ಬೆಳಗಿನಿಂದ ಎಲ್ಲೆಡೆ ಮೌನ, ಮೌನ, ಬರೀ ಮೌನವಷ್ಟೇ!!

ಡಿಸೆಂಬರ್ 26, 2011

ಈವತ್ತು ಮುಂಜಾನೆ 5 ಗಂಟೆಗೆ ಸರಿಯಾಗಿ ಅಲಾರಂ ಹೊಡೆದುಕೊಳ್ಳುವುದಕ್ಕೆ ಶುರು ಮಾಡಿತ್ತು, ರಾತ್ರಿ ನಿನ್ನೊಡನೆ ಜಗಳವಾಡಿ ಲೇಟ್ ಆಗಿ ಮಲಗಿದ್ದರಿಂದ ಈ ಚುಮು-ಚುಮು ಚಳಿಗೆ ಇನ್ನೊದಂಷ್ಟು ಹೊತ್ತು ಕಂಬಳಿಯೊಳಗೆ ಬೆಚ್ಚಗೆ ಮಲಗುವ ಆಸೆಯಾಗಿ, ಅದರೊಳಗೆ ನನ್ನನ್ನು ನಾ ಅಡಗಿಸಿಕೊಂಡು ಮಲಗಿದೆ. ಆದರೂ ಕೇಳಬೇಕಲ್ವಾ ಆ ಅಲಾರಂ ಮತ್ತೊಮ್ಮೆ ಎದ್ದೇಳಲೇಬೇಕೆಂದು ಹಠ ಹಿಡಿದು ಕುಳಿತಿತ್ತು.. [:(]. ಕಷ್ಟ ಪಟ್ಟು ನನ್ನ ಕಣ್ಗಳು ಅರಳಿ ದೇವರಿಗೆ ನಮಸ್ಕರಿಸಿ, ನೆನ್ನೆಯಾದ ವಿರಸವ ತಾಳಲಾರದೆ ಎಂದಿನಂತೆಯೇ ನಿನಗೆ “ಸಂಜೂ ಗುಡ್ ಮಾರ್ನಿಂಗ್” ಎಂದು ಮೆಸೇಜ್ ಮಾಡಿದೆ. ಇಂದು ಏಕೋ ಗೊತ್ತಿಲ್ಲ ಮುಂಜಾನೆಯೇ ಎದ್ದು ಟೆರೇಸ್ ಮೇಲೆ ಹೋಗಿ ಡಿಸೆಂಬರ್ ನ ಚಳಿಯ ಸೊಬಗನು ಅನುಭವಿಸಲು ಆಸೆಯಾಗಿ ಹೊರಬಂದರೆ ದಟ್ಟವಾದ ಮಂಜು ಎಲ್ಲೆಲ್ಲೂ ಹಬ್ಬಿತ್ತು. ಆ ಸೂರ್ಯ ಕೂಡ ಈ ಚಳಿಯ ಸಹಿಸಲಾರದೆ ಮಂಜಿನ ಹೊದಿಕೆಯೊಳಗೆ ಅಡಗಿ ಕುಳಿತಿದ್ದನ್ನು ಕಂಡು ನನ್ನಲಿ ನಾನೇ ನಕ್ಕು, ಮತ್ತೆ ಮೊಬ್ಯೆಲ್ ಬಳಿ ಕಣ್ಹಾಯಿಸಿದೆ, ಸದಾ ಟಕ್ ಅಂತ ಪ್ರತ್ಯುತ್ತರವ ಕೊಡುವ ನೀನು ಮೌನದರಮನೆಯಲ್ಲಿ ಬಂಧಿಯಾಗಿ ಕುಳಿತಿದ್ದೆ. ಇಂತಹ ಚಳಿಯನ್ನು ಅನುಭವಿಸಲಾರದೆಯೇ ಮೈ ಬಿಸಿಯಾಗಿ ಮನವು ನಿನ್ನ ನೆನಪುಗಳ ಅಂಗಡಿಗೆ ಧಾವಿಸಿತು. . ಎಷ್ಟೇ ಪ್ರಯತ್ನಿಸಿದರೂ ಈ ಅಂಗಡಿಯಿಂದ ಹೊರಬರಲಾರದೆಯೇ ಮತ್ತೊಂದು ಮೆಸೇಜ್ ಕಳುಹಿಸಿ ಶಬರಿಯಂತೆ ನಿನಗಾಗಿ ನಾ ಕಾಯುತ ಕುಳಿತೆ. ನಿನ್ನ ಮೌನ ನನ್ನ ಹೆದರಿಕೆಗೆ ದಾರಿ ಮಾಡಿಕೊಟ್ಟಿತ್ತು. ಹೋಗಲಿ ಎಂದು ಕರೆ ಮಾಡಲು ಹೊರಟರೆ, ಸಾವಿರಾರು ಪ್ರಶ್ನೆಗಳು ಕ್ಷಣಾರ್ಧದಲ್ಲಿ ನನ್ನ ಕಣ್ಣೆದುರಿಗೆ ಬಂದು ಯೋಚನೆಗಳ ಸುಳಿಯಲ್ಲಿ ಸಿಕ್ಕಿ ಮನವು ಒದ್ದಾಡತೊಡಗಿತ್ತು….

ಸಂಜು..ನೆನ್ನೆ ನಾ ನಿನ್ನೊಡನೆ ಜಗಳ ಆಡಿದ್ದು, ಈ ನಿನ್ನ ಮೌನಕ್ಕೆ ಕಾರಣವೇ? ದಿನ ಬೆಳಗ್ಗೆಯಾದರೆ ಈ ಸಮಯಕ್ಕೆ 3-4 ಬಾರಿ ಕರೆ ಮಾಡುತ್ತಿದ್ದೆ, ಆದರಿಂದು ನಿನಗೇನಾಗಿದೆ? ನೆನ್ನೆ ಆಗಿದುದಕ್ಕೆಲ್ಲಾ ಕಾರಣವೇನೆಂದರೆ, ನೀ ಮೊದಲಿನಂತೆ ಈಗ ನನ್ನ ಮೇಲೆ ಪ್ರೀತಿ ತೋರಿಸುತ್ತಿಲ್ಲ, ಗಂಟೆ-ಗಂಟೆಗೂ ಕರೆ ಮಾಡಿ ತಿಂಡಿ ಆಯ್ತಾ? ಊಟ ಆಯ್ತಾ? ಏನು ಮಾಡುತ್ತಿದ್ದೀಯಾ? ಐ ಲವ್ ಯೂ!! ಐ ಮಿಸ್ಸ್ ಯೂ!! … ಹೀಗೆಲ್ಲಾ ಹೇಳಿ ನನ್ನ ಹೃದಯ ಸಾಮ್ರಾಜ್ಯಕ್ಕೆ ಧಕ್ಕೆ ಇಟ್ಟೆ. ಬೇಡವೆಂದರೂ ಕೇಳದೆ ಪದೇ-ಪದೇ ನನ್ನ ನೋಡುವುದಾಗಿ ಮನೆಯ ಮುಂದೆ ಬಂದು ನನಗಿಷ್ಟವಾದ ಮಲ್ಲಿಗೆಯ ಹೂ ತಂದು ನಿಲ್ಲುತ್ತಿದ್ದೆ, ಜೊತೆಗೆ ಶುಭಾಶಯ ಪತ್ರ!! ಹೀಗೆ ಹತ್ತಾರು-ಹಲವಾರು ರೀತಿಯಲ್ಲಿ ನಿನ್ನ ಪ್ರೀತಿಯ ವ್ಯಕ್ತ ಪಡಿಸಿದೆ. ನಿನ್ನಿಂದ ಏನೂ ಬಯಸದ ನನಗೆ ನನ್ನ ಇಷ್ಟ-ಕಷ್ಟಗಳ ಅರಿತು ನನ್ನ ಬಾಳಿಗೆ ಬೆಳಕ ತಂದೆ. ಬೇಡವೆಂದರೂ ನಾ ಕುಡಿದಿಟ್ಟ ಕಾಫೀಯ ಕೊನೆಯ ಗುಟುಕಿನ ರುಚಿ ನೋಡಲು ಮುಂದಾಗುತ್ತಿದ್ದೆ. ಸದಾ ನನ್ನ ಮನ ಮೆಚ್ಚಿಸುವ ಸಾಹಸಕ್ಕೆ ಕೈ ಹಾಕಿ, ನಿನ್ನ ಅಂತರಂಗದ ಪುಟಗಳ ನನ್ಮುಂದೆ ತೆರೆದಿಡುತ್ತಿದ್ದೆ. ನಿನ್ನ ಮುದ್ದು-ಮುದ್ದಾದ ಮಾತುಗಳು, ನನ್ನನು ಗೌರವಿಸುವ ರೀತಿ, ನಿನ್ನ ನಿಶ್ಕಲ್ಮಶವಾದ ಪ್ರೀತಿಗೆ ಮಣಿದು ಆ ದಿನ ಆ ಕೃಷ್ಟನ ಸನ್ನಿಧಿಯಲ್ಲಿ ನಿನ್ನ ಪ್ರೀತಿಯ ಸ್ವೀಕರಿಸಿದೆ, ನಿದ್ರೆ ಬಾರದಿದ್ದಾಗ ಜೋಗುಳ ಹಾಡಲು ಬಾರದಿದ್ದರೂ , ಹಾಡಿ ಮಲಗಿಸುವ ಪರಿ, ಮಗುವಂತೆ ನನ್ನ ಬಗ್ಗೆ ಕಾಳಜಿ ವಹಿಸಿ ನೋಡಿಕೊಳ್ಳುವ ಮನೋಭಾವ ಇವೆಲ್ಲದಕ್ಕೂ ಸೋತು ನಿನ್ನ ಪ್ರೀತಿಯ ಮಡಿಲಲ್ಲಿ ನಾ ಬೆಚ್ಚಗೆ ಮಲಗಿದ್ದೆ. ಆದರಿಂದು ನೀ ಏಕೆ ನಮ್ಮ ಸುಂದರ ಪ್ರಪಂಚದಿಂದ ಒಂದೊಂದೇ ಹೆಜ್ಜೆಗಳ ಹಿಂದೆಗೆಯುತ್ತಿದ್ದೀಯಾ? ನಾ ಅಂತಹ ತಪ್ಪೇನನ್ನು ಮಾಡಿದೆ ಸಂಜೂ??

ನಿನ್ನ ಪ್ರೀತಿ ಮಾತುಗಳು, ನಾ ಸೋತಾಗ ನನ್ನಲ್ಲಿ ತುಂಬಿದ ಧೈರ್ಯ, ಮುಂದಿನ ಜೀವನ ಸಾಗಿಸಲು ನೀಡಿದ ಪ್ರೋತ್ಸಾಹ ಎಲ್ಲವೂ ನನ್ನ ಕಣ್ಮುಂದೆ ಬಂದು ಹಿಂಸಿಸುತಿವೆ. ಆ ದಿನ ತೋರಿದ ಕಾಳಜಿ, ಪ್ರೀತಿ, ವಾತ್ಸಲ್ಯ, ಮಮತೆ ಎಲ್ಲವೂ ಈಗ ಶೂನ್ಯವಾಗಿ ನನ್ನ ಕಾಡುತಲಿದೆ. ನಿಜ ನಾ ಎಂದೂ ಖುಷಿ ಕಾಣದಷ್ಟು ನೀ ನನಗೆ ಖುಷಿಯ ನೀಡಿದ್ದೀಯ? ಸಂತೋಷ  ಎಂದರೇನೆಂಬುದನ್ನು ಅದರ ಶಿಖರವನೇರಿಸಿ ತೋರಿಸಿದ್ದೀಯ. ಇದಕ್ಕೆ ನಾ ನಿನಗೆ ಚಿರ ಋಣಿ. ನಿನ್ನ ಹಾಲ್ಜೇನಿನಂತಹ ಪ್ರೀತಿಯ ಕಡಲಲ್ಲಿ, ಬಾಳೆಂಬ ತೆಪ್ಪದ ಮೇಲೆ ಕುಳಿತು, ನೀ ಕರೆದ ಕಡೆ ನಾ ಸಾಗುತಲಿದ್ದೆ.. ನಾ ನಕ್ಕರೆ ನಿನಗದೇ ಉಲ್ಲಾಸ, ನಾ ಅತ್ತಾಗ ನನ್ನ ಧ್ವನಿ ಕೇಳದೆಯೇ ನನ್ನ ನೋವನ್ನು ಅರಿತು ಸಮಾಧಾನಿಸುತ್ತಿದ್ದ ನಿನ್ನ ಮನಸ್ಸು ಇಂದು ನಾ ಬಿಕ್ಕಿ-ಬಿಕ್ಕಿ ಅಳುತ್ತಿದ್ದರೂ ಕೇಳಿಸದೆ ಸುಮ್ಮನೆ ಕುಳಿತಿರುವೆ ಏಕೆ? ನಿನ್ನ ನೆನೆಪಿನಲೆಗಳು ಬಂದು-ಬಂದು ನನ್ನೆಡೆಗೆ ಅಪ್ಪಳಿಸುತಲಿವೆ. ಆ ದಿನ ಸಂತೋಷದ ಶಿಖರದಲ್ಲಿ ಕುಳಿತಿದ್ದ ನಾನು ಇಂದು ಆ ಶಿಖರದ ಹೊಸ್ತಿಲ ಬಳಿ ನಿನ್ನ ಪ್ರೀತಿಯ ಭಿಕ್ಷೆಯ ಬೇಡುತಲಿರುವೆ… ಹೇಳು ಮತ್ತೆ ನನ್ನ ಬಾಳಿಗೆ ಆ ಸುಂದರ ಕ್ಷಣಗಳ ತರುವೆಯಾ? ನಿನ್ನ ಪ್ರೀತಿ ಪಲ್ಲಕ್ಕಿಯಲಿ ನನ್ನ ಕುಳ್ಳಿರಿಸಿಕೊಂಡು ಹೋಗುವೆಯಾ? ನಿನ್ನೊಡನೆ ಮೂರು ದಿನ ಬಾಳಿ ತೃಪ್ತಿ ಪಡಲು ಅವಕಾಶವ ಕಲ್ಪಿಸಿಕೊಡುವೆಯಾ? ನಿನ್ನ ಮಡಿಲಲ್ಲಿ ಬೆಚ್ಚಗೆ ಮಲಗಲು ಸಮ್ಮತಿ ನೀಡುವೆಯಾ? ಐ ಮಿಸ್ಸ್ ಯೂ ಸಂಜೂ, ತುಂಬಾನೆ …

ಸಂಜೂ ನನ್ನ ಮನದಲ್ಲಿ ಇಷ್ಟೆಲ್ಲಾ ಪ್ರಶ್ನೆಗಳ ಸುರಿಮಳೆ ಹಾದು ಹೋದರೂ ಇನ್ನೂ ನಿನ್ನ ಮೊಬೈಲ್ ರಿಂಗ್-ರಿಂಗ್ ಆಗುತಲಿದೆ. ಎಲ್ಲಿ ಕಳೆದುಹೋಗಿರುವೆ ಸಂಜೂ…ಈ ಮೌನದರಮನೆಯ ಹೇಗೆ ಹೊಕ್ಕಿ ಬರಲಿ ನಾ ನಿನ್ನೆಡೆಗೆ? ಈ ದಿನ ನಿನ್ನ ಗೆಳತಿ ನಿನ್ನ ಪ್ರೀತಿಗೆ ಅಂಗಲಾಚಿ ಪರಿತಪಿಸುತಲಿದ್ದರೂ ನಿನಗೆ ಕೇಳಲಾದೀತೇ? ಒಮ್ಮೆಯೂ ಬಿಕ್ಕಿ ಅಳದ ನಾನು ಇಂದು ನನ್ನ ರೂಮಿನ ಕೋಣೆಯಲಿ ಮೂಲೆಯೊಳಗೆ ಕುಳಿತು, ಕೊರಗುತಲಿರುವೆ.. ನಿನಗಾಗಿ… ನಿನಗಾಗಿ ಮಾತ್ರ… ದಯವಿಟ್ಟು ಕರೆ ಮಾಡು. ನನ್ನ ತಪ್ಪುಗಳ ಕ್ಷಮಿಸಿ ನನ್ನ ಬಳಿ ಬಾ .. ಪ್ಲೀಜ್… ನಿನ್ನ ನಿರೀಕ್ಷೆಯಲ್ಲಿ ಕಾಯ್ತಾಯಿದ್ದೇನೆ ಸಂಜೂ… ಮತ್ತೊಮ್ಮೆ ಬಾ……………….!!!!!!

ನಿನ್ನ ಕುರಿತು..

ಜನವರಿ 1, 2013

sangaathi

 

 

 

 

*ನಿನ್ನ ಮಡಿಲ ತೊಟ್ಟಿಲಲ್ಲಿ

ನಾ ಮುದ್ದಾಗಿ ಮಲಗಿರುವ ಕಂದಮ್ಮ

*ನಾ ಆ ತಾರೆ ನೋಡಿ ಆಸೆಪಟ್ಟೆ

ನೀ ತಂದುಕೊಟ್ಟುಬಿಟ್ಟೆ.

*ವಿಶಾಲವಾದ ಹ್ರದಯವೆಂಬ ಆಗಸಕೆ

ಪ್ರೀತಿಯ ಬೆಳಕ ನೀಡಿದ ಆ ಆದಿ.

*ಇಂದು ನೀ ನಗುವಿನ ಕಡಲಿನ ಪಯಣಿಗ

ಅದಕಾಗಿ ವಸಂತಗಳು ದೇವರಲ್ಲಿ ಬೇಡಿದ್ದೆ

ಇದೆಂತ ಸೋಜಿಗ

*ನೀ ನನ್ನ ಸನಿಹವಿದ್ದ ಕ್ಷಣಗಳೆಲ್ಲಾ

ಬಾಳು – ಬಣ್ಣ-ಬಣ್ಣದ ಹೂಗಳಿಂದ ಅಲಂಕಾರಗೊಂಡ

ಅಂಗಳ!!

ಪ್ರೇಮಿಗಳ ದಿನಕ್ಕಾಗಿ ಹನಿಯಿತು ಹನಿಗಳು

ಫೆಬ್ರವರಿ 12, 2012

*ಕನಸಿನ ಚಿತ್ತಾರ ಲೋಕದಲ್ಲಿ ಕಂಡಿದ್ದು

ಬರೀ ಅವನ ಬಿಂಬ ಮಾತ್ರ

 

*ಆ ದೇವರೂ ಅಷ್ಟೆ ನಿನ್ನ ತರಹ!!

ನನ್ನ ಎಲ್ಲಾ ಪ್ರಶ್ನೆಗಳಿನ್ನೂ

ಪ್ರಶ್ನೆಗಳನ್ನಾಗಿಯೇ ಉಳಿಸಿದ ಮೂಖ!!

 

*ಅವನ ಪುಟ್ಟ ಮಡಿಲು

ನನಗೆ ತೂಗುವ ತೊಟ್ಟಿಲು.

 

* ಆ ಕದ್ದಿರುವ ಮುತ್ತುಗಳಿಗೂ

ಆಕಾಶದಲ್ಲಿರುವ ಚುಕ್ಕಿಗಳಿಗೂ

ಏನು ವ್ಯತ್ಯಾಸ?

 

*ನಿನ್ನೆದೆಗೊರಗಿದಾಗಲೇ ತಿಳಿದಿದ್ದು

ಇದೇ ಸರ್ವಸ್ವವೆಂದು!

 

*ನಿನ್ನ ಪ್ರೇಮದೋಟದಲ್ಲಿ

ನಾ ಚಿಮ್ಮಿದ ಕಾರಂಜಿ.

 

*ನಾ ಆ ತಾರೆ ನೋಡಿ ಆಸೆಪಟ್ಟೆ

ನೀ ತಂದುಕೊಟ್ಟುಬಿಟ್ಟೆ.

 

*ನೀ ನನ್ನ ಸನಿಹವಿದ್ದ ಕ್ಷಣಗಳೆಲ್ಲಾ

ಬಾಳು – ಬಣ್ಣ-ಬಣ್ಣದ ಹೂಗಳಿಂದ

ಅಲಂಕಾರಗೊಂಡ ಅಂಗಳ!!

ಚಳಿಗಾಲದಲ್ಲಿ ಉದುರಿದ ಹನಿಗಳು

ಫೆಬ್ರವರಿ 5, 2012

* ಹಾಗೆ ಸುಮ್ಮನೆ ನಿನ್ನ ನೋಡಿದೆ..

ಪ್ರೇಮದ ಕಡಲನ್ನೇ ನೀ ತಂದು ಕೊಟ್ಟುಬಿಟ್ಟೆ.

 

* ಅತ್ತ ಪ್ರಳಯವಾಗಿತ್ತು

ಇತ್ತ ಆಸೆಗಳು ಉಸಿರಾಡುತ್ತಿತ್ತು.

 

* ಕಣ್ಮುಚ್ಚಿ ಕಣ್ಣು ತೆರೆಯುವುದೊರೊಳಗಾಗಿ

ಮುತ್ತಿಟ್ಟು …ಮರೆಯಾಗಿ..

ತನ್ನ ಕೆಲಸದಲ್ಲಿ ಮಗ್ನನಾಗಿದ್ದ!!

 

* ನಿದ್ರಾದೇವತೆ ಒಲಿಯಲಿಲ್ಲ

ಎಂದು ಕುಳಿತಾಗ ಒಲಿದಿದ್ದು

ಸ್ವಾತಿಮುತ್ತಿಗಾಗಿ ನೂರಾರು ಹನಿಗಳು.

 

* ಒಂದೆಡೆ ಕಡುಗತ್ತಲು ತುಂಬಿತ್ತು…

ಬೆಳಕಿನ ಕಿರಣಗಳು

ಅದನ್ಮುರಿಯಲು ಹೊಂಚು ಹಾಕುತ್ತಿದ್ದವು.

* ನೀನು……

ನೆನೆಪುಗಳಿಗೆ ತೀರ ಹ-ತ್ತಿ-ರ.

 

* ಸಮೀಪದ ಕಡಲಿನಲ್ಲಿ

ನಿನ್ನ ನೆನೆಪುಗಳನ್ನು

ಬಿಟ್ಟು ಬರಲು ಹೋಗಿದ್ದೆ..

 

 

ನೆನಪು

ಏಪ್ರಿಲ್ 24, 2011

ಏಕಿಂದು ನಿನ್ನ ನೆನಪುಗಳು ನನ್ನ ಮನದ ದಡಕೆ

ರಾಶಿ-ರಾಶಿಯಾಗಿ ಬಂದು ಸಾಗುತಿವೆ …?

ಮರೆತಿಹೆನು ಎಂದುಕೊಂಡದ್ದೆಲ್ಲಾ

ಸಾಗರದಂತ್ಯದಲಿ ಚುಕ್ಕಿಗಳಂತೆ ಹೊಳೆಯುತಿವೆ…!

ಆ ಚಂದಿರನ ಮೊಗದಲ್ಲಿ

ನೀ ಏಕೆ ಕಂಡಿರುವೆ …?

ಇಷ್ಟು ದಿನಗಳ ಬಳಿಕ ಎಲ್ಲಿಂದ ಬಂದಿವೆ

ಈ ನೆನಪುಗಳ ಅಬ್ಬರ ನನ್ನ ಮನದ ದಡಕೆ ….?

**** ಕೆಲವು ತಿಂಗಳುಗಳಿಂದ ಸ್ವಾತಿಮುತ್ತಿಗೆ ಬೀಗ ಹಾಕಿ ಹೋಗಿದುದಕ್ಕಾಗಿ ಎಲ್ಲಾ ಓದುಗರಿಗೂ ಮೊದಲು ಕ್ಷಮೆಯಾಚಿಸುತ್ತಾ , ಮತ್ತೆ ಸ್ವಾತಿಮುತ್ತಿನಂಗಳಕೆ ನೆನಪನ್ನು ಮೊದಲಿಗೆ ಹಾಸಿ… ಮುಂದೆ ಸಾಗೋಣ ಎಂದು ತೀರ್ಮಾನಿಸಿ ಈ ಮೇಲಿನ ಸಾಲುಗಳನ್ನು ಬರೆದಿದ್ದೇನೆ…  ಎಲ್ಲರೂ ಹಿಂದಿನಂತೆಯೇ ಈಗಲೂ ನನ್ನ ಪ್ರೋತ್ಸಾಹಿಸಿ ಸ್ವಾತಿಮುತ್ತನ್ನು ಮೆಚ್ಚುತ್ತೀರಿ ಎಂದು ನಂಬಿದ್ದೇನೆ….. ಧನ್ಯವಾದಗಳು.

-ಇಂಚರ

ಸ್ವಾತಿಮುತ್ತಿನ ಹುಟ್ಟುಹಬ್ಬ

ಜನವರಿ 6, 2010

ಅಬ್ಬಾ! ಹಾಗೂ-ಹೀಗೂ ಅನ್ನುವಷ್ಟರಲ್ಲಿ ನನ್ನ ಸ್ವಾತಿಮುತ್ತಿಗೆ ಇಂದಿಗೆ ಒಂದು ವರುಷ ತುಂಬಿ ಬಿಟ್ಟಿದೆ. ದಿನಗಳು ಹೋದದ್ದೇ ಗೊತ್ತಾಗಲಿಲ್ಲ… ಮೊದಲ ಬಾರಿಗೆ ರಂಜಿತ್ ಅಣ್ಣನ ಬ್ಲಾಗು ನನ್ನನ್ನು ಆಕರ್ಷಿಸಿತು…. ಆಗಲಿಂದಲೂ ನನ್ನದೊಂದು ಬ್ಲಾಗು ತೆರೆಯುವ ಆಸೆ ಚಿಗುರತೊಡಗಿತು. ರಂಜಿತ್ ಅಣ್ಣ, ಸೋಮು ಇಬ್ಬರೂ ನನ್ನ ಬ್ಲಾಗನ್ನು ಕಟ್ಟಿ ಅಲಂಕರಿಸಿ ಕೈಗಿಟ್ಟರು… ಮುಂದಿನ ಜವಬ್ದಾರಿ ನನಗೆ ಶುರುವಾಯಿತು ನೋಡಿ…. ಮೊದಲಿಗೆ ಹೇಗೆ, ಏನು, ಎತ್ತ ಗೊತ್ತಿರಲಿಲ್ಲ…..ನಾ ಬರೆದ ಲೇಖನ, ಕವಿತೆಗಳಿಗೆ ಜೀವ ತುಂಬುವ ಪ್ರಯತ್ನ ಸರಾಗವಾಗಿ ಸಾಗುತ್ತಲೇ ಇತ್ತು… ನಿಮ್ಮೆಲ್ಲರ ಮನ ಮುಟ್ಟುವ ಹಾಗೆ ಬರೆದಾಗ ನನ್ನನ್ನು ಪ್ರೋತ್ಸಾಹಿಸಿ, ಹರಸಿದ್ದೀರಿ. ಎಡವಿದಾಗ ನನಗೆ ಕೈ ಜೋಡಿಸಿ ಸರಿ ದಾರಿಗೆ ಕರೆದು ನಡೆಸಿದ ಹಲವರಿಗೆ ನಿಜಕ್ಕೂ ನನ್ನ ತುಂಬು ಹೃದಯದ ಧನ್ಯವಾದಗಳು…. ಇಷ್ಟು ದಿನ ಬರೆದುದಕ್ಕಿಂತ ವಿಶೇಷವಾಗಿರುವುದನ್ನೇನಾದರೂ ಬರೆಯಿರಿ ಎಂದು ಬ್ಲಾಗಿನ ಗೆಳೆಯರು ಹೇಳಿದಾಗ ತಲೆ ಕೆಡಿಸಿಕೊಂಡು ಕುಳಿತಿದ್ದೆ..ಆಗ ನನ್ನ ಮನಸ್ಸಿಗೆ ಹೊಳೆದದ್ದು ಹನಿಗಳು ಬರೆಯುವ ಆಸೆ…. ಹೇಗೆ ಬಂತೋ ಗೊತ್ತಿಲ್ಲ.. ಅಂದುಕೊಳ್ಳುತ್ತಿದ್ದಂತೆ ಕೂತಿದ್ದಲ್ಲಿಯೇ ೨೦ ಹನಿಗಳನ್ನು ಒಂದಾದ ನಂತರ ಒಂದನ್ನು ಬರೆಯುತ್ತಾ ಹೋದೆ.. ಆ ಅನುಭವ ಅವಿಸ್ಮರಣೀಯವಾದುದು… ಸಾಧ್ಯವಾದಷ್ಟು ನಿಮ್ಮನ್ನೆಲ್ಲಾ ಮೆಚ್ಚಿಸುವ ಪ್ರಯತ್ನ ಮಾಡಿದ್ದೇನೆ… ಮುಂದೆಯೂ ಸದಾ ನಿಮನ್ನೆಲ್ಲಾ ರಂಜಿಸುವ, ಮನಕೆ ಮುದ ನೀಡುವ, ನಿಮ್ಮೆಲ್ಲರ ಹೃದಯದ ಕದವ ಮುಟ್ಟುವ ಬರವಣಿಗೆಗಳನ್ನು ನಿಮ್ಮ ಮುಂದೆ ಇಡುತ್ತೇನೆ… ಆದರೆ ಅದಕ್ಕೆ ನಿಮ್ಮೆಲ್ಲರ ಆಶೀರ್ವಾದ, ಸಲಹೆಗಳು ಅಗತ್ಯವಾಗಿ ನೀಡಿ , ಪ್ರೀತಿಯಿಂದಲೇ ನಿಮ್ಮ ಸಲಹೆಗಳನ್ನು ಸ್ವೀಕರಿಸಿ ಸ್ವಾತಿಮುತ್ತಿನ ಎದೆಯ ಚಿಪ್ಪಲಿ ಇನ್ನಷ್ಟು ಭಾವಗಳ ಇಬ್ಬನಿಯನ್ನು ಉದುರಿಸುವ ಯತ್ನ ಮಾಡುತ್ತೇನೆ.ಎಲ್ಲರಿಗೂ ಅನಂತ ಅನಂತ ಧನ್ಯವಾದಗಳು. ಏನಪ್ಪ ಮಾತಿನಲ್ಲೇ ಹುಟ್ಟು ಹಬ್ಬದ ಆಚರಣೆ ಮುಗಿಸಿ ಬಿಟ್ಟಳು ಅಂತ ದಯಮಾಡಿ ಅಂದುಕೊಳ್ಳಬೇಡಿ.. ಮುಂದೆ ನಾ ನಿಮಗಾಗಿ ಓದಲು ನೀಡುವ ನನ್ನ ಬರಹಗಳಲ್ಲಿ ಸಿಹಿಯನ್ನು ತುಂಬಿ ಕೊಡುವೆ.. ಸ್ವೀಕರಿಸುವುದು ಬಿಡುವುದು ನಿಮಗೆ ಬಿಟ್ಟಿದ್ದು…. ಆದರೂ ನಿಮಗೆಲ್ಲರಿಗೂ ತುಂಬು ಹೃದಯದ ಸ್ವಾಗತ ನೀಡಲು ನಾ ಸದಾ ಸಿದ್ದಳಾಗಿರುತ್ತೇನೆ….  ಮತ್ತೆ ಬನ್ನಿ….

ನಿಮ್ಮ ಪ್ರೀತಿಯ,

ಇಂಚರ(ಸ್ವಾತಿಮುತ್ತು)

ಏನುಂದ್ರೆ, ನಿಮ್ಮೊಡನೆ ನನ್ನ ಒಂದು ಸವಿ-ಸವಿ ನೆನಪನ್ನು ಹಂಚಿಕೊಳ್ಳುವ ಆಸೆ ಆಗ್ತಿದೆ ಕಣ್ರೀ….

ಡಿಸೆಂಬರ್ 28, 2009

ಚಿರು.., ಆ ದಿನ ನಿಮಗೆ ನೆನಪಿದೆಯಾ? ಅದೇ ನೀವು ನನ್ನನ್ನು ನೋಡಲು ಎರಡನೇ ಸರತಿ ನಮ್ಮ ಮನೆಗೆ ಬಂದಿದ್ದೆರಲ್ಲವಾ…? ಆ ದಿನ ನೀವೇನೋ ಫೋನ್ ಮಾಡಿ ಬರುವುದಾಗಿ ತಿಳಿಸಿದಿರಿ, ಆ ವಿಷಯ ನನಗೆ ಅದ್ಯಾವ ಕ್ಷಣದಲ್ಲಿ ತಿಳಿಯಿತೋ…ಮನಸ್ಸು  ಒಳಗೊಳಗೆಯೇ ಕುಣಿದಾಡತೊಡಗಿತು, ಆಗ ತಾನೆ ಆಫೀಸಿನಿಂದ ಬಂದಿದ್ದರೂ ಎಲ್ಲಾ ಆಯಾಸವೂ ಕರಗಿಹೋಯಿತು, ಹೃದಯದ ಬಡಿತ ಏರಿಳಿತಗಳ ನಡುವೆ ಸಿಲುಕಿ ಒದ್ದಾಡುತ್ತಿತ್ತು, ಒಂದೆಡೆ ನಿಮ್ಮನ್ನು ನೋಡುವ ಆತುರ-ಕಾತುರ, ಇನ್ನೊಂದೆಡೆ ನೂರಾರು ಪ್ರಶ್ನೆಗಳ ಸುರಿಮಳೆ ನನ್ನನ್ನು ಕಾಡತೊಡಗಿತು…. ತಕ್ಷಣ ಅಮ್ಮನ ಬಳಿಗೆ ಹೋಗಿ ಅಮ್ಮ…… ಯಾವ ಸೀರೆ ಉಟ್ಟರೆ ಚೆಂದ? ತಿಳಿ ನೀಲಿ ಬಣ್ಣದ ಸಣ್ಣ ಅಂಚಿರುವ ಸೀರೆಯ ಉಡುವುದೋ ಅಥವಾ ಕಿತ್ತಲೆ ಬಣ್ಣದ ಸಣ್ಣ-ಸಣ್ಣ ಹೂಗಳಿರುವ ಆ ಸೀರೆಯ ಉಡುವುದೋ? ಇದಕ್ಕೆ ಮುತ್ತಿನಿಂದ ಪೋಣಿಸಿರುವ ಆ ಸರ ಚೆಂದವಾಗಿರುತ್ತದೋ ಅಥವಾಸಣ್ಣ ಎಳೆಯ ಚಿನ್ನದ ಈ ಸರ ಚೆಂದವಾಗಿರುತ್ತದೋ….? ಎಂದು ಬಿಡುವಿಲ್ಲದೆ ಕೇಳುವ ನನ್ನ ಪ್ರಶ್ನೆಗಳಿಗೆ ಅಮ್ಮ ಸಹನೆಯಿಂದಲೇ.. ” ತಿಳಿ ನೀಲಿ ಬಣ್ಣದ ಸೀರೆಗೆ ಮುತ್ತಿನ ಹಾರ ನಿನಗೆ ಚೆನ್ನಾಗಿ ಒಪ್ಪುತ್ತದೆ… ನನ್ನ ಭಾವಿ ಅಳಿಯನಿಗೂ ಅದು ಇಷ್ಟವಾಗುತ್ತದೆ ನೋಡುತ್ತಿರು…” ಎಂದು ಹೇಳಿ ಅಡುಗೆ ತಯಾರಿ ಮಾಡಲು ಬರುವುದಾಗಿ ಹೇಳಿದರು….

ಅಮ್ಮ ಹೇಳುತ್ತಿದ್ದ ರೀತಿಯಲ್ಲೇ ಕ್ರಮವಾಗಿ ಅಡುಗೆ ಮಾಡುವಾಗಲೂ ಕೇವಲ ನಿಮ್ಮದೇ ಚಿಂತನೆಗಳು ಮನದ ಸಾಗರದಲ್ಲಿ ಹೊಯ್ದಾಡುತ್ತಿತ್ತು. ಆ ಚಿಂತನೆಯ ಹಿಂದೆ ನೂರಾರು-ಆಸೆ ಕನಸುಗಳ ಆಶಾಗೋಪುರವಿತ್ತು.. ಸುಂದರವಾದ ಭವಿಷ್ಯವ ಕಟ್ಟುವ ಆಸೆಯಿತ್ತು… ಈ ಚಿಂತನೆಗಳಿಂದ ಹೊರಬರುಷ್ಟರೊಳಗೆ ಸಣ್ಣದಾಗಿ ಬಿಸಿ ಕೈಗೆ ತಾಗಿ ವಾಸ್ತವ ಪ್ರಪಂಚಕ್ಕೆ ಬರಲು ಅನುವು ಮಾಡಿಕೊಟ್ಟಿತು. ಇನ್ನೊಂದು ಸಂತಸವೆಂದರೆ ಮೊದಲನೇ ಬಾರಿ ನಾ ಕಯ್ಯಾರೆ ನಿಮಗಾಗಿ ಅಡಿಗೆ ಮಾಡತೊಡಗಿದ್ದೆ. ನಾವು ನಮಗೆ ತುಂಬಾ ಹತ್ತಿರವಾದ ಅದರಲ್ಲೂ ನನ್ನ ಭಾವಿ ಬಾಳಸಂಗಾತಿಗೆ ಸ್ವತಃ ನಾನೇ ಕಯ್ಯಾರೆ ಮಾಡಿದ ಅಡಿಗೆಯ ರುಚಿ ತೋರಿಸುವ ಪುಣ್ಯ ನನಗೆ ಆ ದಿನ ಸಿಕ್ಕಿತ್ತು.ಅಡುಗೆ ಮಾಡಿ ಮುಗಿಸುವುದರೊಳಗಾಗಿ ಅದೆಷ್ಟು ಬಾರಿ “ಅಮ್ಮ ಅವರಿಗೆ ಈ ತಿಂಡಿ ಇಷ್ಟವಾಗುತ್ತೋ ಇಲ್ಲವೋ….???” ಎಂದು ಪದೇ-ಪದೇ ನಾ ಹೇಳುವುದನ್ನು ಗಮನಿಸಿ..ಅವರು ಒಳಗೊಳಗೆಯೇ ನಗುತ್ತಿದ್ದರು. ನಾನು ಅಂದು ಮೊದಲನೆಯ ಬಾರಿ ಅಷ್ಟು ಸಂಭ್ರಮದಿಂದ ಅಡಿಗೆ ಮಾಡಿ ಮುಗಿಸಿದ್ದೆ.ಈ ಎಲ್ಲಾ ಸಂಭ್ರಮ, ಆತುರ, ಕಾತುರಗಳ ನಡುವೆ ಬಾಯಿ ತಪ್ಪಿ ಅಮ್ಮನೆದುರಿಗೆಯೇ, “ಚಿರು ನಿಮಗೆ ನನ್ನ ಕೈ ರುಚಿ ಇಷ್ಟವಾಗುತ್ತದೆಯಲ್ಲವೇ..?” ಎಂದು ಹೇಳಿ ತುಟಿ ಕಚ್ಚಿಕೊಂಡ ನೆನಪು ಈಗಲೂ ಅವಿಸ್ಮರಣೀಯ.

ಅಲ್ಲಿ ಕೆಲಸ ಮುಗಿಸಿ ಅಂಗಳದಲ್ಲಿ ಗಾಜಿನ ಟೇಬಲ್ ಮೇಲೆ ಸುಂದರವಾದ ಹೂಗುಚ್ಚವನಿರಿಸಿ ಅಂಗಳವನ್ನೆಲ್ಲಾ ಸ್ವಚ್ಚ ಮಾಡಿ, ಮೊಗದ ಮೇಲೊಂದಷ್ಟು ನೀರ ಹನಿಗಳನ್ನು ಚುಮುಕಿಸಿ ತಿಳಿ ನೀಲಿ ಬಣ್ಣದ ಸೀರೆಯ ಉಟ್ಟು, ಮುತ್ತಿನ ಹಾರವ ತೊಟ್ಟು, ಮಲ್ಲಿಗೆ ಹೂವ ಮುಡಿದು ಕನ್ನಡಿಯ ಮುಂದೆ ಬಂದು ನಿಂತಾಗ, ಮೊದಲ ಬಾರಿ ನನ್ನ ಪ್ರತಿಬಿಂಬವನ್ನು ನೋಡಿ  ಸ್ವತಃ ನಾನೇ ನಾಚಿಕೊಂಡೆ!

ಆ ದಿನ..ಅಚ್ಚರಿಯೆಂದರೆ ನೀವೂ ಸಹಾ ತಿಳಿ ನೀಲಿ ಬಣ್ಣದ ಶರ್ಟಿನಲ್ಲಿ ತುಂಬಾ ಅಂದವಾಗಿ ಕಾಣುತ್ತಿದ್ರಿ. ನೀವು ಬಂದು ನನ್ನ ಎದುರಿಗೆ ಕುಳಿತರೂ ಒಂದು ಮಾತು ಸಹಾ ನನ್ನ ಬಾಯಿಂದ ಬರದೇ ನನ್ನ ಸ್ವರ ಸಂತಸದ ಬಂಗಲೆಯಲ್ಲಿ ಬೀಗ ಹಾಕಿಕೊಂಡು ಕುಳಿತುಬಿಟ್ಟಿತ್ತು… ನಮ್ಮಿಬ್ಬರ ನಡುವಿನ ಸಂಭಾಷಣೆ  ಕೇವಲ ಕಣ್ಣುಗಳಿಂದಲೇ ನಡೆದಿತ್ತು.. ನಾ ಮಾಡಿದ್ದ ಅಡುಗೆಯಲ್ಲಿ ಅದೆಷ್ಟು ಪ್ರೀತಿ ತುಂಬಿತ್ತು, ಅದು ನನಗೆ ಮಾತ್ರವಲ್ಲ ಅಂದು ನಿಮಗೂ ತಿಳಿಯಿತು.. ಆ ದಿನ ನಿಮ್ಮ ನಗುವಿನಲ್ಲೇ ಇಡೀ ಭವಿಷ್ಯದ ಸುಂದರ ದಿನಗಳ ಛಾಯೆ ನನ್ನ ಕಣ್ಣ ಮುಂದೆ ಹಾದು ಹೋಗಿತ್ತು. ನೀವು ಕೊನೆಯಲ್ಲಿ ಹೋಗಿ ಬರುವುದಾಗಿ ತಿಳಿಸಿದಾಗ ಏನೋ ಒಂದು ರೀತಿಯ ದುಃಖ, ಬೇಜಾರು… ಅಗಲಿಕೆಯ ನೋವು ಮನಸ್ಸನ್ನು ಕಾಡತೊಡಗಿತ್ತು…………………………………

ನಾ ಅಂದು ಕಂಡಿದ್ದ ಸುಂದರ ಭವಿಷ್ಯದ ಛಾಯೆಯನ್ನು ಇಂದು ನೀವು ನೈಜವಾಗಿ ನನಗೆ ಧಾರೆಯೆರೆದಿದ್ದೀರಿ.. ಅದಕ್ಕೆ ನಮ್ಮ ಈ ಸ್ವಾತಿಮುತ್ತಿನಂತಹ ಪ್ರೀತಿಯೇ ಸಾಕ್ಷಿ.. ಇಂದು ನಿಮ್ಮ ಮಡಿಲಲ್ಲಿ ಮಲಗಿರುವ ನನ್ನನ್ನು ಮಗುವಿನಂತೆ ಸಲಹಿ, ನನ್ನ ಕೇಶ ರಾಶಿಯ ನೇವರಿಸುತ್ತಾ ಮಲಗಿಸುತ್ತಿರುವ ನಿಮ್ಮ ಈ ಪರಿಯ ಪ್ರೀತಿಗೆ ನಾನೆಂದೂ ಆಭಾರಿ!…

ಚಿರು,ಇಂದು ನಿಮ್ಮ ಕೈ ಹಿಡಿದು ಭಾಷೆ ನೀಡುತ್ತಿದ್ದೇನೆ… “ಕಾಯಾ, ವಾಚಾ, ಮನಸಾ ಒಪ್ಪಿ ಮದುವೆಯಾಗಿ ಅರಳಿಸಿರುವ ಈ ಪ್ರೀತಿಯನ್ನು…ನನ್ನ ಬಾಳ ಸಂಗಾತಿ-ಅರ್ಧಾಂಗಿ ಯಾಗಿರುವ ನಿಮ್ಮನ್ನು ನನ್ನ ಕಣ್ಣ ರೆಪ್ಪೆಯೊಳಗೆ ಬಂಧಿಸಿ .. ಪ್ರೀತಿಯರ ರಂಗನ್ನು ಚೆಲ್ಲಿರುವ ನನ್ನ ಹೃದಯದಂಗಳದೊಳಗೆ ನಿಮ್ಮನ್ನಿಟ್ಟು ಪೂಜಿಸುವೆ…ಪ್ರೀತಿಸುವೆ….. ಆರಾಧಿಸುವೆ……….”

ಸ್ವಾತಿಮುತ್ತಿನ ಜಲಪಾತದೊಳಗೆ ಕತ್ತಲು-ಬೆಳಕಿನ ಪುನರ್ಜನ್ಮ

ಡಿಸೆಂಬರ್ 11, 2009

ಕತ್ತಲು

ಅವಳ ಮನಸ್ಸಿಗೆ

ಅದೆಂತಹ ವಿಚಿತ್ರವಾದ

ಕಾರ್ಮೋಡ ಕವಿದಿತ್ತೆಂದರೆ

ಬಿರುಬಿಸಿಲು ಮನೆಯಂಗಳಕ್ಕೆ ನುಗ್ಗಿ

ರಾಜ್ಯಭಾರ ನಡೆಸುತ್ತಿದ್ದರೂ

ಮನೆ ತುಂಬ ದೀಪ ಹಚ್ಚಿ

ಶೂನ್ಯದತ್ತ ತಲೆಮಾಡಿ ಚಿಂತಿಸುತಿಹಳು.

ಅಮಾವಾಸ್ಯೆ

ಚಂದಿರನು ಭುವಿಯನ್ನು

ನೋಡುವ ತವಕದಲ್ಲಿ

ಬರುವಾಗ…..

ತನ್ನ ಬೆಳಕನ್ನೇ ಹೊತ್ತು

ತರುವುದನ್ನು ಮರೆತನು.

ಪುನರ್ಜನ್ಮ

ಎಲ್ಲೋ ನೋಡಿರುವಂತೆ

ಎಲ್ಲೋ ಆಡಿರುವಂತೆ

ಎಲ್ಲೋ ಈ ಮಧುರ ಧ್ವನಿಯ ಕೇಳಿರುವಂತೆ

ಎಂದೋ ಒಂದೇ ದೋಣಿಯ ನಾವಿಕರಾಗಿದ್ದಂತೆ

ಭಾಸವಾಯಿತು ನಿನ್ನ ಕಂಡ ಘಳಿಗೆ!

ಜಲಪಾತ

ತನ್ನ ಇನಿಯನ

ಅಗಲಿಕೆಯ ನೋವನ್ನು..

ಸಹಿಸಲಾರದೆಯೇ…

ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾಳೆ.

ಮೌನ

ನಾನು ಬರೆದ

ನೂರಾರು ಪತ್ರಗಳಿಗೆ

ಇದೇ

ಅವನ ಉತ್ತರ!!!!

ಸ್ವಾತಿಮುತ್ತು

ಬರೆದ ಮುತ್ತುಗಳಿಗೆಲ್ಲಾ

ಎದೆಯ ಚಿಪ್ಪಿನೊಳಗೆ

ಸ್ಥಳಾವಕಾಶವಿಲ್ಲವೆಂದು

ನಿಶೇದಾಜ್ಞೆ ಜಾರಿ ಮಾಡಿ

entranceನಲ್ಲೇ ಜರಡಿ

ಹಿಡಿದು ನಿಂತಿದ್ದಾಳೆ.

ನೆರಳು-ಮೌನಗಳ ನಡುವೆ ನಾಳೆಯ ಪರದೆಯಾಟ

ನವೆಂಬರ್ 19, 2009

rnfll

 

ನೆರಳು
ನಸು ಬೆಳಕಿನಲ್ಲಿ
ಜೊತೆಗೂಡಿ ವಯ್ಯಾರವಾಗಿ ನಡೆದವಳು
ಕಡುಗತ್ತಲಿನಲ್ಲಿ
ಹಿಂತಿರುಗಿಯೂ ನೋಡದೆ ಹೊರಟು ಹೋದಳವಳು.

ಮೌನ
ತಿಳಿಯದೆ ಮಾಡಿದ ತಪ್ಪಿಗೆ
ಅವನು ನೀಡಿರುವ ಉಡುಗೊರೆ

ನಾಳೆ
ನೆನಪುಗಳ ಆಗರ
ಕನಸುಗಳ ಮಂದಿರ

ಪರದೆಯಾಟ
ನೇಸರನು ಭೂಮಿಗೆಲ್ಲಾ
ತನ್ನ ಬೆಳಕಿನ ಅಭಿಷೇಕವ ಮಾಡುವಾಗ
ಚುಕ್ಕಿಗಳ ಮೈ ಮೇಲೆ
ತೆಳುವಾದ ಹೊದಿಕೆಯನ್ನು ಹೊದಿಸಿದ್ದ,
ಅಭಿಷೇಕದ ನಂತರ ಭೂಮಿಯು
ಬೆಳದಿಂಗಳ ಬೆಳಕಿನಲ್ಲಿ
ಹೊಳೆಯುವುದನ್ನು ನೋಡಲೆಂದೇ
ಚುಕ್ಕಿಗಳ ಮೇಲಿನ ಹೊದಿಕೆಯ ಸರಿಸಿದ.

ಕರಗಿ ಹೋದದ್ದು

ನವೆಂಬರ್ 3, 2009

CAI10VSN

ನಾಚಿಕೆ
ಅಂದು ನಿನ್ನ ಮೊಗದಲ್ಲಿ
ನಗುವ ಕಂಡು
ಚಂದಿರನು ಸಾಗರದಲ್ಲಿ
ಕರಗಿಹೋದನು.

ಅಂತ್ಯ
ನೀನು ಹೋದ ಮರುಘಳಿಗೆಯೇ
ನನ್ನ ಪೆನ್ನು-ಪೇಪರ್
ಮೌನ ರಾಗದಲ್ಲಿ ಕರಗಿ ಹೋಯಿತು.

ಕುರುಡು
ಅವನು ಅಷ್ಟೂ ವಸಂತಗಳು
ನನ್ನೊಡನಿದ್ದನೆಂಬ ಭ್ರಮೆಯಲ್ಲಿ ಅವಿತು
ಅವನೊಡನೆ ಸುಂದರ ಭವಿಷ್ಯವ ಕೆತ್ತುವುದು.

ಮುಗ್ಧತೆ
ತನ್ನ ಪ್ರೀತಿಯ ತಾತ
ಸತ್ತಿದ್ದರೂ…
ಎಂದಿನಂತೆ ಅಂಗಳದಲ್ಲಿ ಆಡುತ್ತಿದ್ದಾರೆ
ಮೊಮ್ಮಕ್ಕಳು.

ಮೌನ ಸಂಭಾಷಣೆ
ಕಲ-ರವ ಸದ್ದಿನೊಡನೆ
ಝೇಂಕರಿಸುತ ಹರಿವ ಝರಿಯನ್ನು
ನೋಡುತ್ತಲೇ…..
ಅವಳು ತನ್ನ ನೋವನ್ನೆಲ್ಲಾ
ಮರೆತಬಿಟ್ಟಳು.

ಅವನ ಪತ್ರ
ಎಷ್ಟು ಕಾಡಿ ಬೇಡಿದರೂ
ಬರೆಯದವ ನೀನು…
ನನ್ನ ಮದುವೆಯ ದಿನ
ಬರೆದು ಕಳಿಸಿದ್ದಾದರೂ ಏತಕೆ?

39-melt-down-gianni-tozzi-uk-thumb