅಲ್ಲಿ ತಮ್ಮ ಕೆಲಸದಲ್ಲೇ ಮುಳುಗಿಹೋಗಿದ್ದ ನನ್ನ ತಂದೆಗೆ ಕೂಡ ತಿಳಿಸಿ ನಾನು ನಲಿದಾಡುವಷ್ಟರಲ್ಲೇ  ಹೊತ್ತಾಗಿತ್ತು. ಆತುರಾತುರವಾಗಿ ಅರ್ಧಂಬರ್ಧ ತಿಂಡಿ ತಿಂದು ಕಾಲೇಜಿಗೆ   ಹೊರಟೆ. ನನ್ನ ಸ್ನೇಹಿತರ ಬಳಿ ನನಗಾದ ಸಂತೋಷವ ತಿಳಿಸುವವರೆಗೂ ಕಾಯಲು ಕಷ್ಟ ಅನಿಸಿತು ನನಗೆ! ಅಕ್ಕ ಇದ್ದುದು ಬಹು ದೂರದ ಊರಿನಲ್ಲಿ ..!!! ನಾವು ಅವಳನ್ನು ನೋಡಲಿಕ್ಕೆ ಹೋಗುವುದಂತೂ ಅಸಾದ್ಯ! ಹಾಗಾಗಿ ಅವಳ ಮಾತು ಅವಳ ಕೋಗಿಲೆಯ ಧ್ವನಿ, ಅವಳ ಮುಗ್ಧತೆಯ ನಗು ಇಷ್ಟರಲ್ಲೇ ತೃಪ್ತಿ ಪಡುತ್ತಿದ್ದೆವು. ಎಷ್ಟೋ ಸಾರಿ ಅವಳಿರುವ ಊರಿಗೆ ಯಾರಾದರೂ ನಮಗೆ  ತಿಳಿದ ನೆಂಟರು ಹೋಗುತ್ತಾರೆ ಎಂದು ತಿಳಿದರೆ ಸಾಕು ಮನೆಯಲ್ಲಿ ಸಂಭ್ರಮದ ವಾತವರಣ..ಬಾಣಲೆಗಳ ತಿಂಡಿ.. ಅಂದರೆ ಚಕ್ಕುಲಿ ಕಜ್ಜಾಯ ಕೋಡುಬಳೆ..ಜೊತೆಗೆ ತಂಬಿಟ್ಟು ಹೀಗೆ ನೂರೆಂಟು ತಿಂಡಿಗಳಿಗೆ ಸಿಹಿ ಕಾರದ ಜೊತೆ ನಮ್ಮ ಪ್ರೀತಿನೂ ಸೇರಿಸಿ ಮಾಡಿ  ಕಳಿಸಿದೆವು. ಅವಳು ಅಷ್ಟೇ ಗರ್ಭದಲ್ಲಿ ಮುದ್ದಿನ ಕಂದಮ್ಮನ ಬಗ್ಗೆ ನೂರೆಂಟು ಆಸೆ-ಕನಸುಗಳ ಹೊತ್ತು ಕುಳಿತಿರುವಾಗ ಎದುರಿಗೆ ರುಚಿ-ರುಚಿಯಾದ ಎಲ್ಲ ತಿಂಡಿಗಳು ತಲುಪಿದ ತಕ್ಷಣ ಸಹಜವಾದ ಬಸುರಿ ಬಯಕೆಗಳು ಅರಳ ತೊಡಗಿದವು  ?? ಅದೂ ಬೇರೆ ತನ್ನ ತವರಿಂದ ಬಂದಿರುವ ವಿಧವಿಧವಾದ ತರತರನಾದ ತಿಂಡಿಗಳು ನೋಡಿ ಅವಳಿಗೆ ಎಷ್ಟು ಆನಂದವಾಗಿರುವುದಿಲ್ಲ, ಅಲ್ಲವೇ? ಹಾಗೂ ಹೀಗೂ ನೋಡು ನೋಡುತ್ತಲೇ.. ಅವಳು ಒಂಬತ್ತು ತಿಂಗಳಿಗೆ ಕಾಲಿರಿಸಿದಳು .ನಾವೆಲ್ಲಾ ಅವಳ ಮನೆಗೆ ಹೋದೆವು..

ನನ್ನಕ್ಕನಿಗೋ.. ಎಲ್ಲಿಲ್ಲದ ಭಯ, ಹೆದರಿಕೆ ಒಂದೆಡೆ..! ಇನ್ನೊಂದೆಡೆ ಎಂದೂ ಕಾಣದಿರುವ, ಗರ್ಭದಲ್ಲಿ ಅಡಗಿರುವ ಮಗುವ ತನ್ನೆರಡೂ ಕಂಗಳಲ್ಲಿ ನೋಡಿ ಅದನ್ನು ಸ್ಪರ್ಶಿಸುವಾಸೆ ಈ ಎಲ್ಲ ಆಸೆಗಳು ಗರಿಬಿಚ್ಚಿ ಕುಣಿದಿತ್ತು ! ಹಾಗೂ-ಹೀಗೂ ತಡೆಯಲಾರದ ನೋವನ್ನು ನುಂಗಿ ಆ ಮುದ್ದು ಪುಟ್ಟ ಲಕ್ಷ್ಮಿಗೆ ಶುಭ ಶುಕ್ರವಾರದಂದು ಜನುಮ ನೀಡಿದಳು…[:)]ಇತ್ತ ಆ ಕಂದಮ್ಮಳ ಕೂಗು ಕೇಳುತ್ತಿದ್ದ ಹಾಗೆ ಅಜ್ಜಿ ತಾತಗೆ ಸಂತೋಷದ ಕಣ್ಣೇರು ತುಂಬಿ ತುಳುಕುತ್ತಿತ್ತು..ನಮ್ಮಮನೆಯವರೆಲ್ಲರಿಗೂ ಹಾಲು ಕುಡಿದಷ್ಟು ಸಂತೋಷವಾಯಿತು ಅವರು ತಕ್ಷಣ ಎಲ್ಲರಿಗೂ  ಶುಭಸಂದೆಶವ ನೀಡಿದರು.ನಮಗೋ ನಿಲ್ಲಲಾಗಲಿಲ್ಲ ನನ್ನ ಮನಸ್ಸು ನವಿಲಂತೆ ಕುಣಿದಾಡುತ್ತಿತ್ತು.. ಮನಸಲ್ಲೇ ಸ್ವಚ್ಚ್ಹಂದವಾದ ಝರಿಯು ಹರಿಯತೊಡಗಿತ್ತು.. ಎಲ್ಲೆಲ್ಲು ಸಂತೋಷ ಸಂಭ್ರಮ ..ಬೇರೇನೂ ಇಲ್ಲದಾಗಿತ್ತು…

ನನ್ನ ಅಕ್ಕನಿಗೆ ಅಷ್ಟೆಲ್ಲಾ ನೋವು,ಭಯ, ಅಂಜಿಕೆ ಆ ಮಗುವನ್ನು ನೋಡಿದ, ಅದರ ಕೂಗನ್ನು ಕೇಳಿದ, ಅದ್ರ ಸ್ಪರ್ಶವನ್ನು ಅನುಭವಿಸಿದ ಕೂಡಲೇ ಎಲ್ಲವೂ ಕರಗಿ .. ಪ್ರೀತಿ, ವಾತ್ಸಲ್ಯ, ಮಮತೆಗಳು ಸಾಗರವಾಗಿ ಹರಿಯ ತೊಡಗಿತು.ಅದೆಷ್ಟು ಮುಗ್ಧತೆ ಆ ಮಗುವಲ್ಲಿ!! ಪಿಳಿ ಪಿಳಿ ಕಣ್ಣಗಳು.. ಪುಟ್ಟ-ಪುಟ್ಟದಾದ ಬೆರಳುಗಳು.. ಮುದ್ಹಾಧ ನಗೆ…ಚಂದಿರನಂತ ಮೊಗ….ಮೂಖದಲ್ಲಿ ಆಗಾಗ ನೀಡುವ ಮಂದಹಾಸ …ಪೂರ್ಣ ಚಂದಿರನಂತೆ…ಇತ್ತು ಆ ಪುಟ್ಟ ಕೂಸು..ಪಾಪ ಏನೂ ತಿಳಿಯದ ಆ ಪುಟ್ಟ ಲಕ್ಷ್ಮಿ ಎಲ್ಲರ ಕೈಗಳಲ್ಲೂ  ಓಡಾಡುತ್ತಿದ್ದಳು .. ಎಲ್ಲರ ಪ್ರೀತಿಯ ಗಳಿಸಿದ ವಿಜಯದ ನಗೂಬೇರೆ ಕೊಡುತ್ತಿದ್ದಳು ಆಗಾಗ..ಇತ್ತ ನನ್ನ ಭಾವನಿಗಂತೂ ಎಲ್ಲಿಲದ ಕುಶಿ..ಒಂದೆಡೆ ದೇವರಿಗೆ ನಮನಗಳನ್ನುಸಲ್ಲಿಸಿ..ಇನ್ನೊಂದೆಡೆ ಧನ್ಯತೆ ತುಂಬಿರುವ ಕಣ್ಣುಗಳಲ್ಲಿ ಅಕ್ಕನಿಗೆ ಪ್ರೀತಿ ನೀಡಿ ಮಗುವನ್ನು ನೋಡುತ್ತಾ..ಅದರ ಪುಟ್ಟ ಪುಟ್ಟ ಬೆರಳ ನಡುವೆ ಬೆರಳ ಸೇರಿಸಿ..ಅದರ ಮೊಗಕ್ಕೊಂದು ಮುತ್ತನಿಟ್ಟು..ಮೈಮರೆತೆ ಬಿಟ್ಟಿದ್ದಾರೆ ..ಇಲ್ಲಿ ಅಜ್ಜಿ ತಾತಂದರಿಗಂತೂ ಸಂತೋಷದ ಕಣ್ಣೇರು..ಅಂತ ಮುದ್ದು ಕೂಸು ಅದು..ಅಬ್ಬಃ ಎಂತಹ ಅನುಭವವಲ್ಲವೇ? ಇಂತಹ ಶುಭ ಸಂಭ್ರಮವ ತಂದುಕೊಟ್ಟ ಆ ಪುಟ್ಟ ಲಕ್ಷ್ಮಿಗೆ ಒಳ್ಳೆಯದಾಗಲಿ ಎಂದು ನಾವೆಲ್ಲರೂ ಹಾರೈಸೋಣ ಅಲ್ಲವೇ??

ಆ ಪುಟ್ಟ ಕಂದಮ್ಮಳ ಕೂಗು ಹೊರಸೂಸಿದ್ದು ಎಷ್ಟೆಲ್ಲ ಹೃದಯಗಳಿಗೆ ಕುಶಿ ನೀಡಿತು.. ಈ ಕುಶಿ ಎಲ್ಲರಲ್ಲೂ ಚಿರಕಾಲ ಉಳಿಯಲಿ ಎಂದು ಬಯಸುವೆ…………………………….!